ಎಸ್‌ಪಿಜಿ ಕಾಯ್ದೆ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ: ಕಾಂಗ್ರೆಸ್ ಸಭಾತ್ಯಾಗ

Update: 2019-12-03 18:27 GMT

ಹೊಸದಿಲ್ಲಿ, ಡಿ. 3: ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿದ್ದು, ತಿದ್ದುಪಡಿಯನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ ಸಭಾತ್ಯಾಗ ಮಾಡಿದೆ.

ಎಸ್‌ಪಿಜಿ ತಿದ್ದುಪಡಿ ಮಸೂದೆ ದ್ವೇಷ ರಾಜಕೀಯದ ಕ್ರಮ ಎಂಬ ಆರೋಪವನ್ನು ನಿರಾಕರಿಸಿರುವ ಗೃಹಸಚಿವ ಅಮಿತ್ ಶಾ, ಸರಕಾರ ಕೇವಲ ಗಾಂಧಿ ಕುಟುಂಬದ ಬಗ್ಗೆ ಮಾತ್ರವಲ್ಲ, ಎಲ್ಲಾ 130 ಕೋಟಿ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ಹೊಂದಿದೆ ಎಂದರು. ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಈ ಹಿಂದೆ ಹಲವು ದ್ವೇಷ ಸಾಧನೆಯ ನಿರ್ಧಾರಗಳನ್ನು ಕೈಗೊಂಡಿತ್ತು.

ಆದರೆ ಬಿಜೆಪಿ ಈ ರೀತಿ ಮಾಡುತ್ತಿಲ್ಲ ಎಂದರು. ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್, ಐಕೆ ಗುಜ್ರಾಲ್, ಚಂದ್ರಶೇಖರ್, ಎಚ್‌ಡಿ ದೇವೇಗೌಡ, ಮನಮೋಹನ್ ಸಿಂಗ್ ಮುಂತಾದವರ ಎಸ್‌ಪಿಜಿ ಭದ್ರತೆ ಹಿಂಪಡೆದಾಗ ಯಾವುದೇ ಚರ್ಚೆ ನಡೆದಿಲ್ಲ. ಭದ್ರತಾ ವ್ಯವಸ್ಥೆಯನ್ನು ಪ್ರತಿಷ್ಠೆಯ ಸಂಕೇತವೆಂದು ವ್ಯಕ್ತಿಗಳು ಭಾವಿಸಬಾರದು. ವಿಶೇಷ ಭದ್ರತಾ ವ್ಯವಸ್ಥೆಯನ್ನು ವಿಶೇಷವಾಗಿ ಪ್ರಧಾನಿಗಳಿಗೆಂದೇ ರೂಪಿಸಲಾಗಿದ್ದು ಇದರ ಸೌಲಭ್ಯವನ್ನು ಇತರ ವ್ಯಕ್ತಿಗಳು ಪಡೆಯಬಾರದು . ಆಯಾ ವ್ಯಕ್ತಿಗಳಿಗೆ ಎದುರಾಗಿರುವ ಅಪಾಯವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸರಕಾರ ಭದ್ರತಾ ವ್ಯವಸ್ಥೆಯ ಬಗ್ಗೆ ನಿರ್ಧರಿಸಲಿದೆ ಎಂದು ಶಾ ಹೇಳಿದರು.

 ಎಸ್‌ಪಿಜಿ ಕಾಯ್ದೆಯ ತಿದ್ದುಪಡಿಯು ನರೇಂದ್ರ ಮೋದಿಯ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಯಾಕೆಂದರೆ ಐದು ವರ್ಷದ ಅವಧಿ ಮುಗಿದ ಬಳಿಕ ಅವರ ಎಸ್‌ಪಿಜಿ ಭದ್ರತೆಯನ್ನೂ ವಾಪಾಸು ಪಡೆಯಲಾಗುವುದು ಎಂದು ಶಾ ಹೇಳಿದರು.

 ಪ್ರಿಯಾಂಕಾ ಗಾಂಧಿ ವಾಧ್ರಾರ ನಿವಾಸದಲ್ಲಿ ಆದ ಭದ್ರತಾ ವ್ಯವಸ್ಥೆಯ ಲೋಪದ ಬಗ್ಗೆ ಉತ್ತರಿಸಿದ ಶಾ, ಪ್ರಿಯಾಂಕಾರನ್ನು ಭೇಟಿಯಾಗಲು ಸಹೋದರ ರಾಹುಲ್ ಗಾಂಧಿ ಕಪ್ಪುಬಣ್ಣದ ಟಾಟಾ ಸಫಾರಿ ಕಾರಿನಲ್ಲಿ ಆಗಮಿಸಲಿದ್ದಾರೆ ಎಂದು ಭದ್ರತಾ ಸಿಬಂದಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ ಉತ್ತರಪ್ರದೇಶದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಇದೇ ಬಣ್ಣದ ಕಾರಿನಲ್ಲಿ ಆಗಮಿಸಿದ್ದು ಅವರನ್ನು ಮನೆಯೊಳಗೆ ಬಿಡಲಾಗಿದೆ ಎಂದು ಭದ್ರತಾ ಸಿಬಂದಿ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದ್ದು ಮೂವರು ಸಿಬಂದಿಗಳನ್ನು ವಜಾ ಮಾಡಲಾಗಿದೆ ಎಂದು ತಿಳಿಸಿದರು.

ಗಾಂಧಿ ಕುಟುಂಬದ ಮೂವರಿಗೆ ಆ್ಯಂಬುಲೆನ್ಸ್ ಸಹಿತ ಝಡ್ ಪ್ಲಸ್ ಶ್ರೇಣಿಯ ಭದ್ರತೆ ಒದಗಿಸಲಾಗಿದ್ದು , ಭದ್ರತೆಗೆ ನಿಯೋಜಿಸಲಾಗಿರುವ ಸಿಬಂದಿಗಳು ಈ ಹಿಂದೆ ಎಸ್‌ಪಿಜಿಯಲ್ಲಿದ್ದರು ಎಂದು ಶಾ ವಿವರಿಸಿದರು. ಬಿಜೆಪಿ ರಾಜಕೀಯ ಸೇಡಿನ ಕ್ರಮ ಕೈಗೊಳ್ಳುತ್ತಿದೆ ಎಂಬ ಎಡಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾ, ಕೇರಳದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್‌ನ 120 ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ ಎಂದರು.

ಶಾ ಉತ್ತರದ ಬಗ್ಗೆ ಅಸಮಾಧಾನ ಸೂಚಿಸಿದ ಕಾಂಗ್ರೆಸ್ ಪಕ್ಷ ಸಭಾತ್ಯಾಗ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News