ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

Update: 2019-12-19 07:18 GMT
Photo: PTI

ಗುವಾಹಟಿ, ಡಿ. 10: ಲೋಕಸಭೆಯಲ್ಲಿ ಅಂಗೀಕಾರ ಪಡೆದ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಎರಡು ವಿದ್ಯಾರ್ಥಿ ಸಂಘಟನೆಗಳು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಅಸ್ಸಾಂನ ಬ್ರಹ್ಮಪುತ್ರಾ ಕಣಿವಿಯಲ್ಲಿ ಮಂಗಳವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ 11 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು. ಆದರೆ, ಈ ಬಂದ್‌ಗೆ ಬೆಂಗಾಳಿ ಪ್ರಾಬಲ್ಯದ ಬರಾಕ್ ಕಣಿವೆಯಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಲಿಲ್ಲ.

 ನಗರದ ಮಲಿಗಾಂವ್ ಪ್ರದೇಶದಲ್ಲಿ ಸರಕಾರಿ ಬಸ್‌ಗಳಿಗೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದಾರೆ ಹಾಗೂ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಾರೆ. ಅಂಗಡಿ, ಮಾರುಕಟ್ಟೆ, ಉದ್ಯಮಗಳು ಬಂದ್ ಆಗಿದ್ದವು. ಶಿಕ್ಷಣ ಹಾಗೂ ಹಣಕಾಸು ಸಂಸ್ಥೆಗಳು ಮುಚ್ಚಿದ್ದವು ಎಂದು ಮೂಲಗಳು ತಿಳಿಸಿವೆ.

ಗುವಾಹತಿಯ ವಿವಿಧ ಪ್ರದೇಶಗಳಲ್ಲಿ ಭಾರೀ ಮೆರವಣಿಗೆ ನಡೆಯಿತು. ಪ್ರತಿಭಟನಕಾರರು ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಮೂಲಗಳು ತಿಳಿಸಿವೆ.

 ಗುವಾಹತಿಯ ವಿಧಾನಸಭೆ ಕಟ್ಟಡ ಹಾಗೂ ಕಾರ್ಯಾಲಯದ ಆವರಣ ಪ್ರವೇಶಿಸಲು ಪ್ರತಿಭಟನಕಾರರು ಪ್ರಯತ್ನಿಸಿದರು. ಪ್ರತಿಭಟನಕಾರರು ಮುಂದುವರಿಯ ದಂತೆ ಭದ್ರತಾ ಪಡೆ ತಡೆ ಒಡ್ಡಿತು. ಇದರಿಂದ ಪ್ರತಿಭಟನಕಾರರು ಹಾಗೂ ಭದ್ರತಾ ಪಡೆ ನಡುವೆ ಘರ್ಷಣೆ ನಡೆಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತಿಭಟನಕಾರರು ರೈಲು ಹಳಿಯಲ್ಲಿ ಧರಣಿ ಕುಳಿತ ಪರಿಣಾಮ ಅಸ್ಸಾಂನಾದ್ಯಂತ ರೈಲು ಸಂಚಾರಕ್ಕೆ ಅಡ್ಡಿ ಉಂಟಾಯಿತು ಎಂದು ರೈಲ್ವೇ ವಕ್ತಾರರು ಹೇಳಿದ್ದಾರೆ.

ಕೆಲವರು ಇಲ್ಲಿನ ಎನ್‌ಎಫ್ ರೈಲ್ವೆ ಕೇಂದ್ರ ಕಚೇರಿಗಳನ್ನು ಹಾಗೂ ಕಾಮರೂಪ್ ಜಿಲ್ಲೆಯ ರಂಗಿಯಾದಲ್ಲಿರುವ ವಿಭಾಗೀಯ ರೈಲ್ವೆ ಮ್ಯಾನೇಜರ್ ಕಚೇರಿಗೆ ಮುತ್ತಿಗೆ ಹಾಕಿದರು.

 ಖಾಸಗಿ ಹಾಗೂ ಸರಕಾರಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಎಎಸ್‌ಟಿಸಿ ಬಸ್‌ಗಳು ಇಲ್ಲಿನ ಗುವಾಹತಿ ನಗರ ಹಾಗೂ ಎಲ್‌ಜಿಬಿ ವಿಮಾನ ನಿಲ್ದಾಣಗಳ ನಡುವೆ ಪೊಲೀಸ್ ಬೆಂಗಾವಲಿನಲ್ಲಿ ಸಂಚಾರ ನಡೆಸಿದವು.

ಬಂದ್‌ನ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳ ದಿನಾಂಕವನ್ನು ಮುಂದೂಡಿದವು.

ದಿಬ್ರುಗಢ ಜಿಲ್ಲೆಯಲ್ಲಿ ಪ್ರತಿಭಟನಕಾರರು ಹಾಗೂ ಸಿಐಎಸ್‌ಎಫ್ ಸಿಬ್ಬಂದಿ ನಡುವೆ ಘರ್ಷಣೆ ನಡೆಯಿತು. ದುಲಿಯಜಾನ್ ಪ್ರದೇಶದಲ್ಲಿರುವ ಕಚೇರಿಗೆ ಪ್ರವೇಶಿಸಲು ಯತ್ನಿಸಿದ ಆಯಿಲ್ ಇಂಡಿಯಾ ಲಿಮಿಟೆಡ್‌ನ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿದಾಗ ಮೂವರು ಗಾಯಗೊಂಡರು.

 ಅಸ್ಸಾಂನ ವಿವಿಧ ಭಾಗಗಳಲ್ಲಿ ವಾಹನ ಸಂಚಾರ ತಡೆಯಲು ಪ್ರತಿಭಟನಕಾರರು ರಸ್ತೆಯಲ್ಲಿ ಟಯರ್ ಉರಿಸಿದರು ಹಾಗೂ ಹೆದ್ದಾರಿ ಸಂಚಾರ ತಡೆದರು. ಗುವಾಹತಿಯ ಗುವಾಹತಿ ವಿಶ್ವವಿದ್ಯಾನಿಲಯ ಹಾಗೂ ಕಾಟನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜೊರ್ಹಾತ್‌ನ ಅಸ್ಸಾಂ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಸೇರಿ ಬೀದಿಗಳಲ್ಲಿ ರ್ಯಾಲಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News