ಬಿಜೆಪಿಗೆ ದೇಣಿಗೆ ನೀಡಿದ್ದ ಕಂಪನಿಗಳಿಗೆ ಒಲಿದ ಬುಲೆಟ್ ರೈಲು ಯೋಜನೆಯ ಟೆಂಡರ್‌ಗಳು !

Update: 2019-12-04 13:50 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.4: ತನ್ನ ಸರಕಾರವು ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಪುನರ್ ‌ಪರಿಶೀಲಿಸಲಿದೆ ಎಂದು ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೇರಿದ ಬೆನ್ನಲ್ಲೇ ಘೋಷಿಸಿದ್ದು, ಇದು ಭಾರತ-ಜಪಾನ್ ಜಂಟಿ ಪ್ರವರ್ತನೆಯ ಈ ಯೋಜನೆಯಡಿ ನೀಡಲಾಗಿರುವ ಟೆಂಡರ್‌ಗಳ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಕನಿಷ್ಠ ಮೂರು ಟೆಂಡರ್‌ಗಳು ಈ ಹಿಂದೆ ಬಿಜೆಪಿಗೆ ದೇಣಿಗೆಗಳನ್ನು ನೀಡಿದ್ದ ಸಂಸ್ಥೆಗಳ ಪಾಲಾಗಿರುವುದು ಸುದ್ದಿ ಜಾಲತಾಣ ‘ದಿ ಕ್ವಿಂಟ್’ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.

ಉದಾಹರಣೆಗೆ ವಡೋದರಾ ನಿಲ್ದಾಣದ ಬಳಿಯ ಪಶ್ಚಿಮ ರೈಲ್ವೆಯ ಸಂಕೀರ್ಣದಲ್ಲಿ ಕಂಪ್ಯೂಟರೀಕೃತ ರಿಝರ್ವೇಶನ್ ಸಿಸ್ಟಮ್‌ಗಾಗಿ ಜಾಗವನ್ನು ಗುಜರಾತಿನ ಕ್ಯೂಬ್ ಕನ್‌ಸ್ಟ್ರಕ್ಷನ್ ಇಂಜಿನಿಯರಿಂಗ್ ಲಿ.ಗೆ ಲೀಸ್‌ನಲ್ಲಿ ನೀಡಲಾಗಿದೆ. ಈ ಕಂಪನಿಯು ಬಿಜೆಪಿಗೆ ದೇಣಿಗೆಗಳನ್ನು ನೀಡಿತ್ತು.

ಬಿಜೆಪಿಯು ಬಿಡುಗಡೆಗೊಳಿಸಿರುವ ದೇಣಿಗೆಗಳ ವಿವರಗಳಂತೆ ಈ ಕಂಪನಿಯು 2012-13ರಲ್ಲಿ ಎರಡು ಸಲ ಮತ್ತು 2017-18ರಲ್ಲಿ ಒಂದು ಸಲ,ಹೀಗೆ ಮೂರು ಪ್ರತ್ಯೇಕ ವಹಿವಾಟುಗಳಲ್ಲಿ ಒಟ್ಟು 55 ಲಕ್ಷ ರೂ.ಗಳನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಿದೆ.

 ಈ ಕಂಪನಿಯು ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮ, ಗುಜರಾತ್ ವಿಧಿವಿಜ್ಞಾನ ವಿವಿ, ಗುಜರಾತ್ ನಗರಾಭಿವೃದ್ಧಿ ನಿಗಮದಂತಹ ಹಲವಾರು ಸರಕಾರಿ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಒಎನ್‌ಜಿಸಿ,ಬಿಎಸ್‌ಎಫ್ ಮತ್ತು ಇಸ್ರೋದಂತಹ ಕೇಂದ್ರ ಸರಕಾರದ ಸಂಸ್ಥೆಗಳ ಟೆಂಡರ್ ‌ಗಳನ್ನೂ ಕ್ಯೂಬ್ ಕನ್‌ಸ್ಟ್ರಕ್ಷನ್ಸ್‌ಗೆ ನೀಡಲಾಗಿದೆ. ತನ್ನ ಯೋಜನೆಗಳನ್ನು ಹಿರಿಯ ಬಿಜೆಪಿ ನಾಯಕರು ಉದ್ಘಾಟಿಸುತ್ತಿರುವ ಚಿತ್ರಗಳನ್ನೂ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಅಂದ ಹಾಗೆ ಕಂಪನಿಯ ಒಂದು ಯೋಜನೆಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಿದ್ದರು.

ಕುತೂಹಲದ ವಿಷಯವೆಂದರೆ ಕಂಪನಿಯ ಯೋಜನೆಯೊಂದನ್ನು ಹಾಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಉದ್ಘಾಟಿಸಿದ್ದರು ಮತ್ತು ಆ ಸಂದರ್ಭದಲ್ಲಿ ಅವರು ಯಾವುದೇ ಹುದ್ದೆಯಲ್ಲಿರಲಿಲ್ಲ. ಈ ಯೋಜನೆಯು ಗುಜರಾತ್ ಸರಕಾರದ್ದಾಗಿತ್ತು.

 ಬಿಜೆಪಿಗೆ ದೇಣಿಗೆಯನ್ನು ನೀಡಿರುವ ಮತ್ತು ಬುಲೆಟ್ ರೈಲು ಅಥವಾ ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲ್ವೆ ಯೋಜನೆಯಡಿ ಟೆಂಡರ್ ‌ಗಳನ್ನು ಪಡೆದಿರುವ ಇತರ ಎರಡು ಕಂಪನಿಗಳಿವೆ. ಗುಜರಾತ್ ಮೂಲದ ಕೆ.ಆರ್.ಸವಾನಿ ಎಂಬ ಗುತ್ತಿಗೆ ಸಂಸ್ಥೆಗೆ ಯೋಜನೆಗೆ ಸಂಬಂಧಿಸಿದಂತೆ ವಡೋದರಾ ನಿಲ್ದಾಣದಲ್ಲಿ ವಿವಿಧ ಕಟ್ಟಡಗಳ ನಿರ್ಮಾಣಕ್ಕಾಗಿ ಟೆಂಡರ್‌ನ್ನು ನೀಡಲಾಗಿದೆ. ಈ ಸಂಸ್ಥೆಯು 2012-13ರಲ್ಲಿ ಬಿಜೆಪಿಗೆ ಎರಡು ಲ.ರೂ.ದೇಣಿಗೆಯನ್ನು ಪಾವತಿಸಿತ್ತು.

ಇನ್ನೋರ್ವ ಗುತ್ತಿಗೆದಾರ ಧನಜಿ ಕೆ.ಪಟೇಲ್ 2017-18ರಲ್ಲಿ ಬಿಜೆಪಿಗೆ 2.5 ಲ.ರೂ.ದೇಣಿಗೆ ನೀಡಿದ್ದು,ಅವರ ಸಂಸ್ಥೆಗೆ ವಾತ್ವಾದಿಂದ ಸಾಬರಮತಿ ಡಿ-ಕ್ಯಾಬಿನ್ ನಡುವಿನ ವಿವಿಧ ಕಾಮಗಾರಿಗಳ ಟೆಂಡರ್‌ನ್ನು ಒಪ್ಪಿಸಲಾಗಿದೆ.

ಇನ್ನೊಂದು ಗುಜರಾತ್ ಮೂಲದ ಕಂಪನಿ ರಚನಾ ಎಂಟರ್‌ಪ್ರೈಸಸ್‌ಗೆ ವಡೋದರಾ ಬಳಿಯ ಕರಾಚಿಯಾ ಯಾರ್ಡ್‌ನಲ್ಲಿ ವಿದ್ಯುತ್ ಕಾಮಗಾರಿಗಳಿಗೆ ಟೆಂಡರ್ ನೀಡಲಾಗಿದೆ. ಇದೇ ಹೆಸರಿನ ಗುಜರಾತ್ ಮೂಲದ ಕಂಪನಿಯೊಂದು ಹಲವಾರು ಸಲ ಬಿಜೆಪಿಗೆ ದೇಣಿಗೆಗಳನ್ನು ನೀಡಿದೆ. ಆದರೆ ಇವೆರಡು ಕಂಪನಿಗಳು ಒಂದೇ ಆಗಿವೆಯೇ ಎನ್ನುವುದು ದೃಢಪಟ್ಟಿಲ್ಲ.

ಇವು ಬಿಜೆಪಿಯು ಘೋಷಿಸಿರುವ ಆಯ್ದ ಪಟ್ಟಿಯಲ್ಲಿರುವ ದೇಣಿಗೆಗಳು ಮಾತ್ರ ಮತ್ತು ಈ ಪಟ್ಟಿಯಲ್ಲಿ ಅದು ಸ್ವೀಕರಿಸಿರುವ ಎಲ್ಲ ದೇಣಿಗೆಗಳ ವಿವರಗಳಿಲ್ಲ.

2017-18ರಲ್ಲಿ ಬಿಜೆಪಿಯ ಆದಾಯದ ಶೇ.54ರಷ್ಟು ಭಾಗ ‘ಅಪರಿಚಿತ ’ಮೂಲಗಳಿಂದ ಬಂದಿದ್ದವು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಹೇಳಿದೆ. ಪಕ್ಷವು ಇಂತಹ ಮೂಲಗಳ ಮೂಲಕ 550 ಕೋ.ರೂ.ಗಳಿಗೂ ಹೆಚ್ಚಿನ ದೇಣಿಗೆಗಳನ್ನು ಸ್ವೀಕರಿಸಿದೆ. ಇವೆಲ್ಲ ದೇಣಿಗೆಗಳು 20,000 ರೂ.ಗಿಂತ ಕಡಿಮೆ ಮೊತ್ತದ್ದಾಗಿದ್ದು,

ನಿಯಮಾನುಸಾರ ಇವುಗಳ ವಿವರಗಳನ್ನು ಪಕ್ಷವು ಘೋಷಿಸಬೇಕಿಲ್ಲ. ಹೀಗಾಗಿ ಬುಲೆಟ್ ರೈಲು ಯೋಜನೆಯ ಟೆಂಡರ್‌ಗಳನ್ನು ಪಡೆದಿರುವ ಕಂಪನಿಗಳು ಈ ಅಪರಿಚಿತ ಮೂಲಗಳ ಗುಂಪಿನಲ್ಲಿವೆಯೇ ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ದಿ ಕ್ವಿಂಟ್ ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News