'ಭಾರತವು ಪಾಕಿಸ್ತಾನೀಯರಿಗೆ, ಬಾಂಗ್ಲಾದೇಶದವರಿಗೆ ಎಂದು ಬಿಜೆಪಿ ಹೇಳುತ್ತಿದೆ'

Update: 2019-12-12 16:54 GMT

ಹೊಸದಿಲ್ಲಿ: 'ಟೈಮ್ಸ್ ನೌ' ಹಾಗೂ 'ರಿಪಬ್ಲಿಕ್ ಟಿವಿ' ವಾಹಿನಿಗಳ ಸುದ್ದಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ನೋಡುವವರು ಈ ಎರಡೂ ವಾಹಿನಿಗಳು ಸಾಮಾನ್ಯವಾಗಿ ಒಂದೇ ರೀತಿಯ ಸುದ್ದಿ, ಶೀರ್ಷಿಕೆಗಳನ್ನು ನೀಡುವುದನ್ನು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಗಮನಿಸಿರಬಹುದು. ಆದರೆ ಈ ಸಂಪ್ರದಾಯ ಇದೀಗ ಮುರಿದು ಬಿದ್ದಿದೆ.

ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಸುದ್ದಿ ಬಿತ್ತರ ಮಾಡುತ್ತಾರೆಂಬ ಆರೋಪ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಮೇಲೆ ಹಿಂದಿನಿಂದಲೂ ಇದೆ. ಆದರೆ ಈ ಬಾರಿ ಅವರು ಮಾತನಾಡಿರುವ ಶೈಲಿ ಹಲವರಿಗೆ ಆಶ್ಚರ್ಯ ತರಿಸಿದೆ.

"ನನಗೆ ಪೌರತ್ವ(ತಿದ್ದುಪಡಿ)ಮಸೂದೆಯ ಕುರಿತು ಹಲವು ಸಂಶಯಗಳಿವೆ. ಬಿಜೆಪಿಯು ಸಂಘ ಪರಿವಾರವನ್ನು ಓಲೈಸಲು ಯತ್ನಿಸುತ್ತಿದೆ. ನಿಜವಾದ ವಿಚಾರ ಅಕ್ರಮ ನುಸುಳುಕೋರರ ಕುರಿತಾಗಿತ್ತು ಧರ್ಮದ ಕುರಿತಲ್ಲ, ಭಾರತವು ಭಾರತೀಯರಿಗೆ ಎಂದು ನಾನು ಯಾವತ್ತೂ ಹೇಳಿದ್ದೆ. ಆದರೆ ಈಗ ಬಿಜೆಪಿ ಭಾರತವು ಪಾಕಿಸ್ತಾನಿಯರಿಗೆ, ಅಫ್ಘಾನರಿಗೆ ಹಾಗೂ ಬಾಂಗ್ಲಾದೇಶಿಗಳಿಗೆ, ಆದರೆ ಒಬ್ಬನೇ ಒಬ್ಬ ಮುಸ್ಲಿಂ ಭಾರತದೊಳಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುತ್ತಿದೆ. ಇದು  ಅಸಂಬದ್ಧ, ನಾನು ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ''...

ಈ ಮಾತುಗಳನ್ನು ರಾಹುಲ್ ಗಾಂಧಿ, ಅಸದುದ್ದೀನ್ ಉವೈಸಿ, ಮಮತಾ ಬ್ಯಾನರ್ಜಿ ಅಥವಾ ಇನ್ಯಾರಾದರೂ ಹೇಳಿದ್ದಾರೆಂದು ನೀವು ಆಂದುಕೊಂಡಿದ್ದರೆ ಅದು ತಪ್ಪು, ಈ ಮಾತುಗಳನ್ನು ಹೇಳಿದ್ದು ಅರ್ನಬ್ ಗೋಸ್ವಾಮಿ.

ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕರಾಗಿರುವ ಅವರು ತಮ್ಮ ನ್ಯೂಸ್ ಶೋ `ದಿ ಡಿಬೇಟ್'ನಲ್ಲಿ "ಬಿಜೆಪಿ ಪೌರತ್ವ ತಿದ್ದುಪಡಿ ಮಸೂದೆ 2019 ಮೂಲಕ ದೊಡ್ಡ ತಪ್ಪು ಮಾಡುತ್ತಿದೆ" ಎಂದು ಹೇಳಿಯೇ ಬಿಟ್ಟಿದ್ದಾರೆ.

ಅರ್ನಬ್ ಬಿಜೆಪಿಯ ನೀತಿಯನ್ನು ಬಹಿರಂಗವಾಗಿ ವಿರೋಧಿಸಿದ್ದು ಪ್ರಾಯಶಃ ಇದೇ ಮೊದಲ ಬಾರಿ. ಅಷ್ಟೇ ಅಲ್ಲ ಕಳೆದ ವಾರದ ತಮ್ಮ ರಾತ್ರಿ 9 ಗಂಟೆಯ ಶೋದಲ್ಲಿ ಅವರು ತಾನು ಸಿಎಬಿ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿರುವ ಅಸ್ಸಾಂನವನು ಎಂದೂ ಹೇಳಿಕೊಂಡಿದ್ದಾರೆ. ಈ ಮಸೂದೆ ಕುರಿತಂತ ತಾವು ``ಒಬ್ಬ ಭಾರತೀಯನಾಗಿ'' ಮಾತನಾಡಬೇಕಿದೆಯೆಂದು ಅವರು ಹೇಳುತ್ತಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ಸದಾ ಕಟು ನುಡಿಗಳನ್ನೇ ಆಡುವ ಅರ್ನಬ್ ಬಿಜೆಪಿ ವಿರುದ್ಧವೇ ಮಾತನಾಡಿದ್ದಾರೆಂದರೆ ಅದು ನಿಜವಾಗಿಯೂ ಸೆನ್ಸೇಶನಲ್ ಸುದ್ದಿ.

ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ಅವರು ಈ ಹಿಂದೆ ಮುಖ್ಯ ಸಂಪಾದಕರಾಗಿದ್ದ ಟೈಮ್ಸ್ ನೌ ಸಾಮಾನ್ಯವಾಗಿ ಒಂದೇ ರೀತಿಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದರೂ ಪೌರತ್ವ ತಿದ್ದುಪಡಿ ಮಸೂದೆ ವಿಚಾರದಲ್ಲಿ ಅವುಗಳ ಸುದ್ದಿ ಬೇರೆ ಬೇರೆಯಾಗಿವೆ.

ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದರೆ ಟೈಮ್ಸ್ ನೌ ವಾಹಿನಿಯಿಲ್ಲಿ "ಮಸೂದೆ ವಿರುದ್ಧ ಹಲವು ಪ್ರತಿಭಟನೆಗಳು" ಎಂದು ವರದಿಯಾಗಿದೆ.

ತಾವೇಕೆ ಈ ಮಸೂದೆ ವಿಚಾರದಲ್ಲಿ ಮೋದಿ-ಶಾ ಜತೆ ಸಹಮತ ಹೊಂದಿಲ್ಲ ಎಂದು ಅರ್ನಬ್ ವಿವರಿಸಿದರೆ, ಟೈಮ್ಸ್ ನೌ ವಾಹಿನಿಯಲ್ಲಿ ನಿರೂಪಕರಾದ ರಾಹುಲ್ ಶಿವಶಂಕರ್ ಹಾಗು ನವಿಕಾ ಕುಮಾರ್ ಬಿಜೆಪಿಯನ್ನು ಸಮರ್ಥಿಸಲು ಹರಸಾಹಸಪಡುತ್ತಿರುವುದು ಅವರ ಮಾತುಗಳಿಂದಲೇ ಸ್ಪಷ್ಟವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News