“ಜೈಲಿನಲ್ಲಿರುವ ಎಲ್ಲರನ್ನೂ ಹತ್ಯೆಗೈದ ಬಳಿಕ ಪತಿಯ ಅಂತ್ಯಸಂಸ್ಕಾರ ನಡೆಯಲಿ”

Update: 2019-12-07 15:18 GMT
Photo: PTI

ಹೈದರಾಬಾದ್, ಡಿ.7: ಜೈಲಿನಲ್ಲಿರುವ ಎಲ್ಲಾ ಖೈದಿಗಳನ್ನೂ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ತನ್ನ ಪತಿಯ ಅಂತ್ಯಸಂಸ್ಕಾರ ನಡೆಸಬೇಕು ಎಂದು ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಯ ಪತ್ನಿ ಹೇಳಿದ್ದಾರೆ.

ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವ ಆರೋಪಿ ಚೆನ್ನಕೇಶವುಲು ಎಂಬಾತನ ಗರ್ಭಿಣಿ ಪತ್ನಿ ರೇಣುಕಾ ಎನ್‌ಕೌಂಟರ್ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪು ಮಾಡಿ ಜೈಲಿನಲ್ಲಿ ಅದೆಷ್ಟು ಜನರಿಲ್ಲ. ಅವರನ್ನೂ ಇದೇ ರೀತಿ ಗುಂಡಿಕ್ಕಿ ಹತ್ಯೆ ಮಾಡಬೇಕು. ಅದುವರೆಗೆ ಪತಿಯ ಮೃತದೇಹದ ಅಂತ್ಯಸಂಸ್ಕಾರ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ನಾರಾಯಣಪೇಟೆ ಜಿಲ್ಲೆಯ ನಿವಾಸಿಯಾಗಿರುವ ರೇಣುಕಾ ತನಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡು ಕುಟುಂಬದ ಸದಸ್ಯರ ಜತೆ ಗ್ರಾಮದ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

  ನಾಲ್ವರು ಆರೋಪಿಗಳು ಬಡ ಕುಟುಂಬದವರಾಗಿದ್ದು ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಎನ್‌ಕೌಂಟರ್‌ನಲ್ಲಿ ಆರೋಪಿಗಳು ಹತ್ಯೆಯಾಗಿರುವುದಕ್ಕೆ ಮಹಿಳೆಯರ ಸಂಭ್ರಮಾಚರಣೆ ಶನಿವಾರವೂ ಮುಂದುವರಿದಿದ್ದು ಹೈದರಾಬಾದ್‌ನಲ್ಲಿ ಸಂಭ್ರಮ ಆಚರಿಸಿದ ಮಹಿಳೆಯರ ಗುಂಪೊಂದು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹಾಗೂ ಪೊಲೀಸರನ್ನು ಅಭಿನಂದಿಸಿ ಘೋಷಣೆ ಕೂಗಿದರು.

ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎಂ ಭಟ್ಟಿ ವಿಕ್ರಮಾರ್ಕ ನೇತೃತ್ವದ ನಿಯೋಗವು, ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಪಶುವೈದ್ಯೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದಾಗ ಪೊಲೀಸರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂಬ ಆರೋಪದ ಬಗ್ಗೆ ರಾಜ್ಯಪಾಲರ ಗಮನ ಸೆಳೆಯಿತು.

ರಾಜ್ಯದಲ್ಲಿ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಮುಖಂಡ ಅಥವಾ ಕಾರ್ಯಕರ್ತನ ಶಿಫಾರಸು ಇದ್ದರೆ ಮಾತ್ರ ಪೊಲೀಸರು ದೂರು ಸ್ವೀಕರಿಸುವ ಪರಿಸ್ಥಿತಿಯಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿರುವುದಾಗಿ ವಿಕ್ರಮಾರ್ಕ ಸುದ್ದಿಗಾರರಿಗೆ ತಿಳಿಸಿದರು.

 ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿರುವುದು ಮಹಿಳೆಯರ ವಿರುದ್ಧದ ಅಪರಾಧಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ರಾಜ್ಯದಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ತಡೆಯೊಡ್ಡುವ ಬಗ್ಗೆ ಕಾಂಗ್ರೆಸ್ ಪಕ್ಷ ಕ್ರಿಯಾಯೋಜನೆಯನ್ನು ರೂಪಿಸುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News