ಬ್ರೂ ಜನಾಂಗೀಯ ನಿರಾಶ್ರಿತರ ಶಿಬಿರಕ್ಕೆ ಪಡಿತರ ಕಡಿತ: ವಿವರಣೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2019-12-09 18:08 GMT

ಹೊಸದಿಲ್ಲಿ, ಡಿ.9: ತ್ರಿಪುರಾದಲ್ಲಿರುವ ಬ್ರೂ ಜನಾಂಗದ ನಿರಾಶ್ರಿತರು ವಾಸಿಸುತ್ತಿರುವ ಶಿಬಿರಗಳಿಗೆ ಪಡಿತರ ಕಡಿತ ಮಾಡಿರುವ ಬಗ್ಗೆ ಎರಡು ವಾರದೊಳಗೆ ವಿವರಣೆ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಇಂತಹ ಒಂದು ಶಿಬಿರದಲ್ಲಿ ಹಸಿವಿನಿಂದ 6 ನಿರಾಶ್ರಿತರು ಮೃತಪಟ್ಟಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಸೂಚನೆ ನೀಡಿದೆ.
ಯಾವುದೇ ಕಾರಣಕ್ಕೂ ಈ ರೀತಿ ಮಾಡಬೇಡಿ. ಜನರು ಹಸಿವಿನಿಂದ ಸಾಯಲು ಬಿಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಕೇಂದ್ರ ಸರಕಾರಕ್ಕೆ ತಿಳಿಸಿತು.
ಅಕ್ಟೋಬರ್ 1ರಿಂದ ಶಿಬಿರಗಳಿಗೆ ಪಡಿತರ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಶಿಬಿರದಲ್ಲಿದ್ದ 6 ನಿರಾಶ್ರಿತರು ಮೃತಪಟ್ಟಿರುವುದಾಗಿ ಕಳೆದ ತಿಂಗಳು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ತ್ರಿಪುರಾ ಸರಕಾರದ 6 ಅಧಿಕಾರಿಗಳಿಗೆ ಸುಪ್ರೀಂಕೋರ್ಟ್‌ನ ನ್ಯಾಯವಾದಿ ಕಬೀರ್ ಚೌಧರಿ ಲೀಗಲ್ ನೋಟಿಸ್ ನೀಡಿದ್ದರು.
ಮಿಝೊರಾಂನಲ್ಲಿ ಜನಾಂಗೀಯ ಹಿಂಸೆ ಉಲ್ಬಣಿಸಿದ ಕಾರಣದಿಂದ 1997ರಿಂದ ತ್ರಿಪುರಾದ 6 ನಿರಾಶ್ರಿತರ ಶಿಬಿರದಲ್ಲಿ 32000ಕ್ಕೂ ಹೆಚ್ಚು ಬ್ರೂ ಜನಾಂಗದ ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಈ ವರ್ಷಾಂತ್ಯದೊಳಗೆ ಇವರನ್ನು ಮಿಝೊರಾಂಗೆ ವಾಪಸು ಕಳುಹಿಸಲು ತ್ರಿಪುರಾ ಯೋಜನೆ ರೂಪಿಸಿದ್ದು ಇದರಂತೆ 9ನೇ ಹಂತದ ವಾಪಸಾತಿ ಪ್ರಕ್ರಿಯೆಗೆ ಅಕ್ಟೋಬರ್ 3ರಂದು ಚಾಲನೆ ದೊರಕಿದೆ.
ಈ ಮಧ್ಯೆ, ಮಿಝೊರಾಂಗೆ ವಾಪಸು ತೆರಳಲು ನಿರಾಕರಿಸಿದ ನಿರಾಶ್ರಿತರಿಗೆ ಆಹಾರ ಮತ್ತು ನಗದು ಸಹಾಯವನ್ನು ಸ್ಥಗಿತಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಅಕ್ಟೋಬರ್ 31ರಂದು ಉತ್ತರ ತ್ರಿಪುರಾದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ. ಮಿರೆರಾಂಗೆ ವಾಪಸಾಗಲು ನಿರಾಕರಿಸುವ ನಿರಾಶ್ರಿತರು ತ್ರಿಪುರಾದಲ್ಲೇ ಉಳಿಯಲು ಅವಕಾಶ ನೀಡಬೇಕೆಂದು ಹಲವು ರಾಜಕೀಯ ಪಕ್ಷಗಳೂ ಒತ್ತಾಯಿಸಿವೆ. ತ್ರಿಪುರಾದಲ್ಲಿ ಗುರುತಿಸಲಾಗಿರುವ 21 ಬುಡಕಟ್ಟು ಸಮುದಾಯದಲ್ಲಿ ಬ್ರೂ ಸಮುದಾಯ (ಅತ್ಯಧಿಕ ಜನಸಂಖ್ಯೆಯ ದೃಷ್ಟಿಯಲ್ಲಿ) ಎರಡನೇ ದೊಡ್ಡ ಸಮುದಾಯವಾಗಿದೆ . ಇವರು ತ್ರಿಪುರಾ ಮೂಲದವರೇ ಆಗಿದ್ದಾರೆ. ಇವರು ವಿದೇಶಿಯರಲ್ಲ, ಆಂತರಿಕವಾಗಿ ಸ್ಥಳಾಂತರಗೊಂಡ ಭಾರತೀಯರು. ಆದ್ದರಿಂದ ಇವರಿಗೆ ತ್ರಿಪುರಾದಲ್ಲಿ ವಾಸಿಸುವ ಮೂಲಭೂತ ಹಕ್ಕು ಇದೆ ಎಂದು ಮಿರೊ ನ್ಯಾಷನಲ್ ಫ್ರಂಟ್‌ನ ಮುಖಂಡ ಲಾಲ್ತ್‌ಮಿಂಗ್ ಲಿಯಾನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News