ರಾಹುಲ್ ಬಜಾಜ್ ಮಾತುಗಳಿಗೆ ಇತರರಿಂದ ಬೆಂಬಲ ಸಿಗಬಹುದೇ?

Update: 2019-12-06 18:32 GMT

ಸರಕಾರವು ವಿಮರ್ಶೆಯನ್ನು ಸಹಿಸದೆ ಇರುವ ಬಗ್ಗೆ ತನ್ನ ಭಯ ಮತ್ತು ಆತಂಕವನ್ನು ವ್ಯಕ್ತಪಡಿಸಿದ ರಾಹುಲ್ ಬಜಾಜ್ ಅವರ ಭಾಷಣಕ್ಕೆ ಮೂಡಿಬಂದ ಭಾರೀ ಪ್ರತಿಕ್ರಿಯೆ ನಾವು ಎಂತಹ ಕಾಲದಲ್ಲಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಅವರ ಸಹೋದ್ಯೋಗಿಗಳು ಅವರ ಭಾಷಣವನ್ನು ಹೊಗಳಿದ್ದರಾದರೂ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಲು ಅವರು ಹಿಂದೆ ಮುಂದೆ ನೋಡದೇ ಇರುವುದಿಲ್ಲ.

ಯಾಕೆ? ಎಂದು ತಿಳಿಯಲು ಕಷ್ಟವಿಲ್ಲ. ಬಜಾಜ್ ಅವರ ಭಾಷಣದ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದ ಕೂಡಲೇ ಬಿಜೆಪಿ ತನ್ನ ವಾಗ್ದಾಳಿ ಆರಂಭಿಸಿತು. ಬಜಾಜ್ ನೀಡಿದಂತಹ ಹೇಳಿಕೆಗಳು ಹೇಗೆ ‘‘ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹೊಡೆತ ನೀಡಬಲ್ಲವು’’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ನಗರ ವ್ಯವಹಾರ ಸಚಿವ ಹರ್‌ದೀಪ್ ಸಿಂಗ್ ಪುರಿ ‘‘ಅಶಿಸ್ತಿನ ಸಮಾಜದಲ್ಲಿ ನಾಗರಿಕರು ಸುಳ್ಳು ಕಥಾನಕಗಳನ್ನು ಹೆಣೆಯುತ್ತಾರೆ.’’ ಎಂದು ಟ್ವೀಟ್ ಮಾಡಿದರು. ಬಿಜೆಪಿಯ ಐಟಿ ವಿಭಾಗವು ಬಜಾಜ್ ಅವರು ರಾಹುಲ್ ಗಾಂಧಿ ಅವರನ್ನು ಹೊಗಳಿದ್ದ ಹಳೆಯ ವೀಡಿಯೊ ದಾಖಲೆಗಳನ್ನು ಹೊರತೆಗೆಯಿತು.
ಬಜಾಜ್ ಅವರ ಸಹೋದ್ಯೋಗಿಗಳಿಗೆ ಸರಕಾರದ ಸ್ಪಷ್ಟ ಸಂದೇಶ: ಅವರ ಮಾದರಿಯನ್ನು ಅನುಸರಿಸುವ ಯೋಚನೆ ಕೂಡ ಮಾಡಬೇಡಿ.
ಎಲ್ಲವೂ ಸರಿಯಿದ್ದಾಗ ಭಾರತದ ಉದ್ಯಮಿಗಳು ಸಚಿವರನ್ನು ಹೊಗಳುತ್ತಲೇ ಇರುತ್ತಾರೆ. ಬಜೆಟ್ ಮಂಡನೆಯಾದ ಬಳಿಕ ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿರಲಿ ಉದ್ಯಮಪತಿಗಳು ವಿತ್ತ ಸಚಿವರ ಪ್ರಸ್ತಾವಗಳಿಗೆ ಹತ್ತರಲ್ಲಿ ಹತ್ತು ಅಂಕಗಳನ್ನು ಕೊಟ್ಟುಬಿಡುತ್ತಾರೆ; ಅಧಿಕಾರದಲ್ಲಿರುವವರನ್ನು ಹಾಡಿ ಹೊಗಳುತ್ತಾರೆ.
 ಆದರೆ ಕಾರ್ಪೊರೇಟ್ ಸಮುದಾಯ ಸರಕಾರವನ್ನು ಟೀಕಿಸುವುದೇ ಇಲ್ಲವೆಂದು ಇದರರ್ಥವಲ್ಲ. ಉದಾಹರಣೆಗೆ 2002ರ ಗುಜರಾತ್ ಹತ್ಯಾಕಾಂಡದ ಬಳಿಕ, ದೀಪಕ್ ಪರೇಖ್, ಅಜೀಂ ಪ್ರೇಮ್‌ಜಿ, ಅನು ಆಗಾ ಮತ್ತು ಸೈರಸ್ ಗುಜಡರ್‌ರವರೂ ಸೇರಿದಂತೆ ಕಾರ್ಪೊರೇಟ್ ರಂಗದ ಹಲವಾರು ಉದ್ಯಮಿಗಳು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ ಹಿಂಸೆಯನ್ನು ಅಸಮರ್ಪಕವಾಗಿ ನಿಭಾಯಿಸಿದ್ದ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದರು. ಮೋದಿಯವರು ಅದನ್ನೆಂದೂ ಮರೆಯಲಿಲ್ಲ.
ಮೋದಿಯವರು ಪ್ರಧಾನಿಯಾದ ಬಳಿಕ ಪರಿಸ್ಥಿತಿ ನಾಟಕೀಯವಾಗಿ ಬದಲಾಯಿತು. ಈಗ ಭಾರತದ ಕಾರ್ಪೊರೇಟ್ ಜಗತ್ತಿನ ಪ್ರಮುಖರು ಮೋದಿಯವರ ಮೇಲೆ ಪ್ರಶಂಸೆಯ ಮಳೆಗೈಯುವುದರ ಜೊತೆಗೆ ಒಂದು ಚಿಪ್ಪಿನೊಳಗೆ ಅವಿತು ಕೂತಿದ್ದಾರೆ. ಖಾಸಗಿಯಾಗಿ ಕೂಡ ಅವರು ಸರಕಾರದ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಹೆದರುತ್ತಾರೆ. ತಾವು ಹೇಳಿದ್ದು ಎಲ್ಲಿಯಾದರೂ ದಿಲ್ಲಿಗೆ ತಲುಪಿಬಿಟ್ಟರೆ? ಎಂಬ ಭಯ ಅವರನ್ನು ಕಾಡುತ್ತದೆ.

ಖಾಸಗಿ ಕೂಟಗಳಲ್ಲಿ, ಪಾರ್ಟಿಗಳಲ್ಲಿ ಅವರ ಸಂಭಾಷಣೆಗಳು ಪಿಸುಮಾತಿನ ಮಟ್ಟದಲ್ಲಿರುತ್ತವೆ. ‘‘ಸರಕಾರದ ವಿರುದ್ಧ ಏನೋ ಹೇಳಿದ ಗಂಟೆಗಳೊಳಗಾಗಿ ಯಾರೋ ಮುಖ್ಯ ವ್ಯಕ್ತಿಯಿಂದ ದೂರವಾಣಿ ಕರೆ ಬಂದ’’ ಸುದ್ದಿಗಳು ಹರಿದಾಡುತ್ತವೆ. ದಿಲ್ಲಿಯ ಸಂಬಂಧ ಇನ್ನೂ ಕೂಡ ಬಹಳ ಮುಖ್ಯವಾಗಿರುವುದರಿಂದ ಯಾರೂ ಕೂಡ ಲಕ್ಷ್ಮಣರೇಖೆ ದಾಟಲು ಇಷ್ಟಪಡುವುದಿಲ್ಲ. ಭಾರತಕ್ಕೆ ಬಂದೊದಗಿದ ಅತ್ಯಂತ ದೊಡ್ಡ ಭಾಗ್ಯ ನರೇಂದ್ರ ಮೋದಿ ಎಂದು ಹೇಳುವ ಯಾವುದೇ ಅವಕಾಶ ದೊರೆತರೂ ಆ ಅವಕಾಶವನ್ನು ಕಳೆದುಕೊಳ್ಳದೆ ಇರುವುದು ಅವರಿಗೆ ಬಹಳ ಮುಖ್ಯವಾಗಿದೆ. ಹೀಗೆ ಹೇಳಿದ್ದಕ್ಕೆ ಉತ್ತಮ ಪ್ರತಿಫಲ ಸಿಗುವ ಸಂಭವ ಇದ್ದೇ ಇರುತ್ತದೆ. ಇದೆಲ್ಲ ಯಾಕೆ ಎಂದು ಅರ್ಥವಾಗುತ್ತದೆ. ಭಾರತದಲ್ಲಿ ಸರಕಾರಗಳಿಗೆ ತುಂಬಾ ಅಧಿಕಾರವಿದೆ; ಅವುಗಳು ಒಂದು ಕಂಪೆನಿಗೆ ಸಹಾಯ ಮಾಡಲು ಶಕ್ತವಾಗಿವೆ; ಹಾಗೆಯೇ ಹಾನಿ ಮಾಡಲೂ ಶಕ್ತವಾಗಿವೆ. ‘ಲೈಸನ್ಸ್ ರಾಜ್’ ಹೋಗಿರಬಹುದು; ಆದರೆ ಸರಕಾರ ಕಂಪೆನಿಗಳಿಗೆ ತನ್ನ ನೀತಿಗಳ, ಯೋಜನೆಗಳ ಮೂಲಕ ನಿಜವಾದ ಹಾನಿಯುಂಟು ಮಾಡಬಲ್ಲದು. ಎಲ್ಲಕ್ಕಿಂತ ಮಿಗಿಲಾಗಿ ಅದರ ಬಳಿ ದಂಡನಾ ಅಧಿಕಾರವಿದೆ: ಅದು ತನ್ನನ್ನು ಟೀಕಿಸುವ ಕಂಪೆನಿಗಳ ವಿರುದ್ಧ ಐಟಿ ಈಡಿ ಮತ್ತು ಸಿಬಿಐಯಂತಹ ಏಜೆನ್ಸಿಗಳನ್ನು ಛೂ ಬಿಡಬಲ್ಲದು.
ಅಲ್ಲದೆ, ಬಲಪಂಥೀಯ ಪ್ರಚಾರ ಯಂತ್ರ, ಟ್ರೋಲ್ ಸೇನೆ ಕಾರ್ಯಪ್ರವೃತ್ತವಾಗಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರನ್ನು ಟೀಕಿಸಿದವರನ್ನಷ್ಟೇ ಅಲ್ಲ; ಭಾರತದ ಈಗಿನ ಪರಿಸ್ಥಿತಿಯ ಬಗ್ಗೆ ಟೀಕಿಸಿದವರನ್ನು ಕೂಡ ಕಾಡಲಾರಂಭಿಸುತ್ತವೆ.
ಬಜಾಜ್ ಇತರರಿಗಿಂತ ಭಿನ್ನ ಹಾದಿ ತುಳಿದಿದ್ದಾರೆ ಅನಿಸುತ್ತದೆ. ಆದರೆ ಅವರ ಒಬ್ಬರೇ ಒಬ್ಬ ಸಹೋದ್ಯೋಗಿ ಪುರುಷನಾಗಲೀ, ಮಹಿಳೆಯಾಗಲೀ ತಲೆ ಹೊರಗೆ ಹಾಕುವ ಧೈರ್ಯ ವಹಿಸುವುದಿಲ್ಲ. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದ ಇದೆ, ಅಷ್ಟೇ. ಉದಾಹರಣೆಗೆ ಕಿರಣ್ ಮಜುಂದಾರ್ ಶಾ.
2014ರಲ್ಲಿ ದೇಶವನ್ನು ಆವರಿಸಿದ್ದ ಮೌನ ಇದ್ದ ಹಾಗೆಯೇ ಇರುತ್ತದೆ. ಈ ಸರಕಾರ ತನ್ನನ್ನು ಟೀಕಿಸುವ ಒಬ್ಬಿಬ್ಬರನ್ನು ಸಹಿಸಿಕೊಳ್ಳುತ್ತದಷ್ಟೇ ಹೊರತು, ಎಲ್ಲರನ್ನಲ್ಲ. ಭಿನ್ನಮತವನ್ನು ಹತ್ತಿಕ್ಕುವ ಮಾರ್ಗಗಳು ಸಲಕರಣೆಗಳು ಅದರ ಬಳಿ ಇವೆ ಮತ್ತು ಅದು ತನ್ನ ಎಲ್ಲ ಬಲವನ್ನು ಪ್ರಯೋಗಿಸಿ ತನ್ನ ಟೀಕಾಕಾರರ ಬಾಯಿ ಮುಚ್ಚಿಸುತ್ತದೆ.
ಇದು ನಾಚಿಕೆಗೇಡು. ಆದರೂ ಈ ಸರಕಾರದ ವಿರುದ್ಧ ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳು ಧೈರ್ಯವಾಗಿ ಧ್ವನಿ ಎತ್ತಿವೆ. ಆದರೆ ಅವರು ಅದಕ್ಕೆ ಬೆಲೆ ತೆತ್ತಿದ್ದಾರೆ: ವಿದೇಶ ಪ್ರಯಾಣದ ಮೇಲೆ ನಿಷೇಧ, ದಾಳಿಗಳು, ಜೈಲು ಶಿಕ್ಷೆ. ಬಜಾಜ್ ಅವರ ಹಾದಿಯಲ್ಲಿ ಇನ್ನೂ ಹಲವರು ನಡೆದಲ್ಲಿ ಸರಕಾರ ಅವರ ಮಾತನ್ನು ಕೇಳಿಸಿಕೊಳ್ಳಲೇ ಬೇಕಾಗುತ್ತದೆ. ಆದರೆ ಯಾರೂ ಆ ಹಾದಿಯಲ್ಲಿ ನಡೆಯುವುದಿಲ್ಲ ಮತ್ತು ಇದು ಮೋದಿ ಮತ್ತು ಶಾ ಅವರಿಗೆ ಗೊತ್ತಿದೆ. ಇದಕ್ಕೆ ಹೇಡಿತನ ಭಾಗಶಃ ಕಾರಣ, ಜೊತೆಗೆ ಅತ್ಯಾಸೆ ಮತ್ತು ಭಯಗಳೂ ಕಾರಣವಾಗಿವೆ. ಅವರಲ್ಲೂ ಬಯಲುಗೊಳಿಸಲಾಗದ ಹಲವು ಅಕ್ರಮಗಳಿವೆ. ಬಜಾಜ್ ಏನೋ ಧೈರ್ಯ ವಹಿಸಿ ಮಾತನಾಡಿದ್ದಾರೆ. ಎಲ್ಲರೂ ಒಂದು ಕ್ಷಣದ ಮಟ್ಟಿಗೆ ಬಿಡುಗಡೆ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಎಲ್ಲವೂ ಹಿಂದಿನ ಸಹಜ ಸ್ಥಿತಿಗೆ ಮರಳುತ್ತದೆ.

ಕೃಪೆ: thewire.in             

Writer - ಸಿದ್ಧಾರ್ಥ ಭಾಟಿಯಾ

contributor

Editor - ಸಿದ್ಧಾರ್ಥ ಭಾಟಿಯಾ

contributor

Similar News