ಉನ್ನಾವೊ ಅತ್ಯಾಚಾರ ಪ್ರಕರಣದ ವಿಚಾರಣೆ ವಿಳಂಬ : ಪ್ರಿಯಾಂಕಾ ಗಾಂಧಿ ಟೀಕೆ

Update: 2019-12-04 15:36 GMT

ಲಕ್ನೊ, ಡಿ.4: ಉತ್ತರಪ್ರದೇಶದ ಉನ್ನಾವೊದಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು 45 ದಿನದೊಳಗೆ ಮುಗಿಸಬೇಕೆಂದು ಸುಪ್ರೀಂಕೋರ್ಟ್ ಗಡುವು ನೀಡಿದೆ. ಆದರೆ 80 ದಿನ ಕಳೆದರೂ ವಿಚಾರಣೆ ಪೂರ್ಣಗೊಂಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.

ಉತ್ತರಪ್ರದೇಶದ ಶಾಸಕ ಹಾಗೂ ಬಿಜೆಪಿಯ ಮಾಜಿ ಮುಖಂಡ ಕುಲ್‌ ದೀಪ್ ಸೆಂಗಾರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಉತ್ತರಪ್ರದೇಶವು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ದುಷ್ಕರ್ಮಿಗಳ ವಿರುದ್ಧ ಪ್ರಕರಣ ಕೂಡಾ ದಾಖಲಾಗುವುದಿಲ್ಲ. ಒಂದು ವೇಳೆ ಪ್ರಭಾವೀ ಬಿಜೆಪಿ ಶಾಸಕ ಆರೋಪಿಯಾಗಿರುವ ಪ್ರಕರಣವಾಗಿದ್ದರೆ ಮೊದಲು ಎಫ್‌ಐಆರ್ ದಾಖಲಿಸಲು ವಿಳಂಬಿಸಲಾಗುತ್ತದೆ. ಬಳಿಕ ಬಂಧಿಸಲು ವಿಳಂಬಿಸಲಾಗುತ್ತದೆ. ನಂತರ ವಿಚಾರಣೆಯೂ ವಿಳಂಬವಾಗಿ ನಡೆಯುತ್ತದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಪ್ರತಿದಿನ ನಡೆಸಿ 45 ದಿನದೊಳಗೆ ಪೂರ್ಣಗೊಳಿಸಬೇಕೆಂದು ಆಗಸ್ಟ್ 1ರಂದು ಸುಪ್ರೀಂಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು. ಆದರೆ ಗಡುವನ್ನು ವಿಸ್ತರಿಸಬೇಕೆಂದು ಸಿಬಿಐ ಪದೇಪದೇ ಕೋರಿದ ಹಿನ್ನೆಲೆಯಲ್ಲಿ, ಅಗತ್ಯಬಿದ್ದರೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಗಡುವು ವಿಸ್ತರಣೆಗೆ ಕೋರಿಕೆ ಸಲ್ಲಿಸಬಹುದು ಎಂದು ಸೆ.6ರಂದು ಸುಪ್ರೀಂಕೋರ್ಟ್ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News