ಅಮೆರಿಕ, ಇರಾನ್ ಕೈದಿಗಳ ವಿನಿಮಯ

Update: 2019-12-07 16:58 GMT

ದುಬೈ, ಡಿ. 7: ಬದ್ಧ ಶತ್ರುಗಳಾದ ಅಮೆರಿಕ ಮತ್ತು ಇರಾನ್ ಶನಿವಾರ ಕೈದಿಗಳನ್ನು ವಿನಿಮಯ ಮಾಡಿಕೊಂಡಿವೆ. ಬೇಹುಗಾರಿಕೆ ಆರೋಪದಲ್ಲಿ ಮೂರು ವರ್ಷಗಳಿಂದ ಇರಾನ್‌ನಲ್ಲಿ ಬಂಧನದಲ್ಲಿರುವ ಚೀನಿ-ಅಮೆರಿಕನ್ ವ್ಯಕ್ತಿ ಹಾಗೂ ಅಮೆರಿಕದಲ್ಲಿ ಬಂಧನದಲ್ಲಿರುವ ಇರಾನ್ ಪ್ರಜೆಯೊಬ್ಬನನ್ನು ಉಭಯ ದೇಶಗಳು ಪರಸ್ಪರ ವಿನಿಮಯ ಮಾಡಿಕೊಂಡಿವೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದಂದಿನಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿದರೂ, ಈ ಅಪರೂಪದ ಸಹಕಾರದ ವಿದ್ಯಮಾನ ನಡೆದಿರುವುದು ಗಮನಾರ್ಹವಾಗಿದೆ.

ಚೀನಾ-ಅಮೆರಿಕ ಪ್ರಜೆ ಕ್ಸಿಯುವೆ ವಾಂಗ್ ಅಮೆರಿಕಕ್ಕೆ ಮರಳುತ್ತಿದ್ದಾರೆ ಎಂದು ಟ್ರಂಪ್ ಹೇಳಿದರೆ, ಇರಾನ್ ಪ್ರಜೆ ಮಸೂದ್ ಸುಲೈಮಾನಿಯನ್ನು ಅಮೆರಿಕದಲ್ಲಿ ಬಂಧನದಿಂದ ಮುಕ್ತಗೊಳಿಸಲಾಗಿದೆ ಎಂದು ಇರಾನ್ ಅಧಿಕಾರಿಯೊಬ್ಬರು ತಿಳಿಸಿದರು.

ಸ್ವಿಟ್ಸರ್‌ಲ್ಯಾಂಡ್ ಮಧ್ಯಸ್ಥಿಕೆಯಲ್ಲಿ ಕೈದಿಗಳ ವಿನಿಮಯ ಮಾಡಲಾಗಿದೆ. ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಝೂರಿಕ್‌ನಲ್ಲಿ ಸುಲೈಮಾನಿಯನ್ನು ಸ್ವಾಗತಿಸಿದರು ಎಂದು ಇರಾನ್‌ನ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.

ಝೂರಿಕ್‌ನಲ್ಲೇ ಕೈದಿಗಳ ವಿನಿಮಯ ನಡೆಯಿತು ಎಂದು ಅದು ಹೇಳಿದೆ.

ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ, ಸುಲೈಮಾನಿಯನ್ನು ಬಿಡುಗಡೆ ಮಾಡಿರುವ ಬಗ್ಗೆ ಟ್ರಂಪ್ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ವಾಂಗ್ ಬಿಡುಗಡೆಯಲ್ಲಿ ಮಧ್ಯಸ್ಥಿಕೆ ವಹಿಸಿರುವುದಕ್ಕಾಗಿ ಅವರು ಸ್ವಿಟ್ಸರ್‌ಲ್ಯಾಂಡ್ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News