ತಮಿಳುನಾಡು: ಸ್ಥಳೀಯ ಸಂಸ್ಥೆ ಚುನಾವಣೆಗೆ ಸುಪ್ರೀಂ ತಡೆ

Update: 2019-12-06 13:57 GMT

ಹೊಸದಿಲ್ಲಿ, ಡಿ.6: ತಮಿಳುನಾಡಿನಲ್ಲಿ ಹೊಸದಾಗಿ ರಚಿಸಲಾಗಿರುವ 9 ಜಿಲ್ಲೆಗಳಲ್ಲಿ ನಡೆಸಲು ಉದ್ದೇಶಿಸಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಹೊಸ ಜಿಲ್ಲೆಗಳ ಗಡಿ ಗುರುತಿಸುವಿಕೆ, ಮಹಿಳೆಯರು ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿ ಮುಂತಾದ ಕಾನೂನುಬದ್ಧ ಔಪಚಾರಿಕತೆ ಪೂರ್ಣಗೊಳ್ಳಲು ಇನ್ನಷ್ಟು ಸಮಯದ ಅಗತ್ಯವಿದೆ ಎಂಬ ತಮಿಳುನಾಡು ಸರಕಾರದ ಹೇಳಿಕೆಯನ್ನು ಪರಿಗಣಿಸಿದ ಸಿಜೆಐ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, 9 ಜಿಲ್ಲೆಗಳನ್ನು ಹೊರತುಪಡಿಸಿ ಇತರೆಡೆ ಚುನಾವಣೆ ನಡೆಸುವುದಕ್ಕೆ ಕಾನೂನು ಅಡಚಣೆಯಿಲ್ಲ ಎಂದು ತಿಳಿಸಿದೆ. ಅಲ್ಲದೆ ಗಡಿ ಗುರುತಿಸುವಿಕೆ ಹಾಗೂ ಇತರ ಕಾರ್ಯಗಳನ್ನು 4 ತಿಂಗಳೊಳಗೆ ಪೂರ್ಣಗೊಳಿಸುವಂತೆ ತಮಿಳುನಾಡು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

ಹೊಸ ಜಿಲ್ಲೆಗಳಾದ ಕಾಂಚೀಪುರಂ, ಚೆಂಗಲ್‌ಪಟ್ಟು, ವೆಲ್ಲೋರ್, ತಿರುಪತ್ತೂರ್, ರಾಣಿಪೇಟ್, ವಿಲ್ಲುಪುರಂ, ಕಲ್ಲಕುರುಚ್ಚಿ, ತಿರುನೆಲ್ವೇಲಿ ಮತ್ತು ತೆಂಕಾಸಿಯನ್ನು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಿಗದಿತ ಅವಧಿಯಲ್ಲೇ ಚುನಾವಣೆ ನಡೆಯುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್ 27 ಹಾಗೂ 30ರಂದು ಎರಡು ಹಂತಗಳಲ್ಲಿ ನಡೆಯುತ್ತದೆ ಎಂದು ಸೋಮವಾರ ರಾಜ್ಯದ ಚುನಾವಣಾ ಆಯೋಗ ಘೋಷಿಸಿತ್ತು. ಆದರೆ , ಚುನಾವಣೆ ಘೋಷಿಸುವ ಮುನ್ನ ನೂತನ ರಾಜ್ಯಗಳ ಗಡಿ ಗುರುತಿಸುವಿಕೆ, ಮೀಸಲಾತಿ ಮತ್ತಿತರ ಔಪಚಾರಿಕತೆ ಪೂರ್ಣಗೊಳಿಸುವಂತೆ ಸೂಚಿಸುವಂತೆ ಕೋರಿ ಡಿಎಂಕೆ ಪಕ್ಷ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು. ರಾಜ್ಯ ಸರಕಾರ ನೂತನ ಜಿಲ್ಲೆಗಳ ಗಡಿ ಗುರುತಿಸುವ ಪ್ರಕ್ರಿಯೆಯನ್ನೇ ಆರಂಭಿಸದೆ ತರಾತುರಿಯಿಂದ ಚುನಾವಣೆ ನಡೆಸುತ್ತಿದೆ ಎಂದು ಡಿಎಂಕೆ ಆಕ್ಷೇಪಿಸಿತ್ತು.

ಗುರುವಾರ ಅರ್ಜಿಯ ವಿಚಾರಣೆ ಸಂದರ್ಭ ವಾದ ಮಂಡಿಸಿದ ರಾಜ್ಯ ಸರಕಾರದ ಪರ ವಕೀಲರು, ಒಮ್ಮೆ ಚುನಾವಣಾ ಆಯೋಗ ಚುನಾವಣೆ ಘೋಷಿಸಿದರೆ ಬಳಿಕ ಅದಕ್ಕೆ ಯಾವುದೇ ನ್ಯಾಯಾಲಯ ತಡೆಯಾಜ್ಞೆ ನೀಡುವಂತಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಜಿಲ್ಲೆಗಳನ್ನು ವಿಭಜಿಸಿದ ಬಳಿಕ ಗಡಿ ಗುರುತಿಸಲೇಬೇಕು. ಈ ಪ್ರಕ್ರಿಯೆಗಾಗಿ ಚುನಾವಣೆಯನ್ನೇ ಮುಂದೂಡಬೇಕಾದರೂ ವಿಧಿಯಿಲ್ಲ ಎಂದು ತಿಳಿಸಿ, ಜಿಲ್ಲೆಗಳ ವಿಭಜನೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು ಅಥವಾ 9 ಜಿಲ್ಲೆಗಳ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ತಡೆಹಿಡಿಯುವುದು- ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸರಕಾರಕ್ಕೆ ಸೂಚಿಸಿತು.

9 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ತಡೆಹಿಡಿಯಲು ಬಯಸುವುದಾಗಿ ಸರಕಾರದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News