ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಮಿತ್ ಶಾ ಸ್ಪಷ್ಟನೆ ಅಸಂಬದ್ಧ: ನೊಬೆಲ್ ಪ್ರಶಸ್ತಿ ವಿಜೇತ ವೆಂಕಟರಾಮನ್ ರಾಮಕೃಷ್ಣನ್

Update: 2019-12-19 05:45 GMT

ಹೊಸದಿಲ್ಲಿ: ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿರುವ ಭಾರತೀಯ ಮೂಲದ ವೆಂಕಟರಾಮನ್ ರಾಮಕೃಷ್ಣನ್  ಅವರು ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಬಲವಾಗಿ ಖಂಡಿಸಿದ್ದಾರೆ. ಈ ಮಸೂದೆ  ದೇಶದ ಸಂವಿಧಾನದ ವಿರೋಧಿಯಾಗಿದೆ ಹಾಗೂ  ದೇಶದಲ್ಲಿ ಶಿಕ್ಷಣ, ತಂತ್ರಜ್ಞಾನ ಹಾಗೂ ಆರ್ಥಿಕ  ಅಭಿವೃದ್ಧಿಯಂತಹ ಪ್ರಮುಖ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶ ಹೊಂದಿದೆ ಎಂದು ದಿ ಕ್ವಿಂಟ್ ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

"ಮುಸ್ಲಿಮರು ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾಗುವುದಿಲ್ಲ'' ಎಂದು ಈ ಪೌರತ್ವ ತಿದ್ದುಪಡಿ ಕಾಯಿದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದಕ್ಕೆ ಗೃಹ  ಸಚಿವ ಅಮಿತ್ ಶಾ ನೀಡಿರುವ ಸ್ಪಷ್ಟೀಕರಣ ಸಂಪೂರ್ಣ ಅಸಂಬದ್ಧ  ಎಂದು ಹೇಳಿದ ರಾಮಕೃಷ್ಣನ್ ಅದಕ್ಕೊಂದು ಉದಾಹರಣೆಯನ್ನೂ ನೀಡಿದ್ದಾರೆ.

``ಅಬ್ದುಸ್ ಸಲಾಂ ಅವರು ಮಹಾನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದರು ಹಾಗೂ ನೋಬೆಲ್ ಪ್ರಶಸ್ತಿ ವಿಜೇತರು.  ಅವರೊಬ್ಬ ಅಹ್ಮದಿಯಾ ಆಗಿದ್ದರಿಂದ ಅವರು ನಿಜವಾದ ಮುಸ್ಲಿಮರಲ್ಲ ಎಂಬ ಅಭಿಪ್ರಾಯದೊಂದಿಗೆ ಜನರು ಪಾಕಿಸ್ತಾನದಲ್ಲಿನ ಅವರ ಸಮಾಧಿಗೆ ಹಾನಿಗೈದಿದ್ದರು'' ಎಂದು ಅವರು ಹೇಳಿದ್ದಾರೆ.

``ಎಲ್ಲಾ ವಿಧದ ಜನರ ಮೇಲೂ ದಬ್ಬಾಳಿಕೆ ನಡೆದಿರಬಹುದು.  ಯಾರನ್ನೂ ಸಂಪೂರ್ಣವಾಗಿ ಹೊರಗಿಡುವುದು ಅಥವಾ ಒಳಪಡಿಸುವ ಬದಲು  ಇಂತಹ ವಿಚಾರಗಳನ್ನು  ಪ್ರತಿಯೊಂದು ಪ್ರಕರಣವನ್ನು ಆಧರಿಸಿ ನಿರ್ಧರಿಸಬೇಕು'' ಎಂದು ರಾಮಕೃಷ್ಣನ್  ಅಭಿಪ್ರಾಯ ಪಟ್ಟರು.

ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಮೂಲತತ್ವಕ್ಕೆ ವಿರುದ್ಧವಾಗಿದೆ ಹಾಗೂ ಉದ್ದೇಶಪೂರ್ವಕವಾಗಿ ಒಂದು ಧರ್ಮವನ್ನು ಹೊರಗಿಟ್ಟಿದೆ ಎಂದು ಅವರು ಹೇಳಿದರು.

ತಾನು ಭಾರತೀಯ ನಾಗರಿಕರಲ್ಲದೇ ಇದ್ದುದರಿಂದ ಹಲವಾರು ಬುದ್ಧಿಜೀವಿಗಳು ಮಸೂದೆ ವಿರೋಧಿಸಿ ಸರಕಾರಕ್ಕೆ ಬರೆದಿರುವ  ಬಹಿರಂಗ ಪತ್ರಕ್ಕೆ ತಾನು ಸಹಿ ಹಾಕಿಲ್ಲ ಎಂದ ಅವರು, ಅದೇ ಸಮಯ ತಾವು ಭಾರತದಲ್ಲಿಯೇ ಹುಟ್ಟಿ ಬೆಳೆದವರಾಗಿರುವುದರಿಂದ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾಗಿಯೂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News