​ಸಿಎಬಿಗೆ ಅಸಮಾಧಾನ: ಭಾರತ ಪ್ರವಾಸ ರದ್ದುಪಡಿಸಿದ ಬಾಂಗ್ಲಾ ಸಚಿವರು

Update: 2019-12-19 06:13 GMT
ಎಂ.ಕೆ.ಅಬ್ದುಲ್ ಮೊಮೆನ್

ಹೊಸದಿಲ್ಲಿ, ಡಿ.13: ಪೌರತ್ವ ತಿದ್ದುಪಡಿ ಮಸೂದೆ(​ಸಿಎಬಿ) ಸಂಸತ್ ಒಪ್ಪಿಗೆ ಪಡೆದು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯುವ ಮೂಲಕ ಕಾಯ್ದೆಯಾಗಿ ಜಾರಿಗೆ ಬಂದ ಬೆನ್ನಲ್ಲೇ, ಅಸ್ಸಾಂನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕಾಯ್ದೆ ಇದೀಗ ಭಾರತದ ರಾಜತಾಂತ್ರಿಕ ಹಿನ್ನಡೆಗೂ ಕಾರಣವಾಗಿದ್ದು, ಸಿಎಬಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಾಂಗ್ಲಾದೇಶದ ಹಿರಿಯ ಸಚಿವರು ತಮ್ಮ ಉದ್ದೇಶಿತ ಭಾರತ ಭೇಟಿಯನ್ನು ರದ್ದುಪಡಿಸಿರುವುದಾಗಿ ಪ್ರಕಟಿಸಿದ್ದಾರೆ.

ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಂ.ಕೆ.ಅಬ್ದುಲ್ ಮೊಮೆನ್ ಅವರು ತಮ್ಮ ಹೊಸದಿಲ್ಲಿ ಭೇಟಿ ರದ್ದುಪಡಿಸಿದ್ದರೆ, ಗೃಹಸಚಿವ ಅಸಾದುಝ್ಝಮಾನ್ ಖಾನ್ ಅವರು ಮೇಘಾಲಯ ಭೇಟಿ ರದ್ದುಪಡಿಸಿದ್ದಾರೆ. ಖಾನ್ ಅವರು ಶುಕ್ರವಾರದಿಂದ ಮೂರು ದಿನಗಳ ಕಾಲ ಶಿಲ್ಲಾಂಗ್ ಪ್ರವಾಸ ಕೈಗೊಳ್ಳುವ ಯೋಜನ ಇತ್ತು.

ಉಭಯ ಸರ್ಕಾರಗಳು ಈ ಭೇಟಿ ರದ್ದತಿ ವಿವಾದ ಶಮನಗೊಳಿಸಲು ಪ್ರಯತ್ನ ನಡಸಿದರೂ, ಈ ಕಾಯ್ದೆಯ ಪರಿಣಾಮಗಳ ಬಗ್ಗೆ ಮಾತ್ರವಲ್ಲದೇ, ಬಾಂಗ್ಲಾದೇಶದ ಪ್ರಸಕ್ತ ಆಡಳಿತ ವ್ಯವಸ್ಥೆಯನ್ನು ಶ್ಲಾಘಿಸಿದರೂ, ಒಟ್ಟಾರೆಯಾಗಿ ಬಾಂಗ್ಲಾದೇಶವನ್ನು ಭಾರತದ ಹಿರಿಯ ಸಚಿವರು ಬಿಂಬಿಸಿರುವ ರೀತಿ ಬಾಂಗ್ಲಾದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ವಿದೇಶಾಂಗ ಖಾತೆ ರಾಜ್ಯ ಸಚಿವ ಶಹರಿಯಾಲ್ ಅಲಮ್ ಮ್ಯಾಡ್ರಿಡ್ ಪ್ರವಾಸ ಕೈಗೊಂಡಿರುವುರಿಂದ ಮೊಮೆನ್ ಅವರು ಹುತಾತ್ಮರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಢಾಕಾದಲ್ಲೇ ಉಳಿಯುವುದು ಅನಿವಾರ್ಯವಾಗಿದೆ ಎಂದು ಬಾಂಗ್ಲಾದೇಶ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ವಾಸ್ತವವಾಗಿ ಇವು ಯಾವುವೂ ಕೊನೆಕ್ಷಣದ ಭೇಟಿಗಳಲ್ಲ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಕೂಡಾ ಮೊಮೆನ್ ಅವರ ಹೊಸದಿಲ್ಲಿ ಭೇಟಿಯ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿತ್ತು. ಹಿಂದೂ ಮಹಾಸಾಗರ ಸಂವಾದದಲ್ಲಿ ಪಾಲ್ಗೊಳ್ಳುವ ಸಂಬಂಧ ಅವರು ಗುರುವಾರ ಸಂಜೆ ಭೇಟಿ ನೀಡಬೇಕಿತ್ತು. ಬಳಿಕ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಜತೆಗೆ ಮಾತುಕತೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News