ಆತ್ರಾಡಿ ಬಳಿ 62 ವರ್ಷಗಳ ಬಳಿಕ ಹೂವು ಬಿಟ್ಟ ಶ್ರೀತಾಳೆಮರ!

Update: 2019-12-09 06:47 GMT

ಉಡುಪಿ, ಡಿ.8: ಆತ್ರಾಡಿ ಸಮೀಪದ ಪರೀಕ ರಸ್ತೆಯ ಬಳಿ ಇರುವ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಕಾಡು ಶ್ರೀತಾಳೆ ಮರವೊಂದು ಸುಮಾರು 62 ವರ್ಷಗಳ ನಂತರ ಹೂ ಬಿಟ್ಟಿದ್ದು, ಇದರ ಸಂರಕ್ಷಣೆ ಮಾಡಿ, ಬೀಜ ಸಂಗ್ರಹಿಸಿ ತಳಿಯ ಪುನರುತ್ಪತ್ತಿ ಕಾರ್ಯಕ್ಕೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಸ್ಥಳೀಯರ ಸಹಕಾರದೊಂದಿಗೆ ಮುಂದಾಗಿದ್ದಾರೆ.

 ಈ ಸಸ್ಯ ಪ್ರಬೇಧದ ಸಂತತಿಯು ವೌಢ್ಯದಿಂದಾಗಿ ನಾಶವಾಗುತ್ತಿದ್ದು, ಇದರ ಪರಿಣಾಮ ವಿಶ್ವದ ಹಸಿರು ಪಟ್ಟಿಯಲ್ಲಿದ್ದ ಶ್ರೀತಾಳೆಮರ ಇದೀಗ ವಿಶ್ವದ ಕೆಂಪು ಪಟ್ಟಿಯಲ್ಲಿದೆ. ಈ ಮರವು ತನ್ನ ಜೀವಿತಾವಧಿಯಲ್ಲಿ ಸುಮಾರು 50-60ವರ್ಷಗಳ ನಂತರ ಒಮ್ಮೆ ಮಾತ್ರ ಹೂವು ಬಿಡುವುದು ವಿಶೇಷವಾಗಿದೆ. ಅದಕ್ಕಾಗಿ ಇದನ್ನು ಸಂಸ್ಕೃತದಲ್ಲಿ ಅವಿನಾಶಿ ಎಂದು ಕರೆಯಲಾಗುತ್ತದೆ.

ಈ ಮರದಲ್ಲಿ ಹೂವು ಬಿಟ್ಟರೆ ಬರಗಾಲ ಬಂದು ಜನ ಸಾಯುತ್ತಾರೆ ಎಂಬ ಮೂಢನಂಬಿಕೆ ಅನಾದಿ ಕಾಲದಿಂದಲೂ ಇತ್ತು. ಅದರಿಂದಾಗಿ ಈ ಮರವನ್ನು ಹೂವು ಬಿಡುವ ಒಂಟಿ ಹೊಂಬಾಳೆ(ಕೋಡು) ಅರಳಿ ನಿಂತಾಗಲೇ ಕಡಿದು ಉರುಳಿಸಲಾಗುತ್ತಿತ್ತು. ಹಾಗಾಗಿ, ಈ ಹೂವು ಬೀಜವಾಗಿ ಇದರ ಸಂತತಿ ವಿಸ್ತಾರಗೊಳ್ಳಲು ಸಾಧ್ಯವಾಗದೆ ನಾಶದ ಅಂಚಿಗೆ ಬಂದು ತಲುಪಿದೆ. ಈ ಹಿಂದೆ 2007ರಲ್ಲಿ ಪೊಳಲಿಯ ಕಾಡಿನಲ್ಲಿ ಸಾಲು ಸಾಲಾಗಿ ಮರಗಳು ಹೂಬಿಟ್ಟದ್ದನ್ನು ದಾಖಲು ಮಾಡಿದ್ದೆವು. ಆ ಬಳಿಕ ಎರಡು ವರ್ಷಗಳ ಹಿಂದೆ ಪಡುಪಣಂಬೂರಿನ ಈ ಮರ ಹೂಬಿಟ್ಟು ಕಾಯಿಗಳು ದೊರಕಿದ್ದವು. ಅವುಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸುಮಾರು 2,50,000 ಬೀಜಗಳನ್ನು ವಿತರಿಸಿದ್ದೇವೆ. ಇದೀಗ ಇತ್ತೀಚೆಗಿನ ವರ್ಷಗಳಲ್ಲಿ ಕಂಡುಬಂದ ಎರಡನೇ ಮರ ಇದಾಗಿದೆ ಎನ್ನುತ್ತಾರೆ ಪ್ರೊ.ಎಸ್.ಎ.ಕೃಷ್ಣಯ್ಯ.

ಶ್ರೀಲಂಕಾದ ರಾಷ್ಟ್ರೀಯ ವೃಕ್ಷ: ಕರಿ ತಾಳೆ(ತಾಳಿ ಬೊಂಡ) ಮರದಂತೆ ಇರುವ ಈ ಮರವು ಪ್ರಾಚ್ಯ ವೃಕ್ಷ ಗಳಲ್ಲಿ ಒಂದು. ಪೂರ್ವಜರು ಈ ಮರವನ್ನು ಪರ್ಣ ಕುಟೀರ, ಮಳೆಗಾಳಿಯಿಂದ ರಕ್ಷಣೆಗೆ , ಕೃಷಿಕೆಲಸ ನಡೆಸಲು, ಗೊರಬಾಗಿ, ಬರವಣಿಗೆಗೆ ಬಳಕೆ ಮಾಡುತ್ತಿದ್ದರು. ಈ ಮರವು ಹಸಿರು, ಹಸಿವು ಮತ್ತು ಅಕ್ಷರ ಪ್ರಪಂಚದ ಪ್ರತೀಕವಾಗಿದೆ. ಇದರ ವೈಜ್ಞಾನಿಕ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ. ಸಂಸ್ಕೃತದಲ್ಲಿ ಅವಿನಾಶಿ, ತುಳುವಿನಲ್ಲಿ ಪಣೋಲಿದ ಮರ, ಇಂಡೋನೇಶಿಯಾದಲ್ಲಿ ಲೊಂಟಾರ, ಕೇರಳದಲ್ಲಿ ಕೊಡಪಣ ಮರ ಹಾಗೂ ಸಾಮಾನ್ಯವಾಗಿ ಸೀತಾಳೆ ಮರ ಎಂದು ಗುರುತಿಸಲಾಗುತ್ತದೆ. ಇದು ಶ್ರೀಲಂಕಾದ ರಾಷ್ಟ್ರೀಯ ವೃಕ್ಷವಾಗಿದೆ.

ಶ್ರೀತಾಳೆಮರದಲ್ಲಿ ಒಂಟಿ ಹೊಂಬಾಳೆ(ಕೋಡು) ಅರಳಿದಾಗ ಸುಮಾರು ಲೆಕ್ಕಕ್ಕೆ ಸಿಗದಷ್ಟು ಹೂವುಗಳು ಸುಂದರವಾಗಿ ಕಾಣುತ್ತವೆ. ಸುಮಾರು 8 ತಿಂಗಳ ಕಾಲ ಹೂವು ಮರದಲ್ಲಿರುತ್ತವೆ. ನಂತರ ಸುಮಾರು ಎಂಟು ತಿಂಗಳ ಕಾಲ ಬೀಜ ಕೂಡ ಮರದಲ್ಲಿರುತ್ತದೆ. ನಂತರ ಇವೆಲ್ಲವೂ ಉದುರಿ ಬೀಳುತ್ತವೆ. ಹೀಗೆ ಒಂದೇ ಮರದಲ್ಲಿ ಸುಮಾರು 2 ಟನ್ ಬೀಜಗಳು ಸಿಗುತ್ತವೆ. ಮುಂದೆ ಕ್ರಮೇಣವಾಗಿ ಈ ಮರ ಸಾಯುತ್ತದೆ ಎಂದು ಪ್ರೊ.ಎಸ್.ಎ. ಕೃಷ್ಣಯ್ಯ ಮಾಹಿತಿ ನೀಡಿದರು.

ಆತ್ರಾಡಿಯ ತಾಳೆಮರದ ಸಂರಕ್ಷಣೆ: ಆತ್ರಾಡಿ ಪರೀಕದಲ್ಲಿ ಕಂಡು ಬಂದಿರುವ ಕಾಡುಶ್ರೀತಾಳೆ ಮರ ವೌಢ್ಯಕ್ಕೆ ಬಲಿಯಾಗದಂತೆ ಎಚ್ಚರ ವಹಿಸಿ ಅದರ ಸಂರಕ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ. ಈ ಮೂಲಕ ಇದರ ಬೀಜವನ್ನು ಸಂಗ್ರಹಿಸಿ ತಳಿಯ ಪುನರುತ್ಪತ್ತಿ ಕಾರ್ಯವನ್ನು ಮಾಡಲಾಗುತ್ತದೆ.

ಸ್ಥಳೀಯರಾದ 72ವರ್ಷ ವಯಸ್ಸಿನ ಜಗಜ್ಜೀವನ್ ಶೆಟ್ಟಿ ನೀಡಿದ ಮಾಹಿತಿಯಂತೆ ಈ ಶ್ರೀತಾಳೆಮರಕ್ಕೆ 62ವರ್ಷ ಆಗಿರಬಹುದೆಂದು ಲೆಕ್ಕಚಾರ ಹಾಕ ಲಾಗಿದೆ. ಈ ಮರವನ್ನು ಸಂರಕ್ಷಿಸಿ ಉಳಿಸುವ ಪ್ರಯತ್ನದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಮತ್ತು ದಿನೇಶ್ ಪೂಜಾರಿ ಕೈ ಜೋಡಿಸಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ ಈ ಮರದಲ್ಲಿ ಒಂಟಿ ಹೊಂಬಾಳೆ(ಕೋಡು) ಅರಳಿ ನಿಂತಾಗ ದಿನೇಶ್ ಪೂಜಾರಿ ಈ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಡಿಸೆಂಬರ್‌ನಲ್ಲಿ ಹೂವು ಬಿಟ್ಟಾಗ ಅದರ ಫೋಟೊವನ್ನು ಗಣೇಶ್‌ರಾಜ್ ಸರಳ ಬೆಟ್ಟು ಸಾಮಾಜಿಕ ಜಾಲತಾಣದಲ್ಲಿ ಪ್ರಕಟ ಮಾಡಿದ್ದರು. ಇವರು ಗಂಡು ತಾಳೆಬೊಂಡ ಮರ ಹೂವು ಬಿಟ್ಟಿದೆ ಎಂದು ಭಾವಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ತಿಳಿದ ಪ್ರೊ.ಎಸ್.ಎ.ಕೃಷ್ಣಯ್ಯ ಇವರನ್ನು ಸಂಪರ್ಕಿಸಿ ಈ ಕುರಿತು ಸರಿಯಾದ ಮಾಹಿತಿ ನೀಡಿದರು. ಸ್ಥಳೀಯರ ಸಹಕಾರದೊಂದಿಗೆ ಇಲ್ಲಿ ಜೈವಿಕ ಕಣಜವನ್ನು ರಚಿಸಿ, ಅದರಲ್ಲಿ ಈ ಮರದಿಂದ ಬಿದ್ದ ಬೀಜವನ್ನು ಸಂಗ್ರಹಿಸಲು ಪ್ರೊ.ಎಸ್.ಎ.ಕೃಷ್ಣಯ್ಯ ಮುಂದಾಗಿದ್ದಾರೆ. ಅದೇ ರೀತಿ ವೌಢ್ಯಕ್ಕೆ ಬಲಿಯಾಗದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಅವರು ಮಾಡುತ್ತಿದ್ದಾರೆ.

ಶ್ರೀತಾಳೆಮರ ವೀಕ್ಷಿಸಿದ ಸಿದ್ಧಲಿಂಗಯ್ಯ

ಉಡುಪಿಗೆ ಆಗಮಿಸಿದ್ದ ಬಂಡಾಯ ಕವಿ ಸಿದ್ದಲಿಂಗಯ್ಯ ಅವರನ್ನು ಪ್ರೊ.ಎಸ್.ಎ. ಕೃಷ್ಣಯ್ಯ ಆತ್ರಾಡಿ ಬಳಿ ಕಾಡು ಶ್ರೀತಾಳೆ ಮರ ಹೂವು ಬಿಟ್ಟ ಅಪರೂಪದ ದೃಶ್ಯವನ್ನು ವೀಕ್ಷಿಸಲು ರವಿವಾರ ಕರೆದೊಯ್ದರು.

ಅತ್ಯಂತ ವಿಶಿಷ್ಟವಾದ ಹೂವನ್ನು ವೀಕ್ಷಿಸಿದ ಸಿದ್ದಲಿಂಗಯ್ಯ ಆಶ್ಚರ್ಯ ವ್ಯಕ್ತಪಡಿಸಿ ಇದರ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯ ಇದೆ ಎಂದರು. ಈ ಮರದ ವಿಶೇಷತೆ ಹಾಗೂ ಇದರ ಸಂರಕ್ಷಣೆಯ ಕುರಿತು ವಿವರವಾದ ಮಾಹಿತಿಯನ್ನು ಎಸ್.ಎ.ಕೃಷ್ಣಯ್ಯ ನೀಡಿದರು.

ಹಸಿರು, ಹಸಿವು ಮತ್ತು ಅಕ್ಷರ ಪ್ರತೀಕವಾಗಿರುವ ಶ್ರೀತಾಳೆ ಮರದಲ್ಲಿ ಒಂಟಿ ಹೊಂಬಾಳೆ(ಕೋಡು) ಅರಳಿನಿಂತಾಗ ವೌಢ್ಯದಿಂದ ಕಡಿದು ಉರುಳಿಸದೆ, ಈ ಪರಂಪರಾ ವೃಕ್ಷವನ್ನು ಉಳಿಸಬೇಕು. ಈ ಬಗ್ಗೆ ಸ್ಥಳೀಯ ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ, ದೇಶದಾದ್ಯಂತ ಇದರ ಬೀಜವನ್ನು ವಿತರಿಸಲಾಗುತ್ತಿದೆ.

-ಪ್ರೊ.ಎಸ್.ಎ.ಕೃಷ್ಣಯ್ಯ, ನಿರ್ದೇಶಕರು,

ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ, ಉಡುಪಿ

Writer - ನಝೀರ್ ಪೊಲ್ಯ

contributor

Editor - ನಝೀರ್ ಪೊಲ್ಯ

contributor

Similar News