ಪೌರತ್ವ ಮಸೂದೆ ವಿರುದ್ಧ 1000ಕ್ಕೂ ಅಧಿಕ ವಿಜ್ಞಾನಿಗಳು, ತಜ್ಞರ ಸಹಿ ಹಾಕಿದ ಹೇಳಿಕೆ ಬಿಡುಗಡೆ

Update: 2019-12-19 06:48 GMT
Photo: PTI

ಲಕ್ನೋ, ಡಿ. 5: ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ದೇಶ ಹಾಗೂ ವಿದೇಶದ 1000ಕ್ಕೂ ಅಧಿಕ ಭಾರತೀಯ ವಿಜ್ಞಾನಿಗಳು ಹಾಗೂ ತಜ್ಞರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಇವರಲ್ಲಿ ಮುಂಬೈ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ನಿರ್ದೇಶಕ ಸಂದೀಪ್ ತ್ರಿವೇದಿ, ಬೆಂಗಳೂರಿನ ಇಂಟರ್‌ನ್ಯಾಶನಲ್ ಸೆಂಟರ್ ಪಾರ್ ಥಿಯೋರೆಟಿಕಲ್ ಸಯನ್ಸ್‌ನ ನಿರ್ದೇಶಕ ರಾಜೇಶ್ ಗೋಪಕುಮಾರ್ ಹಾಗೂ ಇಟಲಿಯ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಥಿಯೋರೆಟಿಕಲ್ ಫಿಸಿಕ್ಸ್‌ನ ನಿರ್ದೇಶಕ ಅತೀಶ್ ದಾಭೋಲ್ಕರ್ ಸೇರಿದ್ದಾರೆ.

ಸಂವಿಧಾನದ ಕಲಂ 14ನ್ನು ಉಲ್ಲೇಖಿಸಿರುವ ಹೇಳಿಕೆ, ನೆರೆಯ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಆಶ್ರಯ ನೀಡುವುದು ಶ್ಲಾಘನೀಯ. ಆದರೆ, ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ನಿರ್ಧರಿಸಲು ಧರ್ಮವನ್ನು ಮಾನದಂಡವಾಗಿ ಬಳಸುವುದು ಸರಿಯಾದ ಮಾರ್ಗವಲ್ಲ ಎಂದಿದೆ.

ಪ್ರಸ್ತಾವಿತ ಮಸೂದೆಯಲ್ಲಿ ಪೌರತ್ವಕ್ಕೆ ಮಾನದಂಡವಾಗಿ ಧರ್ಮವನ್ನು ಬಳಸುವುದು ಚರಿತ್ರೆಯಲ್ಲಿ ವೈಚಾರಿಕತೆಯ ವಿರಾಮವನ್ನು ಸೂಚಿಸುತ್ತದೆ. ಅಲ್ಲದೆ, ಇದು ಸಂವಿಧಾನದ ಮೂಲ ರಚನೆಗೆ ಹೊಂದಿಕೆಯಾಗುವುದಿಲ್ಲ.

ಮುಖ್ಯವಾಗಿ ಮಸೂದೆ ಮುಸ್ಲಿಮರನ್ನು ಎಚ್ಚರಿಕೆಯಿಂದ ಹೊರಗಿಡುವುದು ದೇಶದ ಬಹುರೂಪತೆಯ ವಿನ್ಯಾಸಕ್ಕೆ ಕಳಂಕ ಉಂಟು ಮಾಡಬಹುದು ಎಂಬ ಭೀತಿ ನಮಗೆ ಇದೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News