ಮೊದಲ ಟೆಸ್ಟ್: ಆಸ್ಟ್ರೇಲಿಯ 248/4

Update: 2019-12-12 17:32 GMT

ಪರ್ತ್, ಡಿ.12: ಬ್ಯಾಟ್ಸ್ ಮನ್ ಮಾರ್ನಸ್ ಲಾಬುಶೇನ್ ಗಳಿಸಿದ ಸತತ ಮೂರನೇ ಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಪ್ರವಾಸಿ ನ್ಯೂಝಿಲ್ಯಾಂಡ್ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ಮೊದಲ ಟೆಸ್ಟ್‌ನ ಮೊದಲ ದಿನ ಗೌರವಾರ್ಹ ಮೊತ್ತ ಕಲೆ ಹಾಕಿದೆ.

ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ದಿನದಾಟದಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 248 ರನ್ ಗಳಿಸಿದ್ದು, ಲಾಬುಶೇನ್ ಔಟಾಗದೆ 110 ಹಾಗೂ ಟ್ರಾವಿಸ್ ಹೆಡ್ ಔಟಾಗದೆ 20 ರನ್ ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಸಂಜಾತ ಲಾಬುಶೇನ್ ಸತತ ಮೂರು ಟೆಸ್ಟ್ ಶತಕಗಳನ್ನು ಸಿಡಿಸಿದ ಆಸ್ಟ್ರೇಲಿಯದ 9ನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು. ಪಾಕಿಸ್ತಾನ ವಿರುದ್ಧ ಬ್ರಿಸ್ಬೇನ್ ಹಾಗೂ ಅಡಿಲೇಡ್‌ನಲ್ಲಿ ಶತಕ ಗಳಿಸಿದ್ದ ಲಾಬುಶೇನ್ ಆಫ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ಸ್ಸಿಕರ್ ಸಿಡಿಸಿ ಶತಕ ಪೂರೈಸಿದರು. 202 ಎಸೆತಗಳನ್ನು ಎದುರಿಸಿದ ಲಾಬುಶೇನ್ 14 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 110 ರನ್ ಸಿಡಿಸಿದರು. ಮಾಜಿ ನಾಯಕ ಸ್ಟೀವ್ ಸ್ಮಿತ್(43)ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 132 ರನ್ ಸೇರಿಸಿದ ಲಾಬುಶೇನ್ ತಂಡಕ್ಕೆ ಆಧಾರವಾದರು.

ನ್ಯೂಝಿಲ್ಯಾಂಡ್‌ನ ಶಿಸ್ತುಬದ್ದ ಬೌಲಿಂಗ್ ದಾಳಿ ಎದುರು ದೊಡ್ಡ ಮೊತ್ತ ಗಳಿಸಲು ವಿಫಲವಾದ ಸ್ಮಿತ್ 43 ರನ್ ಗಳಿಸಿ ನೀಲ್ ವಾಗ್ನರ್‌ಗೆ ವಿಕೆಟ್ ಒಪ್ಪಿಸಿದರು.

ಆಸೀಸ್‌ನ ಆರಂಭಿಕ ಆಟಗಾರ ಜೋ ಬರ್ನ್ಸ್(9)ವಿಕೆಟ್‌ನ್ನು ಬೇಗನೆ ಉರುಳಿಸಿದ ಕಾಲಿನ್ ಗ್ರಾಂಡ್‌ಹೋಮ್ ಕಿವೀಸ್‌ಗೆ ಉತ್ತಮ ಆರಂಭ ಒದಗಿಸಿದರು. ಪಾಕಿಸ್ತಾನ ವಿರುದ್ಧ ಅಡಿಲೇಡ್‌ನಲ್ಲಿ ಔಟಾಗದೆ 335 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಟೀ ವಿರಾಮಕ್ಕೆ ಮೊದಲು 43 ರನ್ ಗಳಿಸಿ ವಾಗ್ನರ್‌ಗೆ ಎರಡನೇ ಬಲಿಯಾದರು. ವಾಗ್ನರ್ 52 ರನ್‌ಗೆ 2 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News