×
Ad

ಪ್ರಧಾನಿ ಕಚೇರಿಯಲ್ಲಿ ಅಧಿಕಾರ ಕೇಂದ್ರೀಕರಣ ಆರ್ಥಿಕ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲೊಂದು: ಶಿವಸೇನೆ

Update: 2019-12-10 19:59 IST

ಮುಂಬೈ, ಡಿ.10: ದೇಶದ ಆರ್ಥಿಕತೆ ಕುಸಿದಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಪ್ರಧಾನಿ ಕಚೇರಿಯಲ್ಲಿ ಅಧಿಕಾರ ಕೇಂದ್ರೀಕರಣವೂ ಒಂದಾಗಿದೆ ಎಂದು ಶಿವಸೇನೆಯು ಹೇಳಿದೆ.

ವಿತ್ತ ಸಚಿವರು, ಆರ್‌ಬಿಐ ಗವರ್ನರ್, ವಿತ್ತ ಕಾರ್ಯದರ್ಶಿ ಮತ್ತು ನೀತಿ ಆಯೋಗದ ಅಧ್ಯಕ್ಷರು ತನ್ನ ನಿಯಂತ್ರಣದಲ್ಲಿರಬೇಕು ಎಂದು ಕೇಂದ್ರ ಸರಕಾರವು ಬಯಸುತ್ತಿದೆ ಮತ್ತು ಇದು ದೇಶದ ಆರ್ಥಿಕ ದುಸ್ಥಿತಿಗೆ ಮುಖ್ಯ ಕಾರಣವಾಗಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿಯ ಸಂಪಾದಕೀಯವು ಬೆಟ್ಟು ಮಾಡಿದೆ. ಆರ್ಥಿಕತೆಯನ್ನು ಶೇರು ಮಾರುಕಟ್ಟೆ ಜೂಜು ಎಂದು ಪರಿಗಣಿಸಿರುವ ಬಿಜೆಪಿ ನೇತೃತ್ವದ ಸರಕಾರವು ಅರ್ಥಶಾಸ್ತ್ರಜ್ಞರ ಸಲಹೆಗಳನ್ನು ಕೇಳಲೂ ಸಿದ್ಧವಿಲ್ಲ ಎಂದು ಕುಟುಕಿದೆ.

ಪ್ರಧಾನಿ ಕಚೇರಿಯಲ್ಲಿ ಅತಿಯಾದ ಅಧಿಕಾರ ಕೇಂದ್ರೀಕರಣ ಮತ್ತು ಅಧಿಕಾರವಿಲ್ಲದ ಸಚಿವರಿಂದಾಗಿ ಆರ್ಥಿಕತೆಯ ಅನಾರೋಗ್ಯದ ತೀವ್ರ ಲಕ್ಷಣಗಳು ಗೋಚರಿಸುತ್ತಿದ್ದು,ಭಾರತವು ಆರ್ಥಿಕ ಹಿಂಜರಿತದ ಮಧ್ಯದಲ್ಲಿದೆ ಎಂಬ ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು ಇತ್ತೀಚಿಗೆ ವ್ಯಕ್ತಪಡಿಸಿದ್ದ ಕಳವಳಗಳನ್ನು ಬೆಂಬಲಿಸಿರುವ ಶಿವಸೇನೆಯು,ದೇಶದ ಈಗಿನ ಆರ್ಥಿಕ ದುಸ್ಥಿತಿಗೆ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರನ್ನು ಹೊಣೆಯಾಗಿಸುವಂತಿಲ್ಲ ಎಂದು ಹೇಳಿದೆ.

ಪ್ರಧಾನಿ ಕಚೇರಿಯಲ್ಲಿ ಅಧಿಕಾರದ ಕೇಂದ್ರೀಕರಣ ಮತ್ತು ಅಧಿಕಾರವಿಲ್ಲದ ಸಚಿವರು-ಈ ಸ್ಥಿತಿಯು ಆರ್ಥಿಕತೆಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದೆ.

ವಿತ್ತಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರ ಕೊಡುಗೆಯೇನು? ‘ನಾನು ಈರುಳ್ಳಿಯನ್ನು ತಿನ್ನುವುದಿಲ್ಲ, ನೀವೂ ತಿನ್ನಬೇಡಿ’ ಎಂಬ ಹೇಳಿಕೆಯೇ ಎಂದು ಸಂಪಾದಕೀಯವು ಪ್ರಶ್ನಿಸಿದೆ.

ಆರ್ಥಿಕತೆಯು ಪಕ್ಷವಾತಕ್ಕೆ ಗುರಿಯಾಗಿದೆ ಮತ್ತು ರಘುರಾಮ್ ರಾಜನ್ ಅವರ ‘ರೋಗ ನಿರ್ಧಾರ ’ವು ಅತ್ಯಂತ ಸರಿಯಾಗಿದೆ ಎಂದಿರುವ ಅದು,ಆರ್ಥಿಕ ಹಿಂಜರಿತವನ್ನು ಒಪ್ಪಿಕೊಳ್ಳಲು ಸರಕಾರವು ಸಿದ್ಧವಿಲ್ಲ. ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 200 ರೂ. ತಲುಪಿರುವಾಗ ವಿತ್ತ ಸಚಿವೆ ತಾನು ಈರುಳ್ಳಿ ತಿನ್ನುವುದಿಲ್ಲ,ಹೀಗಾಗಿ ಆ ಬಗ್ಗೆ ತನಗೆ ಕೇಳಬೇಡಿ ಎನ್ನುತ್ತಿದ್ದಾರೆ ಎಂದು ಟೀಕಿಸಿದೆ.

ಪರಿಸ್ಥಿತಿಯನ್ನು ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿಯವರು ಪ್ರಯತ್ನಿಸುತ್ತಿಲ್ಲ ಎಂದೂ ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News