ಇರಾಕ್ ಪ್ರತಿಭಟನಕಾರರ ಮೇಲೆ ಮುಸುಕುಧಾರಿಗಳಿಂದ ದಾಳಿ

Update: 2019-12-08 16:18 GMT

ಬಗ್ದಾದ್ (ಇರಾಕ್), ಡಿ. 8: ಇರಾಕ್ ರಾಜಧಾನಿ ಬಗ್ದಾದ್‌ನ ತಹ್ರೀರ್ ಚೌಕದಲ್ಲಿ ಶುಕ್ರವಾರ ರಾತ್ರಿ ಸರಕಾರ ವಿರೋಧಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಮುಸುಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 23ಕ್ಕೇರಿದೆ ಎಂದು ಪೊಲೀಸರು ಮತ್ತು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದು ವಾರಗಳ ಅವಧಿಯಲ್ಲಿ ಇರಾಕ್ ರಾಜಧಾನಿಯಲ್ಲಿ ನಡೆದ ಅತ್ಯಂತ ಭೀಕರ ಘಟನೆಯಾಗಿದೆ.

ತಹ್ರೀರ್ ಚೌಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಗುರಿಯಾಗಿಸಿ ನಡೆದ ಚೂರಿ ಇರಿತ ಮತ್ತು ಗುಂಡಿನ ದಾಳಿಯಲ್ಲಿ 127ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಮೂವರು ಪೊಲೀಸರೂ ಇದ್ದಾರೆ.

ಹಾಲಿ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮೂಲೋತ್ಪಾಟನೆಗೊಳಿಸಬೇಕು ಎಂದು ಆಗ್ರಹಿಸಿ ಸಾವಿರಾರು ಇರಾಕಿಗಳು ತಹ್ರೀರ್ ಚೌಕ ಮತ್ತು ಸಮೀಪದ ಸೇತುವೆಗಳಲ್ಲಿ ಹಲವು ವಾರಗಳಿಂದ ಧರಣಿ ನಡೆಸುತ್ತಿದ್ದಾರೆ.

ಪ್ರತಿಭಟನಕಾರರ ಮೇಲೆ ದಾಳಿ ನಡೆಸಿದವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.

ಭಾರೀ ಶಸ್ತ್ರಸಜ್ಜಿತ, ಮುಸುಕುಧಾರಿ ಬಂದೂಕುಧಾರಿಗಳು ಶನಿವಾರವೂ ವಾಹನವೊಂದರಲ್ಲಿ ತಹ್ರೀರ್ ಚೌಕದತ್ತ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ, ಒಂದು ತಪಾಸಣಾ ಠಾಣೆಯ ಸಿಬ್ಬಂದಿ ಆ ಬಂದೂಕುಧಾರಿಗಳನ್ನು ಹಿಮ್ಮೆಟ್ಟಿಸಿದರು.

ಮೂವರು ಇರಾನ್ ಬೆಂಬಲಿತ ಇರಾಕ್ ಪಾರಾಮಿಲಿಟರಿ ನಾಯಕರ ಮೇಲೆ ಅಮೆರಿಕ ದಿಗ್ಬಂಧನಗಳನ್ನು ವಿಧಿಸಿದ ಗಂಟೆಗಳ ಬಳಿಕ ಶುಕ್ರವಾರದ ಭೀಕರ ದಾಳಿ ನಡೆದಿದೆ. ಇರಾಕ್ ಪ್ರತಿಭಟನಕಾರರನ್ನು ಕೊಲ್ಲಲು ಅವರು ನಿರ್ದೇಶನ ನೀಡುತ್ತಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News