ಪೌರತ್ವ ತಿದ್ದುಪಡಿ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆ

Update: 2019-12-19 06:29 GMT

ಹೊಸದಿಲ್ಲಿ,ಡಿ.7: ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿರುವ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸರಕಾರವು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ. ಚರ್ಚೆಯ ಬಳಿಕ ಮಂಗಳವಾರ ಮಸೂದೆಯು ಅಂಗೀಕಾರಗೊಳ್ಳುವ ಸಾಧ್ಯತೆಯಿದೆ.

ಆರು ದಶಕಗಳಷ್ಟು ಹಳೆಯದಾದ ಪೌರತ್ವ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ಉದ್ದೇಶಿಸಿರುವ ಈ ಮಸೂದೆಯಡಿ 2014,ಡಿಸೆಂಬರ್ 31 ಮತ್ತು ಅದಕ್ಕೂ ಮುನ್ನ ಕಿರುಕುಳಗಳಿಂದಾಗಿ ಅಫಘಾನಿಸ್ತಾನ,ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಂದ ಬಂದಿರುವ ಹಿಂದು,ಸಿಖ್,ಬೌದ್ಧ,ಜೈನ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ನಿರಾಶ್ರಿತರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ ಮತ್ತು ದೇಶದಲ್ಲಿ ಐದು ವರ್ಷ ವಾಸವಾದ ಬಳಿಕ ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುತ್ತದೆ.

ಇದೇ ವೇಳೆ ಸಾಕಷ್ಟು ಪ್ರಭಾವವನ್ನು ಹೊಂದಿರುವ ನಾರ್ಥ್ ಈಸ್ಟ್ ಸ್ಟುಡೆಂಟ್ಸ್ ಯೂನಿಯನ್ ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟಿಸಲು ಮಂಗಳವಾರ 11 ಗಂಟೆಗಳ ಈಶಾನ್ಯ ಭಾರತ ಬಂದ್‌ಗೆ ಕರೆ ನೀಡಿದೆ. ಮಸೂದೆಯು ಪ್ರದೇಶದ ಮೂಲನಿವಾಸಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಮತ್ತು ದೇಶವನ್ನು ಪ್ರವೇಶಿಸಿದವರಿಗೆ ಶಾಶ್ವತ ನೆಲೆಯನ್ನು ಕಲ್ಪಿಸುತ್ತದೆ ಎಂದು ಅದು ಪ್ರತಿಪಾದಿಸಿದೆ. ‘ಇನ್ನರ್ ಲೈನ್ ಪರ್ಮಿಟ್’ ಅಥವಾ ಆಂತರಿಕ ವೀಸಾ ವ್ಯವಸ್ಥೆಯನ್ನು ಹೊಂದಿರುವ ಪ್ರದೇಶಗಳು ಮತ್ತು ಸಂವಿಧಾನದ ಆರನೇ ಅನುಬಂಧದಡಿ ಬರುವ ಬುಡಕಟ್ಟು ಪ್ರದೇಶಗಳಿಗೆ ನೂತನ ಮಸೂದೆಯು ಅನ್ವಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News