ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ಪಿ.ಚಿದಂಬರಂ
Update: 2019-12-05 21:59 IST
ಹೊಸದಿಲ್ಲಿ, ಡಿ. 5: ಐಎನ್‌ಎಕ್ಸ್ ಮೀಡಿಯ ಪ್ರಕರಣದಲ್ಲಿ ಜಾಮೀನು ದೊರಕಿದ ಬಳಿಕ ಬುಧವಾರ ದಿಲ್ಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಮಾಜಿ ಹಣಕಾಸು ಸಚಿವ ಪಿ . ಚಿದಂಬರಂ ಗುರುವಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡರು.
ಜೈಲಿಂದ ಬಿಡುಗಡೆಯಾಗಿರುವುದು ಹಾಗೂ 106 ದಿನಗಳ ಬಳಿಕ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಿರುವುದು ನನಗೆ ಸಂತಸ ತಂದಿದೆ ಎಂದು ಚಿದಂಬರಂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಹೇಳಿದರು.
ಚಿದಂಬರಂಗೆ ಜಾಮೀನು ನಿರಾಕರಿಸಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಅಲ್ಲದೆ, ಪ್ರಕರಣದ ಪುರಾವೆಗಳನ್ನು ತಿರುಚಬಾರದು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದು ನಿರ್ದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಸಂದರ್ಶನ ಹಾಗೂ ಸಾರ್ವಜನಿಕ ಹೇಳಿಕೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಚಿದಂಬರಂಗೆ ನಿರ್ದೇಶನ ನೀಡಿದೆ.