ರಾಜ್ಯಗಳ ಪಾಲಿನ ಜಿಎಸ್‌ಟಿ ನೀಡಲು ಒತ್ತಾಯಿಸಿ ಪ್ರಾದೇಶಿಕ ಪಕ್ಷಗಳ ಪ್ರತಿಭಟನೆ

Update: 2019-12-11 13:18 GMT

ಹೊಸದಿಲ್ಲಿ, ಡಿ.11: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯಲ್ಲಿ ರಾಜ್ಯಗಳ ಪಾಲನ್ನು ಕೇಂದ್ರ ಸರಕಾರ ತಕ್ಷಣ ನೀಡಬೇಕು ಎಂದು ಟಿಆರ್‌ಎಸ್, ಶಿವಸೇನೆ, ಡಿಎಂಕೆ ಮತ್ತು ಟಿಎಂಸಿ ಸದಸ್ಯರು ಬುಧವಾರ ಸದನದಲ್ಲಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

 ಜಿಎಸ್‌ಟಿಯ ಹಣವನ್ನು ಪಾವತಿಸದಿರುವುದರಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ ಎಂದು ಪ್ರಾದೇಶಿಕ ಪಕ್ಷಗಳು ಹೇಳಿವೆ. ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ಎದ್ದುನಿಂತ ಟಿಆರ್‌ಎಸ್ ಸದಸ್ಯರು ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿ ಘೋಷಣೆ ಕೂಗತೊಡಗಿದರು.

ಇವರನ್ನು ಟಿಎಂಸಿ ಮತ್ತು ಶಿವಸೇನೆಯ ಸದಸ್ಯರು ಬೆಂಬಲಿಸಿದರು. ಮಧ್ಯಾಹ್ನದ ಕಲಾಪದ ಸಂದರ್ಭದಲ್ಲೂ ಹಲವು ಪ್ರಾದೇಶಿಕ ಪಕ್ಷಗಳು ಈ ವಿಷಯವನ್ನು ಎತ್ತಿದರು. ಹಲವು ರಾಜ್ಯಗಳ ವಿತ್ತಸಚಿವರು ಕೇಂದ್ರ ವಿತ್ತಸಚಿವರನ್ನು ಭೇಟಿಯಾಗಿ ಜಿಎಸ್‌ಟಿಯಲ್ಲಿ ಸಲ್ಲಬೇಕಿರುವ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ. ತಮಿಳುನಾಡು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಇದುವರೆಗೆ ಪ್ರತೀ ಎರಡು ತಿಂಗಳಿಗೊಮ್ಮೆ ಜಿಎಸ್‌ಟಿಯ ಪಾಲನ್ನು ರಾಜ್ಯ ಸರಕಾರಗಳಿಗೆ ನೀಡಲಾಗುತ್ತಿತ್ತು.

 ಆದರೆ ಈಗ ಕೇಂದ್ರ ಸರಕಾರ ವಿಳಂಬಿಸಿದೆ ಎಂದು ಡಿಎಂಕೆಯ ಟಿಆರ್ ಬಾಲು ಆಕ್ರೋಶ ವ್ಯಕ್ತಪಡಿಸಿದರು. ತೆಲಂಗಾಣಕ್ಕೆ ವಿವಿಧ ಅನುದಾನದಡಿ ಕೇಂದ್ರ ಸರಕಾರ 29,891 ಕೋಟಿ ರೂ. ಪಾವತಿಸಲು ಬಾಕಿಯಿದ್ದು ಇದರಲ್ಲಿ 4,351 ಕೋಟಿ ರೂ. ಜಿಎಸ್‌ಟಿ ಮೊತ್ತವಾಗಿದೆ ಎಂದು ಟಿಆರ್‌ಎಸ್‌ನ ಎನ್ ನಾಗೇಶ್ವರ ರಾವ್ ಹೇಳಿದರು. ಮಹಾರಾಷ್ಟ್ರಕ್ಕೆ 15,558 ಕೋಟಿ ರೂ. ಪಾವತಿಗೆ ಬಾಕಿಯಿದೆ.

ಈ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಿವಸೇನೆಯ ವಿನಾಯಕ ರಾವತ್ ಹೇಳಿದರು. ಜಿಎಸ್‌ಟಿಯಲ್ಲಿ ರಾಜ್ಯಗಳಿಗೆ ಸಲ್ಲಬೇಕಿರುವ ಪಾಲನ್ನು ಪಾವತಿಸಲು ಕೇಂದ್ರ ಸರಕಾರ ವಿಳಂಬಿಸುತ್ತಿರುವುದನ್ನು ಪ್ರತಿಭಟಿಸಿ ವಿಪಕ್ಷಗಳು ರಾಜ್ಯಸಭೆಯಲ್ಲೂ ಪ್ರತಿಭಟನೆ ನಡೆಸಿದವು. ರಾಜ್ಯಗಳಿಗೆ ಸುಮಾರು 50,000 ಕೋಟಿ ರೂ. ಜಿಎಸ್‌ಟಿ ಮೊತ್ತವನ್ನು ಕೇಂದ್ರ ಸರಕಾರ ಬಾಕಿಇರಿಸಿಕೊಂಡಿದೆ. ಆಗಸ್ಟ್ ಬಳಿಕ ರಾಜ್ಯಸರಕಾರಗಳಿಗೆ ಜಿಎಸ್‌ಟಿ ಪಾಲು ದೊರೆತಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News