ಆರ್ಥಿಕ ರಾಜಧಾನಿಯೂ, ಕಾರ್ಪೊರೇಟ್ ದಿಗ್ವಿಜಯವೂ

Update: 2019-12-09 18:22 GMT

ಚುನಾಯಿತ ಸರಕಾರ ಎಷ್ಟು ಸುಸ್ಥಿರವಾಗಿರುತ್ತದೆ ಎನ್ನುವುದೇ ಆಡಳಿತ ವ್ಯವಸ್ಥೆಯ ಮಾನದಂಡವಾಗುವುದೇ ಹೊರತು ಯಾವ ಪಕ್ಷ ಅಧಿಕಾರದಲ್ಲಿದೆ ಎನ್ನುವುದಲ್ಲ. ಇಲ್ಲಿ ಜಾತ್ಯತೀತತೆ, ಸಮಾಜವಾದ, ಸಾಮುದಾಯಿಕ ಹಿತಾಸಕ್ತಿ, ಶೋಷಿತ ವರ್ಗಗಳ ಬವಣೆ, ಶ್ರಮಜೀವಿಗಳ ದುರವಸ್ಥೆ, ಕಾರ್ಮಿಕರ ಅನಿಶ್ಚಿತತೆ ಎಲ್ಲವೂ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಮರೆಯಾಗಿಬಿಡುತ್ತದೆ. ಹಾಗೆಯೇ ಈ ವಿದ್ಯಮಾನಗಳನ್ನು ಆಧರಿಸಿಯೇ ಪ್ರಾದೇಶಿಕ ಹಿತಾಸಕ್ತಿ ರಕ್ಷಣೆಗಾಗಿ ರೂಪುಗೊಳ್ಳುವ ಪ್ರಾದೇಶಿಕ ಪಕ್ಷಗಳ ಪ್ರಾದೇಶಿಕತೆಯೂ ಸಹ ಶಿಥಿಲವಾಗುತ್ತದೆ. ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ ಸಾಂವಿಧಾನಿಕ ಹುದ್ದೆ ಮತ್ತು ಸಂಸ್ಥೆಗಳು ಹೇಗೆ ದುರ್ಬಳಕೆಯಾಗಿತ್ತು ಎನ್ನುವುದನ್ನು ಗಮನಿಸಿದರೆ ಈ ಬೆಳವಣಿಗೆಗಳ ಹಿಂದಿನ ಸೂಕ್ಷ್ಮ ತರಂಗಗಳನ್ನು ಗ್ರಹಿಸಲು ಸಾಧ್ಯ.


ರಾಜಕಾರಣದಲ್ಲಿ ಶಾಶ್ವತವಾದ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎನ್ನುವುದು ಸಾಮಾನ್ಯವಾದ ನಂಬಿಕೆ. ಆದರೆ ರಾಜಕಾರಣದಲ್ಲಿ ಶಾಶ್ವತವಾದ ಮೌಲ್ಯಗಳು ಇಲ್ಲವೇ ಇಲ್ಲ ಎನ್ನುವುದು ಇತ್ತೀಚೆಗಷ್ಟೇ ತಿಳಿದುಬರುತ್ತಿರುವ ವಾಸ್ತವ. ಮೌಲ್ಯಗಳು ಏಕೆ ಶಾಶ್ವತ ಅಲ್ಲ ಎಂದರೆ ಇಲ್ಲದಿರುವ ಯಾವುದೇ ವಸ್ತು ಅಥವಾ ವಿಚಾರವೂ ಶಾಶ್ವತ ಸ್ಥಾನ ಪಡೆಯಲಾಗುವುದಿಲ್ಲ. ರಾಜಕಾರಣದಲ್ಲಿ ಮೌಲ್ಯಗಳೇ ಉಳಿದಿಲ್ಲ. ವ್ಯಕ್ತಿಗತವಾಗಿ ಎಲ್ಲೋ ಒಂದಿಬ್ಬರಲ್ಲಿ ಮೌಲ್ಯದ ಕಣಗಳು ಕಂಡುಬಂದರೆ ಅದು ಅಪಭ್ರಂಶ ಎನ್ನಬಹುದಷ್ಟೇ. ಮೂರೇ ದಶಕಗಳಲ್ಲಿ ನಾವು ಮೌಲ್ಯಾಧಾರಿತ ರಾಜಕಾರಣದಿಂದ ಮೌಲ್ಯರಹಿತ ರಾಜಕಾರಣಕ್ಕೆ ತಲುಪಿಬಿಟ್ಟಿದ್ದೇವೆ. ನೀರ್‌ಸಾಬ್ ಎಂದೇ ಹೆಸರಾಂತರಾಗಿದ್ದ ನಝೀರ್ ಸಾಬ್ ಅವರಂತಹ ನಾಯಕರಿಂದ ಒಮ್ಮೆಲೇ ಠಾಕ್ರೆ-ಪವಾರ್ ಅವರಂತಹ ನಾಯಕರ ತೆಕ್ಕೆಗೆ ಬಿದ್ದುಬಿಟ್ಟಿದ್ದೇವೆ. ಒಂದು ಕ್ಷಣವಾದರೂ ಮುಖ್ಯಮಂತ್ರಿಯಾದರೆ ಸಾಕು ಎನ್ನುವ ಹಪಾಹಪಿಗೆ, ಒಮ್ಮೆ ಮುಖ್ಯಮಂತ್ರಿಯಾಗಿ ಪೀಠದಲ್ಲಿ ಕುಳಿತುಬಿಡೋಣ ಆಮೇಲೆ ಹೇಗೋ ಸರಿದೂಗಿಸಿದರಾಯಿತು ಎನ್ನುವ ಹಂಬಲಕ್ಕೆ, ಗೌರವ ಘನತೆ ಮಣ್ಣುಪಾಲಾದರೂ ಚಿಂತೆಯಿಲ್ಲ ಅಧಿಕಾರ ದೊರೆತರೆ ಸಾಕು ಎಂಬ ವ್ಯಾಮೋಹಕ್ಕೆ ಸಾಂವಿಧಾನಿಕ ಪ್ರೇರಣೆ ದೊರೆಯುವಂತಹ ಒಂದು ವ್ಯವಸ್ಥೆಗೆ ನಾವು ತಲುಪಿಬಿಟ್ಟಿದ್ದೇವೆ. ಇಷ್ಟಾದರೂ ಪ್ರಜಾತಂತ್ರದ ಗೆಲುವು, ಜಾತ್ಯತೀತತೆಯ ಗೆಲುವು ಎಂದೆಲ್ಲಾ ಸಂಭ್ರಮಿಸುತ್ತಿದ್ದೇವೆ. ನಮಗೇ ಅರಿವಿಲ್ಲದಂತೆ ಪ್ರಜಾತಂತ್ರ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಮುಂಬೈಯ ಚೋರ್ ಬಝಾರಿನಲ್ಲಿ ಬಿಕರಿಯಾಗಲು ಇಟ್ಟುಬಿಟ್ಟಿದ್ದೇವೆ.

ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದನ್ನು ಪ್ರಜಾತಂತ್ರದ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ. ಒಂದು ರೀತಿಯಲ್ಲಿ ಇದು ಸತ್ಯ. ಏಕೆಂದರೆ ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದ ನಂತರ ಬಿಜೆಪಿ ಸರಕಾರ ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನೂ ನಾಶಪಡಿಸುತ್ತಲೇ ಬಂದಿದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರಕಾರ ಸ್ಥಾಪಿಸಲು ರಾಜ್ಯಪಾಲರ ಕಚೇರಿಯನ್ನು ರಾತ್ರೋರಾತ್ರಿ ಬಳಸಿಕೊಂಡ ರೀತಿ, ರಾಷ್ಟ್ರಪತಿಗಳ ಅಂಕಿತಕ್ಕೂ ಕಾಯದೆ ಪ್ರಧಾನಮಂತ್ರಿಗೆ ಇರುವ ವಿಶೇಷಾಧಿಕಾರವನ್ನು ಬಳಸಿಕೊಂಡ ರೀತಿ ಸರ್ವಾಧಿಕಾರಿಗಳನ್ನೂ ನಾಚಿಸುವಂತಹುದು. ಭಾರತದ ರಾಜಕಾರಣದಲ್ಲಿ ರಾಜ್ಯಪಾಲರ ಹುದ್ದೆಯನ್ನು ಆಡಳಿತಾರೂಢ ಕೇಂದ್ರ ಸರಕಾರಗಳು ದುರ್ಬಳಕೆ ಮಾಡಿಕೊಳ್ಳುವುದು ಅತಿಶಯವೇನಲ್ಲ. ಹೊಸತೂ ಅಲ್ಲ. 1957ರಲ್ಲಿ ಕೇರಳದ ಎಡರಂಗ ಸರಕಾರದ ಪದಚ್ಯುತಿಯಿಂದಲೇ ಈ ದುಷ್ಟ ಪರಂಪರೆಗೆ ನಾಂದಿ ಹಾಡಲಾಗಿದೆ. ಇಂದಿರಾ ಯುಗದಲ್ಲಿ ರಾಜ್ಯಪಾಲ ಎಂದರೆ ಕೇಂದ್ರ ಸರಕಾರದ ಏಜೆಂಟರು ಎಂದೇ ಪ್ರಚಲಿತವಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಯಾವುದೇ ಕಾಂಗ್ರೆಸೇತರ ಸರಕಾರಗಳೂ ಈ ಧೋರಣೆಯಿಂದ ಹೊರತಾಗಿಲ್ಲ ಎನ್ನುವುದೂ ಗಮನಾರ್ಹ. ಚುನಾಯಿತ ಸರಕಾರಗಳನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರುವ ಪದ್ಧತಿ ಯಾವುದೇ ತಿದ್ದುಪಡಿ ಇಲ್ಲದೆಯೇ ಸಾಂವಿಧಾನಿಕ ನಿಯಮವಾಗಿ ರೂಪುಗೊಂಡಿದ್ದನ್ನು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷದ ಈ ನೀತಿಯನ್ನು ತೀವ್ರವಾಗಿ ಖಂಡಿಸುತ್ತಿದ್ದ ಬಿಜೆಪಿ ತನ್ನ ಪ್ರತಿಸ್ಪರ್ಧಿಯನ್ನೂ ಮೀರಿಸಿದ್ದು ಮಹಾರಾಷ್ಟ್ರದಲ್ಲಿ ಮತ್ತೊಂದು ಹೊಸ ಪರ್ವಕ್ಕೆ ನಾಂದಿ ಹಾಡಿದೆ.

ಕೆಲವು ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ಮಹಾರಾಷ್ಟ್ರದಲ್ಲಿ ನಡೆದ ಮಧ್ಯರಾತ್ರಿಯ ಪ್ರಹಸನ ಭಾರತದ ಆಳುವ ವರ್ಗಗಳ ಹೊಸ ಸ್ವರೂಪವನ್ನು ಪರಿಚಯಿಸುತ್ತಿರುವುದನ್ನು ಗಮನಿಸಬೇಕಿದೆ. 1980ರ ದಶಕದಲ್ಲಿ ದೇಶಾದ್ಯಂತ ಬೃಹತ್ ಅಲೆಯಂತೆ ರೂಪುಗೊಂಡ ಪ್ರಾದೇಶಿಕ ಪಕ್ಷ ರಾಜಕಾರಣ ಕ್ರಮೇಣ ರಾಷ್ಟ್ರ ರಾಜಕಾರಣದಲ್ಲಿ ವಿಲೀನವಾಗುತ್ತಿದ್ದು, ಈ ಅಲೆಯೊಡನೆ ತೇಲಿಬಂದಿದ್ದ ಕೆಲವು ಸೀಮಿತ ಮೌಲ್ಯಗಳನ್ನೂ ಇಲ್ಲವಾಗಿಸಿದೆ. ಪ್ರಾದೇಶಿಕ ಪಕ್ಷಗಳು ಉಗಮವಾಗಿದ್ದು ಅಧಿಕಾರ ಗ್ರಹಣದ ಉದ್ದೇಶದಿಂದಲೇ ಆದರೂ, ರಾಷ್ಟ್ರ ರಾಜಕಾರಣದ ಆಧಿಪತ್ಯವನ್ನು ವಿರೋಧಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸುವ ಧ್ಯೇಯವನ್ನು ಕೊಂಚಮಟ್ಟಿಗಾದರೂ ಹೊಂದಿದ್ದುದನ್ನು ಅಲ್ಲಗಳೆಯುವಂತಿಲ್ಲ. ಇಂದಿರಾ ಅಲೆಯ ವಿರುದ್ಧ ಈಜಿ ಗೆದ್ದ ಪ್ರಾದೇಶಿಕ ಪಕ್ಷಗಳು ಮೂಲತಃ ಭಾರತದ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ಬದ್ಧವಾಗಿದ್ದವು ಮತ್ತು ಅಧಿಕಾರ ಕೇಂದ್ರೀಕರಣದ ವಿರುದ್ಧ ಇದ್ದವು. ಕರ್ನಾಟಕದ ಜನತಾಪಕ್ಷ, ಉತ್ತರಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷ, ಬಿಹಾರದ ರಾಷ್ಟ್ರೀಯ ಜನತಾದಳ, ಒಡಿಶಾದ ಬಿಜು ಜನತಾ ದಳ, ಆಂಧ್ರ ಪ್ರದೇಶದ ತೆಲುಗು ದೇಶಂ ಈ ಪಕ್ಷಗಳಿಗೆ ಕೇಂದ್ರದಲ್ಲಿನ ಅಧಿಕಾರ ಪೀಠಕ್ಕಿಂತಲೂ ಹೆಚ್ಚು ಪ್ರಾದೇಶಿಕ ಅಸ್ಮಿತೆಯೇ ಅಪ್ಯಾಯಮಾನವಾಗಿತ್ತು. 1989ರಲ್ಲಿ ಕೇಂದ್ರದಲ್ಲಿ ರಚನೆಯಾದ ವಿ.ಪಿ. ಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದ ಆದ್ಯತೆ ಈ ಪ್ರಾದೇಶಿಕ ಅಸ್ಮಿತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು.

ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆ ಹೆಚ್ಚು ಮಹತ್ವ ಪಡೆಯುತ್ತದೆ. ಪಂಚಾಯತ್ ವ್ಯವಸ್ಥೆ ಎಷ್ಟೇ ಆಳವಾಗಿ ಬೇರೂರಿದ್ದರೂ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರೀಕೃತ ಆಡಳಿತ ಗಟ್ಟಿಯಾಗುತ್ತಿದೆ. ನವ ಉದಾರವಾದ ಮತ್ತು ಜಾಗತೀಕರಣದ ನಂತರದಲ್ಲಿ ದೇಶದ ಅರ್ಥವ್ಯವಸ್ಥೆಯ ಸ್ವರೂಪವೇ ಬದಲಾಗಿದ್ದು ವಿಕೇಂದ್ರೀಕರಣ ಪ್ರಕ್ರಿಯೆಯ ಹಿನ್ನಡೆಗೂ ಕಾರಣವಾಗಿದೆ. ಪಂಚಾಯತ್ ವ್ಯವಸ್ಥೆಯ ಯಶಸ್ಸಿಗೆ ಸಾಮಾನ್ಯ ಪ್ರಜೆಗಳ ಒಳಗೊಳ್ಳುವಿಕೆ ಮತ್ತು ಜನಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಚುನಾಯಿತ ಸರಕಾರದ ಭಾಗವಹಿಸುವಿಕೆ ಪ್ರಧಾನವಾಗುತ್ತದೆ. ಆದರೆ ಕಾರ್ಪೊರೇಟ್ ನಿಯಂತ್ರಿತ ನವ ಉದಾರವಾದದ ಬಂಡವಾಳ ವ್ಯವಸ್ಥೆ ಈ ಎರಡೂ ಪ್ರಕ್ರಿಯೆಗಳಿಗೆ ಮಾರಕವಾಗಿ ಪರಿಣಮಿಸಿದೆ. ಸರಕಾರದ ನೀತಿ, ಯೋಜನೆಗಳನ್ನು ರೂಪಿಸುವಲ್ಲಿ ಜನಪ್ರತಿನಿಧಿಗಳ ದನಿಗೇ ಬೆಲೆಯಿಲ್ಲದಂತಾಗಿದ್ದು ಔದ್ಯಮಿಕ ಹಿತಾಸಕ್ತಿಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ಮತ್ತೊಂದೆಡೆ ಚುನಾಯಿತ ಸರಕಾರಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಮ್ಮ ಭಾಗವಹಿಸುವಿಕೆಯನ್ನೇ ನಿರಾಕರಿಸುತ್ತಿರುವುದರಿಂದ ಆಡಳಿತಾರೂಢ ಸರಕಾರ ಮತ್ತು ಸಾಮಾನ್ಯ ಜನಜೀವನದ ನಡುವಿನ ಸೂಕ್ಷ್ಮ ಸಂಬಂಧಗಳು ಕಳೆದುಹೋಗುತ್ತಿವೆ. ನವ ಉದಾರವಾದದ ಪರಿಸರದಲ್ಲಿ ಸಾಮಾನ್ಯ ಜನರು ನಿಮಿತ್ತ ಮಾತ್ರ ಎನ್ನುವಂತಾಗಿದೆ. ಹಾಗಾಗಿಯೇ ಚುನಾವಣೆಗಳಲ್ಲೂ ಮತದಾರರು ನಿಮಿತ್ತ ಮಾತ್ರವಾಗುತ್ತಿದ್ದಾರೆ.

ಈ ಅಂಶವನ್ನು ಇತ್ತೀಚೆಗೆ ನಡೆಯುತ್ತಿರುವ ಕೆಲವು ರಾಜ್ಯಗಳ ಚುನಾವಣೆಗಳಲ್ಲಿ ಕಾಣಬಹುದು. ಪ್ರಾದೇಶಿಕ ಪಕ್ಷಗಳು ಒಂದೆಡೆ ಈ ಬೆಳವಣಿಗೆಯ ಫಲಾನುಭವಿಗಳಾದರೆ ಮತ್ತೊಂದೆಡೆ ಇದರಿಂದ ತಮ್ಮ ಪ್ರಾದೇಶಿಕ ಅಸ್ಮಿತೆಯನ್ನು ಕಳೆದುಕೊಳ್ಳುತ್ತಿವೆ. 2014ರ ನಂತರದಲ್ಲಿ ತೀವ್ರವಾಗುತ್ತಿರುವ ‘‘ಒಂದು ದೇಶ-ಒಂದು ಸಂಸ್ಕೃತಿ’’ಯ ಕೂಗು ಒಕ್ಕೂಟ ವ್ಯವಸ್ಥೆಗೇ ಮಾರಕವಾಗುತ್ತಿರುವುದನ್ನು ಕಾಶ್ಮೀರದ ಹಿನ್ನೆಲೆಯಲ್ಲಿ ಗಮನಿಸಬಹುದು. ರಾಜ್ಯಗಳಿಗೆ ಸಾಂವಿಧಾನಿಕವಾಗಿ ನೀಡಲಾಗುತ್ತಿದ್ದ ವಿಶೇಷಾಧಿಕಾರಗಳನ್ನು ಕ್ರಮೇಣ ಕಸಿದುಕೊಳ್ಳುವ ನಿಟ್ಟಿನಲ್ಲಿ ಭಾರತದ ಕೇಂದ್ರೀಕೃತ ಆಡಳಿತ ವ್ಯವಸ್ಥೆ ದಾಪುಗಾಲು ಹಾಕುತ್ತಿದೆ. ದುರಂತ ಎಂದರೆ ಕಾಶ್ಮೀರದ ದಿಗ್ಬಂಧನದ ನಂತರದಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳೂ ಈ ವಿಚಾರದಲ್ಲಿ ಪ್ರತಿರೋಧ ವ್ಯಕ್ತಪಡಿಸಿಲ್ಲ.. ಕನಿಷ್ಠ ಭಿನ್ನಾಭಿಪ್ರಾಯವನ್ನೂ ವ್ಯಕ್ತಪಡಿಸಿಲ್ಲ. ‘ಒಂದು ದೇಶ-ಒಂದು ಸಂಸ್ಕೃತಿ’ಯ ಘೋಷಣೆಯ ಹಿಂದೆ ಇರುವ ‘ಒಂದು ಆರ್ಥಿಕತೆ ಒಂದು ಮಾರುಕಟ್ಟೆಯ’ ದನಿಯನ್ನು ರಾಜಕೀಯ ಪಕ್ಷಗಳು ಕೇಳಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಕಾರ್ಪೊರೇಟ್ ರಾಜಕಾರಣ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗು ತ್ತಿದೆ. ಇದರ ಪ್ರಭಾವವನ್ನು ನಾವು ಹೊಸ ಮೈತ್ರಿಕೂಟಗಳಲ್ಲಿ, ರಾಜಕೀಯ ಮಿತ್ರ-ಶತ್ರುವಿನ ಅನರ್ಥಕೋಶಗಳಲ್ಲಿ ಕಾಣುತ್ತಿದ್ದೇವೆ.

ಕಾರ್ಪೊರೇಟ್ ರಾಜಕಾರಣದಲ್ಲಿ ಸುಸ್ಥಿರ ಸರಕಾರ ಮುಖ್ಯವಾಗುವುದೇ ಹೊರತು ಜಾತ್ಯತೀತತೆ ಅಥವಾ ಸಮ ಸಮಾಜದ ಪರಿಕಲ್ಪನೆಗಳಲ್ಲ. ಸುಸ್ಥಿರ ಸರಕಾರ ಮಾತ್ರವೇ ನವ ಉದಾರವಾದದ ಮಾರುಕಟ್ಟೆ ನೀತಿಗಳನ್ನು ನಿರ್ಭೀತಿಯಿಂದ, ಅಡ್ಡಿ ಆತಂಕಗಳಿಲ್ಲದೆ ಜಾರಿಗೊಳಿಸಲು ಸಾಧ್ಯ ಎನ್ನುವುದನ್ನು 2014ರ ನರೇಂದ್ರ ಮೋದಿ ಸರಕಾರ ನಿರೂಪಿಸಿದೆ. ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಗುಜರಾತ್ ಹೀಗೆ ಹಲವು ರಾಜ್ಯಗಳಲ್ಲಿ ಕಂಡಿದ್ದೇವೆ. ಶ್ರಮಿಕ ವರ್ಗಗಳ ಪ್ರತಿರೋಧವನ್ನು, ರೈತಾಪಿಯ ಹೋರಾಟಗಳನ್ನು, ಸಮಾನತೆಯ ಆಶಯಗಳನ್ನು ಕಡೆಗಣಿಸಿ ಕಾರ್ಪೊರೇಟ್ ಮಾರುಕಟ್ಟೆ ವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ಸುಸ್ಥಿರ ಸರಕಾರ ಹೆಚ್ಚು ಸಹಾಯಕವಾಗುತ್ತದೆ ಎನ್ನುವುದನ್ನೂ ಈ ರಾಜ್ಯಗಳ ಆರ್ಥಿಕ ನೀತಿಗಳಲ್ಲಿ ಗುರುತಿಸಬಹುದು. ನೋಟು ರದ್ದತಿ ಮತ್ತು ಜಿಎಸ್‌ಟಿ ನಿಯಮಗಳು ದೇಶವನ್ನು ಈ ದಿಕ್ಕಿನಲ್ಲೇ ಕೊಂಡೊಯ್ಯುತ್ತಿವೆ. ಬ್ಯಾಂಕುಗಳ ವಿಲೀನ, ವಿಮಾ ಕ್ಷೇತ್ರದ ಖಾಸಗೀಕರಣ, ಸಾರ್ವಜನಿಕ ಉದ್ದಿಮೆಗಳ ಮಾರಾಟ, ರೈಲ್ವೆ ಖಾಸಗೀಕರಣ ಈ ಎಲ್ಲ ನೀತಿಗಳ ಹಿಂದೆ ಇರುವುದು ಕಾರ್ಪೊರೇಟ್ ಹಿತಾಸಕ್ತಿ ಮತ್ತು ಕಾರ್ಪೊರೇಟ್ ಉದ್ಯಮದ ರಾಜಕೀಯ ಹಿತಾಸಕ್ತಿಯೇ ಆಗಿದೆ. ಇದನ್ನೇ ಗುಜರಾತ್‌ನಲ್ಲಿ ಮೋದಿ ಮಾದರಿಯ ಅಭಿವೃದ್ಧಿ ಎಂದು ಪ್ರಶಂಸಿಸಲಾಗುತ್ತಿತ್ತು.

ಈ ಅಭಿವೃದ್ಧಿ ಮಾರ್ಗದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಾದೇಶಿಕತೆಯನ್ನು ಕ್ರಮೇಣ ಕಳೆದುಕೊಂಡು ರಾಷ್ಟ್ರೀಯತೆಯಲ್ಲಿ ವಿಲೀನವಾಗುತ್ತಲೇ ಹೋಗುತ್ತವೆ. ಮೇಲ್ನೋಟಕ್ಕೆ ಪಕ್ಷಗಳು ಪ್ರಾದೇಶಿಕ ಸ್ವರೂಪವನ್ನೇ ಬಿಂಬಿಸಿದರೂ ಆಂತರಿಕವಾಗಿ ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಈ ಪಕ್ಷಗಳನ್ನು ನುಂಗಿಹಾಕಿರುತ್ತದೆ. ಇದರೊಟ್ಟಿಗೆ ಬಿಜೆಪಿ ಪ್ರತಿಪಾದಿಸುವ ಸಾಂಸ್ಕೃತಿಕ ರಾಷ್ಟ್ರೀಯತೆ ಮಾರುಕಟ್ಟೆ ವ್ಯವಸ್ಥೆಯನ್ನೇ ಬಳಸಿಕೊಂಡು ಪ್ರಾದೇಶಿಕತೆಯ ಚೌಕಟ್ಟಿನಲ್ಲಿ ಕಂಡುಬರುವ ಸಾಮುದಾಯಿಕ, ಸಾಂಸ್ಕೃತಿಕ ಅಸ್ಮಿತೆಗಳನ್ನೂ ನುಂಗಿಹಾಕುತ್ತದೆ. ಕನ್ನಡದ ಕೂಗು ಕೇಳದೆ ಇರುವುದಕ್ಕೆ ಇದೂ ಒಂದು ಕಾರಣ ಎನ್ನಬಹುದು. ಹಿಂದಿ ಹೇರಿಕೆಯ ಪ್ರಯತ್ನವನ್ನೂ ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಆರ್ಥಿಕ ನೀತಿಗಳನ್ನು ಅನುಸರಿಸುವಲ್ಲಿ ಯಾವ ಪ್ರಾದೇಶಿಕ ಪಕ್ಷಗಳೂ ಸ್ಪಷ್ಟ ಸೈದ್ಧಾಂತಿಕ ನೆಲೆ ಹೊಂದಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ನವ ಉದಾರವಾದವನ್ನು ವಿರೋಧಿಸುವುದಿರಲಿ, ಪ್ರಸ್ತುತ ಅರ್ಥವ್ಯವಸ್ಥೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಬಿಕ್ಕಟ್ಟು, ಹಿಂಜರಿತ, ಹಿನ್ನಡೆ ಮತ್ತು ಕುಸಿತ ಕಂಡುಬರುತ್ತಿದ್ದರೂ ಪ್ರತಿರೋಧದ ಕೀರಲು ದನಿಯನ್ನೂ ಪ್ರಾದೇಶಿಕ ಪಕ್ಷಗಳಿಂದ ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಕಾರ್ಪೊರೇಟ್ ಮಾರುಕಟ್ಟೆ ರಾಜಕೀಯ ವ್ಯವಸ್ಥೆಯ ಮೇಲೆ ತನ್ನ ಸಂಪೂರ್ಣ ಹಿಡಿತ ಸಾಧಿಸಿದೆ.

ಕರ್ನಾಟಕದ ಸಮ್ಮಿಶ್ರ ಸರಕಾರದ ನಾಟಕೀಯ ಪ್ರಹಸನದ ನಂತರ ಈಗ ಮಹಾರಾಷ್ಟ್ರದಲ್ಲಿ ಒಂದು ಹೊಸ ಪರ್ವವನ್ನೇ ಸೃಷ್ಟಿಸಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಿದೆ. ಪ್ರಾದೇಶಿಕ ಪಕ್ಷಗಳಿಂದ ಕೇಂದ್ರ ಸರಕಾರದ ನೀತಿಗಳ ಬಗ್ಗೆ ರಾಜಕೀಯ ವಿರೋಧ ವ್ಯಕ್ತವಾಗುವುದೇ ಹೊರತು ಸೈದ್ಧಾಂತಿಕ ವಿರೋಧವನ್ನು ಕಾಣಲಾಗುವುದಿಲ್ಲ. ಕರ್ನಾಟಕದ ಅನರ್ಹರೆನಿಸಿಕೊಂಡ ಶಾಸಕರ ಪ್ರಹಸನದ ಹಿಂದೆ ಈ ವಿದ್ಯಮಾನವನ್ನು ಗುರುತಿಸಬಹುದು. ಹಾಗೆಯೇ ಐದು ದಶಕಗಳ ಕಾಲ ರಾಜಕೀಯ ವೈರಿಗಳಾಗಿದ್ದ ಶಿವಸೇನೆ ಮತ್ತು ಕಾಂಗ್ರೆಸ್ ಒಂದಾಗುವ ಮಹಾರಾಷ್ಟ್ರದ ಪ್ರಹಸನದಲ್ಲೂ ಕಾಣಬಹುದು. ತನ್ನ ಅಸ್ತಿತ್ವ ಮತ್ತು ಪ್ರಾದೇಶಿಕ ಅಸ್ಮಿತೆಯನ್ನು ರಕ್ಷಿಸಿಕೊಳ್ಳಲು ಶಿವಸೇನೆ ಕಾಂಗ್ರೆಸ್ ಎನ್‌ಸಿಪಿ ಮೈತ್ರಿಕೂಟದ ಹೆಗಲೇರಿ ಕುಳಿತಿದೆ. ಈ ಮೂರೂ ಪಕ್ಷಗಳ ಸೂತ್ರ ಕಾರ್ಪೊರೇಟ್ ಕ್ಷೇತ್ರದ ಕೈಯಲ್ಲಿದೆ.

ಹಾಗಾಗಿಯೇ ವಿದರ್ಭದ ರೈತರ ಆತ್ಮಹತ್ಯೆ ಮಹಾರಾಷ್ಟ್ರ ಸರಕಾರದ ಆದ್ಯತೆಯ ವಿಷಯವಾಗುವುದಿಲ್ಲ. ದೇಶದ ಆರ್ಥಿಕ ರಾಜಧಾನಿ ಮುಂಬೈಯಲ್ಲಿ ಏರುತ್ತಿರುವ ನಿರುದ್ಯೋಗದ ಬವಣೆಯೂ ಆದ್ಯತೆಯಾಗುವುದಿಲ್ಲ. ತಮ್ಮ ಚುನಾವಣಾ ಪ್ರಣಾಳಿಕೆಗಳಿಗೂ, ಆಡಳಿತ ನೀತಿಗಳಿಗೂ ಯಾವುದೇ ಸಂಬಂಧ ಇಲ್ಲದೆಯೇ ಪಕ್ಷಗಳು ಆಡಳಿತ ನಡೆಸುವುದನ್ನು ಎಲ್ಲ ರಾಜ್ಯಗಳಲ್ಲೂ ಕಾಣಬಹುದು. ತೆಲಂಗಾಣ ಸರಕಾರ 48,000 ಸಾರಿಗೆ ನೌಕರರನ್ನು ಒಂದೇ ಏಟಿಗೆ ವಜಾ ಮಾಡಿದ್ದನ್ನು ಈ ಕಾರ್ಪೊರೇಟ್ ರಾಜಕಾರಣದ ಮೊದಲ ಹೆಜ್ಜೆ ಎಂದು ಹೇಳಬಹುದು. ಜನಸಾಮಾನ್ಯರ ನಿತ್ಯ ಜೀವನವನ್ನೇ ಸಂಕಷ್ಟಕ್ಕೀಡುಮಾಡಿರುವ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಶ್ರಮಜೀವಿಗಳಲ್ಲಿ, ಕಾರ್ಮಿಕ ವರ್ಗದಲ್ಲಿ, ನಗರೀಕೃತ ಡಿಜಿಟಲ್ ಕ್ಷೇತ್ರದ ಉದ್ಯೋಗಿಗಳಲ್ಲಿ, ರೈತ ಸಮುದಾಯದಲ್ಲಿ, ಆದಿವಾಸಿಗಳಲ್ಲಿ, ವಿದ್ಯಾರ್ಥಿಗಳಲ್ಲಿ ಸೃಷ್ಟಿಸಿರುವ ತಲ್ಲಣ, ಆತಂಕ ಯಾವುದೇ ಪ್ರಾದೇಶಿಕ ಪಕ್ಷಗಳಿಗೆ ಗಂಭೀರ ಸವಾಲು ಎನಿಸುವುದೇ ಇಲ್ಲ.

ಚುನಾಯಿತ ಸರಕಾರ ಎಷ್ಟು ಸುಸ್ಥಿರವಾಗಿರುತ್ತದೆ ಎನ್ನುವುದೇ ಆಡಳಿತ ವ್ಯವಸ್ಥೆಯ ಮಾನದಂಡವಾಗುವುದೇ ಹೊರತು ಯಾವ ಪಕ್ಷ ಅಧಿಕಾರದಲ್ಲಿದೆ ಎನ್ನುವುದಲ್ಲ. ಇಲ್ಲಿ ಜಾತ್ಯತೀತತೆ, ಸಮಾಜವಾದ, ಸಾಮುದಾಯಿಕ ಹಿತಾಸಕ್ತಿ, ಶೋಷಿತ ವರ್ಗಗಳ ಬವಣೆ, ಶ್ರಮಜೀವಿಗಳ ದುರವಸ್ಥೆ, ಕಾರ್ಮಿಕರ ಅನಿಶ್ಚಿತತೆ ಎಲ್ಲವೂ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಮರೆಯಾಗಿಬಿಡುತ್ತದೆ. ಹಾಗೆಯೇ ಈ ವಿದ್ಯಮಾನಗಳನ್ನು ಆಧರಿಸಿಯೇ ಪ್ರಾದೇಶಿಕ ಹಿತಾಸಕ್ತಿ ರಕ್ಷಣೆಗಾಗಿ ರೂಪುಗೊಳ್ಳುವ ಪ್ರಾದೇಶಿಕ ಪಕ್ಷಗಳ ಪ್ರಾದೇಶಿಕತೆಯೂ ಸಹ ಶಿಥಿಲವಾಗುತ್ತದೆ. ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ ಸಾಂವಿಧಾನಿಕ ಹುದ್ದೆ ಮತ್ತು ಸಂಸ್ಥೆಗಳು ಹೇಗೆ ದುರ್ಬಳಕೆಯಾಗಿತ್ತು ಎನ್ನುವುದನ್ನು ಗಮನಿಸಿದರೆ ಈ ಬೆಳವಣಿಗೆಗಳ ಹಿಂದಿನ ಸೂಕ್ಷ್ಮ ತರಂಗಗಳನ್ನು ಗ್ರಹಿಸಲು ಸಾಧ್ಯ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News