ಬಿಜೆಪಿ ಆಡಳಿತದ ಈ ರಾಜ್ಯದಲ್ಲಿ 2014ರಿಂದ ಪ್ರತಿ ದಿನ ಕನಿಷ್ಠ ಒಂದು ಅತ್ಯಾಚಾರ!

Update: 2019-12-04 12:16 GMT

ಹೊಸದಿಲ್ಲಿ: ಗುಜರಾತ್ ಮಹಿಳೆಯರ ಪಾಲಿಗೆ ಅತ್ಯಂತ ಸುರಕ್ಷಿತ ರಾಜ್ಯ ಎಂದು ಹೇಳಲಾಗುತ್ತಿದ್ದರೂ ರಾಜ್ಯ ಕ್ರೈಂ ರೆಕಾರ್ಡ್ಸ್ ಬ್ಯುರೋ ಅಂಕಿಅಂಶಗಳು ಮಾತ್ರ ವ್ಯತಿರಿಕ್ತ ಮಾಹಿತಿ ನೀಡುತ್ತಿವೆ. ರಾಜ್ಯದಲ್ಲಿ 2014ರಿಂದ ಪ್ರತಿ ದಿನ ಕನಿಷ್ಠ ಒಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ ಎಂದು ಬ್ಯುರೋದಲ್ಲಿನ ಮಾಹಿತಿಯಿಂದ ತಿಳಿದು ಬರುತ್ತದೆ.

ಇದೇ ಅವಧಿಯಲ್ಲಿ ರಾಜ್ಯದಲ್ಲಿ ಪ್ರತಿ ವರ್ಷ 1,200 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷ ರಾಜ್ಯದಲ್ಲಿ ಗರಿಷ್ಠ 573 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2014ರಲ್ಲಿ ಈ ಸಂಖ್ಯೆ 424 ಆಗಿತ್ತು. ಈ ವರ್ಷದ ಸೆಪ್ಟೆಂಬರ್ ತಿಂಗಳ ತನಕ ರಾಜ್ಯದಲ್ಲಿ 400 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಸೆಪ್ಟೆಂಬರ್ ತನಕ 447 ಪ್ರಕರಣಗಳು ವರದಿಯಾಗಿದ್ದವು. 2014 ಹಾಗೂ 2019 ಸೆಪ್ಟೆಂಬರ್ ನಡುವೆ ರಾಜ್ಯದಲ್ಲಿ ಒಟ್ಟು 2,775 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2015 ಹಾಗೂ ಸೆಪ್ಟೆಂಬರ್ 2019 ತನಕ ಅಹ್ಮದಾಬಾದ್ ನಗರದಲ್ಲಿ ಗರಿಷ್ಠ 291 ಅತ್ಯಾಚಾರ ಪ್ರಕರಣಗಳು ನಡೆದಿವೆ. 2015ರಲ್ಲಿ ಅಹ್ಮದಾಬಾದ್ ನಗರದಿಂದ ವರದಿಯಾದ ಅತ್ಯಾಚಾರ ಪ್ರಕರಣಗಳು 45 ಆಗಿದ್ದರೆ 2018ರಲ್ಲಿ ಈ ಸಂಖ್ಯೆ 70ಕ್ಕೇರಿತ್ತು. ಈ ವರ್ಷ ಸೆಪ್ಟೆಂಬರ್ ತನಕ 54 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಸೂರತ್ ನಗರದಲ್ಲಿ ಎರಡನೇ ಅತಿ ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು 2015ರಿಂದ ಸೆಪ್ಟೆಂಬರ್ 2019 ತನಕ 214 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News