‘ಕಾಶ್ಮೀರದಲ್ಲಿ ಸಂವಹನ ನಿರ್ಬಂಧಗಳನ್ನು,ಬಂಧನಗಳನ್ನು ನಿಲ್ಲಿಸಿ’

Update: 2019-12-08 15:59 GMT
           ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.8: ಜಮ್ಮು-ಕಾಶ್ಮೀರದಲ್ಲಿ ಸಂವಹನ ನಿರ್ಬಂಧಗಳನ್ನು ಮತ್ತು ಸಾಮೂಹಿಕ ಬಂಧನಗಳನ್ನು ಅಂತ್ಯಗೊಳಿಸುವಂತೆ ಭಾರತಕ್ಕೆ ಸೂಚಿಸುವ ಉಭಯಪಕ್ಷೀಯ ನಿರ್ಣಯವೊಂದನ್ನು ಅಮೆರಿಕದ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಭಾರತವು ಗಡಿಯಾಚೆಯ ಭಯೋತ್ಪಾದನೆಯಿಂದ ಸವಾಲುಗಳನ್ನು ಎದುರಿಸುತ್ತಿದೆ ಎನ್ನುವುದನ್ನೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ-ಅಮೆರಿಕನ್ ಡೆಮಾಕ್ರಾಟಿಕ್ ಸಂಸದೆ ಪ್ರಮೀಳಾ ಜಯಪಾಲ್ ಮತ್ತು ರಿಪಬ್ಲಿಕನ್ ಸಂಸದ ಸ್ಟೀವ್ ವಾಟ್ಕಿನ್ಸ್ ಅವರು ಶುಕ್ರವಾರ ಜಂಟಿಯಾಗಿ ಈ ನಿರ್ಣಯವನ್ನು ಸದನದಲ್ಲಿ ಮಂಡಿಸಿದ್ದಾರೆ. ಈ ನಿರ್ಣಯವನ್ನು ಸದನದಲ್ಲಿ ಧ್ವನಿಮತಕ್ಕೆ ಇಡಲಾಗುವುದು.

 ‘ ಸಾಧ್ಯವಾದಷ್ಟು ಶೀಘ್ರ ಜಮ್ಮು-ಕಾಶ್ಮೀರದಾದ್ಯಂತ ಸಂವಹನದ ಮೇಲಿನ ನಿರ್ಬಂಧಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಮತ್ತು ಅಂತರ್ಜಾಲವನ್ನು ಮರುಸ್ಥಾಪಿಸುವಂತೆ ಅಮೆರಿಕದ ಸಂಸತ್ತು ಭಾರತ ಸರಕಾರವನ್ನು ಆಗ್ರಹಿಸುತ್ತದೆ. ನಿರಂಕುಶವಾಗಿ ಬಂಧಿಸಲಾಗಿರುವ ಜನರನ್ನು ಕೂಡಲೇ ಬಿಡುಗಡೆಗೊಳಿಸುವಂತೆ,ರಾಜಕೀಯ ಚಟುವಟಿಕೆಗಳನ್ನು ನಡೆಸದಂತೆ ಮತ್ತು ಭಾಷಣಗಳನ್ನು ಮಾಡದಂತೆ ಅವರಿಗೆ ಷರತ್ತು ವಿಧಿಸುವುದರಿಂದ ದೂರವಿರುವಂತೆ,ಅಂತರರಾಷ್ಟ್ರೀಯ ಮಾನವ ಹಕ್ಕುಗಳ ವೀಕ್ಷಕರು ಮತ್ತು ಪತ್ರಕರ್ತರ ಕಾಶ್ಮೀರ ಭೇಟಿಗೆ ಅವಕಾಶ ನೀಡುವಂತೆ ಹಾಗೂ ಮತೀಯ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವ ಹಿಂಸಾಚಾರ ಸೇರಿದಂತೆ ಎಲ್ಲ ಧಾರ್ಮಿಕ ಪ್ರೇರಿತ ಹಿಂಸೆಯನ್ನು ಅತ್ಯುನ್ನತ ಮಟ್ಟದಲ್ಲಿ ಖಂಡಿಸುವಂತೆಯೂ ಸಂಸತ್ತು ಭಾರತ ಸರಕಾರವನ್ನು ಆಗ್ರಹಿಸುತ್ತದೆ ’ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಭಾರತ ಸರಕಾರವು ಎದುರಿಸುತ್ತಿರುವ ಗಂಭೀರ ಭದ್ರತಾ ಸವಾಲುಗಳು ಮತ್ತು ಸರಕಾರಿ ಬೆಂಬಲಿತ ಗಡಿಯಾಚೆಯ ಭಯೋತ್ಪಾದನೆಯ ನಿರಂತರ ಬೆದರಿಕೆಯ ಬಗ್ಗೆ ಅಮೆರಿಕದ ಸಂಸತ್ತಿಗೆ ಅರಿವಿದೆ ಎಂದೂ ನಿರ್ಣಯವು ಸ್ಪಷ್ಟಪಡಿಸಿದೆ.

ನಿರಂಕುಶ ಬಂಧನಗಳು,ನಾಗರಿಕರ ವಿರುದ್ಧ ಅತಿಯಾದ ಬಲಪ್ರಯೋಗ ಮತ್ತು ಭಿನ್ನಾಭಿಪ್ರಾಯಗಳ ಶಾಂತಿಯುತ ಅಭಿವ್ಯಕ್ತಿಯ ದಮನ ಇವು ಭದ್ರತಾ ಸವಾಲುಗಳಿಗೆ ಉತ್ತರಗಳಲ್ಲ ಮತ್ತು ಅವುಗಳನ್ನು ತಾವು ತಿರಸ್ಕರಿಸುತ್ತೇವೆ ಎಂದು ಅಮೆರಿಕದ ಸಂಸದರು ಹೇಳಿದ್ದಾರೆ. ಯಾವುದೇ ಭದ್ರತಾ ಕ್ರಮಗಳು ಜನರ ಮಾನವ ಹಕ್ಕುಗಳನ್ನು ಗೌರವಿಸುವಂತೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕು ಕಾನೂನುಗಳಿಗೆ ವಿಧೇಯವಾಗಿರುವಂತೆ ನೋಡಿಕೊಳ್ಳುವಂತೆಯೂ ನಿರ್ಣಯದಲ್ಲಿ ಭಾರತವನ್ನು ಆಗ್ರಹಿಸಲಾಗಿದೆ.

ಅಮೆರಿಕದ ಸಂಸತ್ತಿನ ಭಾಗವಾಗಿರುವ ಪ್ರತಿನಿಧಿ ಸಭೆಯಲ್ಲಿ ಡೆಮಾಕ್ರಾಟ್‌ರ ಪ್ರಾಬಲ್ಯ ಹೆಚ್ಚಿದ್ದು,ಈ ಸಂಸದರು ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧಗಳ ವಿರುದ್ಧ ಧ್ವನಿಯೆತ್ತುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News