ಜಮ್ಮು ಕಾಶ್ಮೀರದಲ್ಲಿ ಅಪ್ರಾಪ್ತರನ್ನು ಬಂಧನದಲ್ಲಿರಿಸಿಲ್ಲ: ಬಾಲನ್ಯಾಯಮಂಡಳಿ ವರದಿ ಒಪ್ಪಿದ ಸುಪ್ರೀಂ ಕೋರ್ಟ್

Update: 2019-12-13 12:42 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ ಯಾವುದೇ ಅಪ್ರಾಪ್ತರನ್ನು ಅಕ್ರಮವಾಗಿ ಜೈಲುಗಳಲ್ಲಿರಿಸಲಾಗಿಲ್ಲ ಎಂದು ಅಲ್ಲಿನ ಹೈಕೋರ್ಟಿನ ಬಾಲನ್ಯಾಯಮಂಡಳಿ ನೀಡಿರುವ ವರದಿ ತೃಪ್ತಿ ತಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನಾಲ್ಕು ಮಂದಿ ಹೈಕೋರ್ಟ್ ನ್ಯಾಯಾಧೀಶರು ಜಮ್ಮು ಕಾಶ್ಮೀರದ ಎಲ್ಲಾ ಜೈಲುಗಳಿಗೂ ಭೇಟಿ ನೀಡಿ ಅಲ್ಲಿ ಯಾರೂ ಅಪ್ರಾಪ್ತರನ್ನು ಅಕ್ರಮವಾಗಿ ದಿಗ್ಬಂಧನದಲ್ಲಿರಿಸಲಾಗಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆಂದು ವರದಿಯನ್ನು ಓದಿದ ನಂತರ ಸುಪ್ರೀಂ ಕೋರ್ಟ್ ಹೇಳಿದೆ.

ತನ್ನದೇ ನ್ಯಾಯಾಧೀಶರನ್ನು ನ್ಯಾಯಾಲಯ ನಂಬದೇ ಇದ್ದರೆ ಸರಿಯಾಗದು ಎಂದೂ ಜಸ್ಟಿಸ್ ಎನ್. ವಿ. ರಮಣ ಅವರ ನೇತೃತ್ವದ ಪೀಠ ಹೇಳಿದೆ.

370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಅಪ್ರಾಪ್ತರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿರುವ ಅಪೀಲುದಾರೆ ಏನಾಕ್ಷಿ ಗಂಗೂಲಿ ಪರ ವಕೀಲ ಹುಝೈಫಾ ಅಹ್ಮದ್ ತಮಗೆ ಬಾಲನ್ಯಾಯ ಸಮಿತಿಯ ವರದಿಯ ಕುರಿತು ಪ್ರತಿಕ್ರಿಯಿಸಲು ಸಮಯಾವಕಾಶ ನೀಡಬೇಕೆಂದು ಕೋರಿದಾಗ ಸುಪ್ರೀಂ ಕೋರ್ಟ್ ಪೀಠ ಮೇಲಿನಂತೆ ಹೇಳಿತು. ಅದೇ ಸಮಯ ಅಪೀಲುದಾರರಿಗೆ ಇನ್ನೂ ಅಪ್ರಾಪ್ತರನ್ನು ದಿಗ್ಬಂಧನದಲ್ಲಿರಿಸಲಾಗಿದೆ ಎಂಬಂತಹ ದೂರುಗಳಿದ್ದರೆ ಸೂಕ್ತ ವೇದಿಕೆಯ ಮುಂದೆ ತಮ್ಮ ದೂರನ್ನು ಸಲ್ಲಿಸಬಹುದು ಎಂದು ಪೀಠ ಹೇಳಿತು.

ಅಪ್ರಾಪ್ತರನ್ನು  ಅಕ್ರಮವಾಗಿ ದಿಗ್ಬಂಧನದಲ್ಲಿರಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಿದ ಹೆಚ್ಚುವರಿ ಡಿಜಿಪಿ ವರದಿಯೂ ಬಾಲನ್ಯಾಯ ಸಮಿತಿಯ ವರದಿಯಲ್ಲಿ ಉಲ್ಲೇಖಗೊಂಡಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದುಗೊಂಡ ನಂತರ 144 ಅಪ್ರಾಪ್ತರನ್ನು ವಶಪಡಿಸಿಕೊಳ್ಳಲಾಗಿತ್ತಾದರೂ 142 ಮಂದಿಯನ್ನು ಬಿಡುಗಡೆಗೊಳಿಸಿ ಉಳಿದ ಇಬ್ಬರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿತ್ತು ಎಂದು ವರದಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News