ಹಿರಿಯ ನಾಗರಿಕರ ಶೋಷಣೆಗೆ ಜೈಲು ಶಿಕ್ಷೆ, ದಂಡ ವಿಧಿಸುವ ಮಸೂದೆ ಲೋಕಸಭೆಯಲ್ಲಿ ಮಂಡನೆ

Update: 2019-12-11 14:10 GMT

ಹೊಸದಿಲ್ಲಿ,ಡಿ.11: ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕ್ಷೇಮಾಭಿವೃದ್ಧಿ ಕಾಯ್ದೆ 2007ಕ್ಕೆ ತಿದ್ದುಪಡಿಯನ್ನು ತರಲು ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಾಗಿದ್ದು,ಇದರಡಿ ತಮ್ಮ ಪೋಷಣೆ ಮತ್ತು ರಕ್ಷಣೆಯಲ್ಲಿರುವ ಹೆತ್ತವರನ್ನು ಅಥವಾ ಹಿರಿಯ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಶೋಷಿಸುವವರು ಅಥವಾ ಅವರನ್ನು ತೊರೆಯುವವರಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ.ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರಚಂದ್ ಗೆಹ್ಲೋಟ್ ಮಂಡಿಸಿದ ಈ ಮಸೂದೆಯು ಹಿರಿಯ ನಾಗರಿಕರು ಜೀವನಾಂಶ ಮತ್ತು ನೆರವಿಗಾಗಿ ಹಕ್ಕುಕೋರಿಕೆಗಳನ್ನು ಸಲ್ಲಿಸಲು ನ್ಯಾಯಾಧಿಕರಣ ಸ್ಥಾಪನೆಗೆ ಅವಕಾಶವನ್ನು ಒದಗಿಸಿದ್ದು,80 ವರ್ಷ ಪ್ರಾಯಕ್ಕಿಂತ ಮೇಲಿನವರು ಸಲ್ಲಿಸುವ ಇಂತಹ ಅರ್ಜಿಗಳನ್ನು 60 ದಿನಗಳೊಳಗೆ ಇತ್ಯರ್ಥ ಗೊಳಿಸಬೇಕಾಗುತ್ತದೆ. ಅಸಾಧಾರಣ ಸಂದರ್ಭಗಳಲ್ಲಿ ಮತ್ತು ಲಿಖಿತವಾಗಿ ದಾಖಲಿಸಿಕೊಳ್ಳಬೇಕಾದ ಕಾರಣಗಳಿದ್ದರೆ ಮಾತ್ರ ಒಂದು ಬಾರಿಗೆ 30 ದಿನಗಳ ಅವಧಿ ವಿಸ್ತರಣೆಗೆ ಅವಕಾಶವಿದೆ. ಇತರ ಹಿರಿಯ ನಾಗರಿಕರು ಅಥವಾ ಹೆತ್ತವರ ಅರ್ಜಿಗಳನ್ನು ನ್ಯಾಯಾಧಿಕರಣವು 90 ದಿನಗಳಲ್ಲಿ ಇತ್ಯರ್ಥಗೊಳಿಸಬೇಕಾಗುತ್ತದೆ.

ಮಸೂದೆಯಲ್ಲಿ ಪ್ರಸ್ತಾಪಿಸಿರುವಂತೆ ಹೆತ್ತವರು ಮತ್ತು ಹಿರಿಯ ನಾಗರಿಕರಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಎಎಸ್‌ಐ ದರ್ಜೆಯ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ. ಇದೇರೀತಿ ಪ್ರತಿ ಜಿಲ್ಲೆಯಲ್ಲಿಯೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಡಿಎಸ್‌ಪಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ಘಟಕವನ್ನು ಸ್ಥಾಪಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News