ನವಜಾತ ಶಿಶುವನ್ನು 17ನೇ ಮಹಡಿಯಿಂದ ಎಸೆದ ತಾಯಿ!

Update: 2019-12-06 03:57 GMT

ಮುಂಬೈ, ಡಿ.6: ಜನ್ಮ ನೀಡಿದ ಒಂದು ಗಂಟೆಯಲ್ಲೇ ಮಹಿಳೆಯೊಬ್ಬರು ನವಜಾತ ಹೆಣ್ಣುಮಗುವನ್ನು 23 ಮಹಡಿ ಕಟ್ಟಡದ 17ನೇ ಮಹಡಿಯಿಂದ ಕೆಳಕ್ಕೆ ಎಸೆದು ಸಾಯಿಸಿದ ಘಟನೆ ಮುಂಬೈನ ಕಂಡಿವಲಿ ಉಪನಗರದಲ್ಲಿ ನಡೆದಿದೆ.

ಮುಂಬೈನ ಕೊಳಗೇರಿ ಪುನರ್ವಸತಿ ಪ್ರಾಧಿಕಾರ ಯೋಜನೆಯಡಿ ಲಾಲ್‌ಜಿ ಪಡ ಪ್ರದೇಶದಲ್ಲಿ ನಿರ್ಮಿಸಿದ ಗಗನಚುಂಬಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

22 ವರ್ಷದ ಮಹಿಳೆ ಮೇಲೆ ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ದ್ರವಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಪಕ್ಕದ ಆಸ್ಪತ್ರೆಗೆ ತರುವ ವೇಳೆಗೆ ಶಿಶು ಮೃತಪಟ್ಟಿತ್ತು. ಗಂಡನ ಪ್ರೇಮ ವ್ಯವಹಾರ ಮತ್ತು ಆರ್ಥಿಕ ಅಡಚಣೆಯ ಕಾರಣದಿಂದ ಹತಾಶರಾಗಿ ಮಹಿಳೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಮಗು ಹುಟ್ಟಿ ಒಂದು ಗಂಟೆಯಾಗಿರಬಹುದು. ಹೊಕ್ಕುಳಬಳ್ಳಿ ಇನ್ನೂ ನೇತಾಡುತ್ತಿತ್ತು ಎಂದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಮಗುವಿನ ಮೃತದೇಹವನ್ನು ಪತ್ತೆ ಮಾಡಿದ ಕಾವಲುಗಾರ ಮೊದಲು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿದ್ದಾನೆ.

ಮನೆಯಲ್ಲೇ ಹೆರಿಗೆಯಾಗಿದ್ದು, ಅಪರಾಹ್ನ 3 ಗಂಟೆ ವೇಳೆಗೆ ಜೈ ಭಾರತ್ ಸೊಸೈಟಿಯ ಬಿ ವಿಂಗ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಮಹಿಳೆ 25 ವರ್ಷದ ಪತಿ, ಅತ್ತೆ ಹಾಗೂ ಅತ್ತಿಗೆ ಜತೆ ವಾಸವಿದ್ದಳು. ಪೋಷಕರು ಅದೇ ಕಟ್ಟಡದ 22ನೇ ಮಹಡಿಯಲ್ಲಿದ್ದಾರೆ. ಈ ದಂಪತಿಗೆ ಒಂದು ವರ್ಷದ ಗಂಡುಮಗು ಹಾಗೂ ಎರಡು ವರ್ಷದ ಹೆಣ್ಣು ಮಗು ಇದೆ. ಗಂಡ ಹಾಗೂ ಅತ್ತೆ ಬೇರೆ ಕೆಲಸದಲ್ಲಿದ್ದಾಗ ಮಹಿಳೆ ಮಗುವನ್ನು ಕೆಳಕ್ಕೆ ಎಸೆದಿದ್ದಾಳೆ.

ಬಾತ್‌ರೂಂಗೆ ಹೋಗಿದ್ದಾಗ ಮಹಿಳೆಗೆ ಯಾರ ಸಹಾಯವೂ ಇಲ್ಲದೇ ಅಲ್ಲೇ ಹೆರಿಗೆಯಾಗಿದೆ. ಅಲ್ಲಿಂದಲೇ ಕಿಟಕಿ ಮೂಲಕ ಮಗುವನ್ನು ಎಸೆದಿದ್ದಾಗಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News