ದೇಶ ಆಳುತ್ತಿರುವ ವ್ಯಕ್ತಿಗೆ ಹಿಂಸಾಚಾರದಲ್ಲಿ ವಿಶ್ವಾಸ: ಪ್ರಧಾನಿ ವಿರುದ್ಧ ರಾಹುಲ್ ಟೀಕೆ

Update: 2019-12-07 15:04 GMT
Photo: PTI

ಹೊಸದಿಲ್ಲಿ, ಡಿ.7: ಪ್ರಧಾನಿ ಮೋದಿ ನೇತೃತ್ವದ ಸರಕಾರದ ಆಳ್ವಿಕೆಯಲ್ಲಿ ದೇಶದಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು ಸಾಂಸ್ಥಿಕ ಸಂರಚನೆ ಕುಸಿದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕೇರಳದ ವಯನಾಡ್‌ನಲ್ಲಿ ನಡೆದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್, ದೇಶದಲ್ಲಿ ಹಿಂಸಾಚಾರ ಹೆಚ್ಚಿರುವುದು, ಮಹಿಳೆಯರ ವಿರುದ್ಧದ ಅಪರಾಧ ಹೆಚ್ಚಾಗಿರುವುದು, ಕಾನೂನಿಗೆ ಬೆಲೆಯಿಲ್ಲದ ಪರಿಸ್ಥಿತಿ ಇದ್ದು ಮಹಿಳೆಯರಿಗೆ ಭದ್ರತೆಯೇ ಇಲ್ಲ ಎಂಬಂತಾಗಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಹೆಚ್ಚುತ್ತಿದ್ದು ಅವರ ವಿರುದ್ಧ ದ್ವೇಷಭಾವನೆ ಹರಡಲಾಗುತ್ತಿದೆ. ದಲಿತರನ್ನು ಥಳಿಸಿ ಅವರ ಕೈಗಳನ್ನು ಮುರಿಯುವ ಘಟನೆ ನಡೆಯುತ್ತಿದೆ. ಆದಿವಾಸಿಗಳ ಜಮೀನನ್ನು ಅವರಿಂದ ಕಿತ್ತುಕೊಂಡು ಅವರ ಮೇಲೆ ದೌರ್ಜನ್ಯ ಎಸಗುವ ಘಟನೆಗಳೂ ವರದಿಯಾಗುತ್ತಿವೆ. ಇದಕ್ಕೆಲ್ಲಾ ಕಾರಣ ಜನತೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವುದು. ಈ ದೇಶವನ್ನು ಆಳುತ್ತಿರುವ ವ್ಯಕ್ತಿ ಹಿಂಸಾಚಾರದಲ್ಲಿ ಮತ್ತು ಸ್ವಚ್ಛಂದ ಅಧಿಕಾರದಲ್ಲಿ ವಿಶ್ವಾಸ ಇರಿಸಿರುವುದು ಹಿಂಸಾಚಾರ ಹೆಚ್ಚಲು ಮೂಲ ಕಾರಣವಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News