ಮೋದಿ ಪ್ರಧಾನಿಯಾದ ಬಳಿಕ ಕನಿಷ್ಟಮಟ್ಟಕ್ಕೆ ಕುಸಿದ ಗ್ರಾಹಕರ ವಿಶ್ವಾಸ: ಆರ್‌ಬಿಐ ಸಮೀಕ್ಷೆ

Update: 2019-12-06 16:28 GMT

ಹೊಸದಿಲ್ಲಿ, ಡಿ.6: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಗ್ರಾಹಕರ ವಿಶ್ವಾಸ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ ಎಂದು ಆರ್‌ಬಿಐ ನಡೆಸಿದ ಗ್ರಾಹಕ ವಿಶ್ವಾಸ ಸಮೀಕ್ಷೆ ತಿಳಿಸಿದೆ.

ಆಶಾವಾದ ಮತ್ತು ನಿರಾಶಾವಾದದ ನಡುವಿನ ವಿಭಜನಾ ರೇಖೆಯಾಗಿ 100ನ್ನು ಗುರುತಿಸಲಾಗಿದ್ದು ಸೆಪ್ಟೆಂಬರ್‌ನಲ್ಲಿ ಗ್ರಾಹಕರ ವಿಶ್ವಾಸದ ಪ್ರಮಾಣ 89.4%ವಿದ್ದರೆ, ನವೆಂಬರ್‌ನಲ್ಲಿ 85.7%ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ. 13 ಬೃಹತ್ ನಗರ ಮತ್ತು 5,334 ಮನೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಸಾಮಾನ್ಯ ಆರ್ಥಿಕ ಪರಿಸ್ಥಿತಿ, ಆದಾಯ ಮತ್ತು ಖರ್ಚಿನ ಹೊರತಾಗಿ ಒಟ್ಟಾರೆ ಬೆಲೆ ಪರಿಸ್ಥಿತಿಯ ಕುರಿತು ಗ್ರಾಹಕರ ಅನಿಸಿಕೆ ಮತ್ತು ನಿರೀಕ್ಷೆಯನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿದೆ.

ಕಳೆದ ಕೆಲ ವರ್ಷಗಳಲ್ಲಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಗ್ರಾಹಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಏಶ್ಯಾದ ಮೂರನೇ ಬೃಹತ್ ಅರ್ಥವ್ಯವಸ್ಥೆ ಎನಿಸಿಕೊಂಡಿರುವ ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಮಂದಗತಿ ಹಾಗೂ ನಿರುದ್ಯೋಗದ ಸಮಸ್ಯೆ ಹೆಚ್ಚಿರುವ ಆತಂಕದ ಮಧ್ಯೆಯೇ ಆರ್‌ಬಿಐ ಸಮೀಕ್ಷೆ ಹೊರಬಿದ್ದಿದೆ. ದೇಶದಲ್ಲಿ ಬ್ಯಾಂಕ್ ಹೊರತಾದ ಆರ್ಥಿಕ ಸಂಸ್ಥೆಗಳು ಕೆಲವು ವರ್ಷಗಳಿಂದ ಬಿಕ್ಕಟ್ಟಿಗೆ ಸಿಲುಕಿದ ಕಾರಣ ಸಾಲ ನೀಡುವ ಪ್ರಕ್ರಿಯೆಯನ್ನು ಬಿಗಿಗೊಳಿಸಿವೆ. ಇದರಿಂದ ಸ್ಥಳೀಯ ಬಳಕೆಯ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News