'ನಿಮ್ಮ ರಾಜಕೀಯ ಲಾಭಕ್ಕಾಗಿ ಗಡಿಯಾಚೆಗಿನ ಹಿಂದೂಗಳನ್ನು ಎಳೆದು ತರಬೇಡಿ'

Update: 2019-12-19 06:38 GMT

ಹೊಸದಿಲ್ಲಿ: ಕೇಂದ್ರ ಸರಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಪಾಕಿಸ್ತಾನದ ಕನಿಷ್ಠ ಮೂವರು ಹಿಂದೂ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎನ್‍ ಡಿಎ ಸರಕಾರ ತನ್ನ ರಾಜಕೀಯ ಲಾಭಕ್ಕೋಸ್ಕರ ಗಡಿಯಾಚೆಗಿನ ಹಿಂದು ಅಲ್ಪಸಂಖ್ಯಾತರನ್ನು ಎಳೆದು ತರಬಾರದು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ತೆಹರೀಕ್-ಎ-ಇನ್ಸಾಫ್ ಪಕ್ಷದಿಂದ ಆಯ್ಕೆಯಾಗಿರುವ ನ್ಯಾಷನಲ್ ಅಸೆಂಭ್ಲಿ ಸದಸ್ಯ ಲಾಲ್ ಚಂದ್ರ ಮಲ್ಹಿ ಮಾತನಾಡುತ್ತಾ, "ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ಈ ಮಸೂದೆ ಏಕೈಕ ಆಶಾಕಿರಣ ಎಂಬಂತೆ ಭಾರತದ ಗೃಹ ಸಚಿವ ಅಮಿತ್ ಶಾ ಬಿಂಬಿಸುತ್ತಿರುವುದು ದುರದೃಷ್ಟಕರ. ನಾವು ಪಾಕಿಸ್ತಾನದ ಹೆಮ್ಮೆಯ  ಅಲ್ಪಸಂಖ್ಯಾತರಾಗಿದ್ದು ದೇಶಕ್ಕಾಗಿ ಇತರ ಸಮುದಾಯಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ'' ಎಂದು ಹೇಳಿದ್ದಾರೆ.

ಸಿಂಧ್ ಅಸೆಂಬ್ಲಿಯ ಸದಸ್ಯ ಸಚನಂದ್ ಲಖ್ವಾನಿ ಮಾತನಾಡುತ್ತಾ, "ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಆಂತರಿಕ ವಿಚಾರವಾಗಿ ಉಳಿದಿಲ್ಲ. ಅವರು (ಭಾರತ) ಮೂರು ದೇಶಗಳ ಅಲ್ಪಸಂಖ್ಯಾತ ಸಮುದಾಯಗಳನ್ನು ಶಾಮೀಲುಗೊಳಿಸಿದ್ದಾರೆ ಹಾಗೂ ಪಾಕಿಸ್ತಾನದ ಹಿಂದುಗಳನ್ನೂ ಈ ವಿಚಾರದಲ್ಲಿ ಎಳೇದು ತರುವ ಮೂಲಕ ನಮ್ಮ ಆಂತರಿಕ ವಿಚಾರಗಳಲ್ಲಿ ಭಾರತ ಹಸ್ತಕ್ಷೇಪ ನಡೆಸಿದೆ'' ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನದ ಹಿಂದು ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅಮಿತ್ ಶಾ ಹೇಳಿಕೆಯನ್ನೂ ಅವರು ಪ್ರಶ್ನಿಸಿದ್ದಾರೆ. ಲಖ್ವಾನಿ ಅವರು ಆಜ್ಮೀರ್ ಮಾಯೋ ಕಾಲೇಜಿನಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ.

ಸಿಂಧ್ ಪ್ರಾಂತ್ಯದ ಜಂಶ್ರೂ ಸಂಸದ ಕೇಸೂ ಮೈ ಖೀಯಲ್ ದಾಸ್ ಈ ಕುರಿತು ಪ್ರತಿಕ್ರಿಯಿಸಿ, "ಪೌರತ್ವ ತಿದ್ದುಪಡಿ ಕಾಯಿದೆಯನ್ನು ಖಂಡಿಸಿದರಲ್ಲದೆ ಪಾಕಿಸ್ತಾನದ ಯಾವುದೇ ಹಿಂದು ತಮ್ಮ ದೇಶವನ್ನು ಬಿಡಲು ಬಯಸುವುದಿಲ್ಲ, ಇಲ್ಲಿನ ಪರಿಸ್ಥಿತಿ ಸುಧಾರಿಸುತ್ತಿದೆ ಎಂದಿದ್ದಾರೆ. ದಾಸ್ ಅವರು ಪಿಎಂಎಲ್-ಎನ್ ಪಕ್ಷದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News