ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ: ಅಲಿಗಢ ವಿವಿಯ 20 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್

Update: 2019-12-19 05:02 GMT

ಅಲಿಗಢ,ಡಿ.11: ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಸಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ 20 ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರತಿಭಟನೆಯ ಬಳಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆಯೆಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯದ ಆವರಣದ ಪ್ರವೇಶ ದ್ವಾರದ ಬಳಿ ಕ್ಷಿಪ್ರ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ.

ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಮಂಗಳವಾರ ವಿವಿ ಆವರಣದಲ್ಲಿರುವ ಫೈಝ್ ಗೇಟ್ ಸಮೀಪ ಸೆಕ್ಷನ್ 144ರಡಿ ಹೇರಲಾದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಸುಮಾರು 20 ಮಂದಿ ವಿದ್ಯಾರ್ಥಿ ನಾಯಕರನ್ನು ಹಾಗೂ 500 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

 ‘‘ ಅಲಿಗಢ ನಗರದಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆಯನ್ನು ಹೇರಲಾಗಿದೆ ಹಾಗೂ ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವಿವಿ ಲೈಬ್ರರಿಯಿಂದ ಆರಂಭಗೊಂಡು ವಿವಿ ವೃತ್ತದೆಡೆಗೆ ಪಾದಯಾತ್ರೆ ನಡೆಸಿದ ಹಾಗೂ ಶಾಂತಿ ಕದಡಲು ಯತ್ನಿಸಿದ ಆರೋಪದಲ್ಲಿ 20 ಮಂದಿ ವಿದ್ಯಾರ್ಥಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಸಿವಿಲ್ ಲೈನ್ ಪೊಲೀಸ್‌ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.

ಈ ಮಧ್ಯೆ ಎಎಂಯು ವಿದ್ಯಾರ್ಥಿ ನಾಯಕರು ಹೇಳಿಕೆಯೊಂದನ್ನು ನೀಡಿ ತಮ್ಮ ಪ್ರತಿಭಟನೆಗಳು ಅತ್ಯಂತ ಶಾಂತಿಯುತವಾಗಿದ್ದವು ಹಾಗೂ ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಧ್ವನಿಯೆತ್ತುವುದು ತಮ್ಮ ಪ್ರಜಾತಾಂತ್ರಿಕ ಹಕ್ಕಾಗಿದೆ ಎಂದು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ವಿಧೇಯಕವು ಸಂವಿಧಾನದ ಧ್ಯೇಯ ಹಾಗೂ ಆಶಯಕ್ಕೆ ವಿರುದ್ಧವಾದುದಾಗಿದೆ. ಭಾರತೀಯರನ್ನು ಕೋಮು ಆಧಾರದ ಮೇಲೆ ಧ್ರುವೀಕರಿಸಲು ಹಾಗೂ ದೇಶವನ್ನು ವಿಭಜಿಸುವ ಉದ್ದೇಶದಿಂದ ಈ ವಿಧೇಯಕವು ಹೊಂದಿದೆಯೆಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News