ಭಿನ್ನ ವಸ್ತುವೊಂದನ್ನು ಕಟ್ಟಿಕೊಟ್ಟಿರುವ ಯುದ್ಧ ವಿರೋಧಿ ಸಿನೆಮಾ: ‘ಇರಂಡಾಂ ಉಲಗಪೋರಿನ್ ಕಡೈಸಿ ಗುಂಡು’

Update: 2019-12-14 18:24 GMT

ಇತ್ತೀಚೆಗೆ ಬಿಡುಗಡೆಯಾದ ತಮಿಳು ಚಲನಚಿತ್ರ ‘ಇರಂಡಾಂ ಉಲಗಪೋರಿನ್ ಕಡೈಸಿ ಗುಂಡು’ (ಎರಡನೇ ವಿಶ್ವಸಮರದ ಕೊನೆಯ ಗುಂಡು) ತಮಿಳು ಚಲನಚಿತ್ರರಂಗದ ಗಮನಾರ್ಹ ಯುವನಿರ್ದೇಶಕ ಪ. ರಂಜಿತ್‌ರ ನೀಲಂ ಪ್ರೊಡಕ್ಷನ್‌ನ ಎರಡನೇ ಚಲನಚಿತ್ರ. ಆದರೆ ಇದು ನಿರ್ದೇಶಕ ಅಧಿಯನ್ ಆಧಿರೈರ ಪ್ರಥಮ ಚಲನಚಿತ್ರ. ತಮ್ಮದೇ ಆದ ಸಿನೆಮಾ ನಿರ್ಮಾಣ ಸಂಸ್ಥೆಯನ್ನು ಶುರುಮಾಡುವಾಗ ರಂಜಿತ್ ಹೊಸಬರಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದರು. ಅವರು ನುಡಿದಂತೆ ನಡೆಯುತ್ತಿದ್ದಾರೆ.

ಯುದ್ಧಕ್ಕೆ ಸಂಬಂಧಿಸಿದಂತೆ ಅನೇಕ ಚಲನಚಿತ್ರಗಳು ಬಂದಿವೆ. ನಮ್ಮ ವಿಶ್ವ ಕಂಡ ಎರಡು ಮಹಾಯುದ್ಧಗಳು ನಾಗರಿಕತೆಯ ದುರಂತ ಅಧ್ಯಾಯಗಳ ಸಾಲಿಗೆ ಸೇರುತ್ತವೆ. ಇವುಗಳ ವಸ್ತು ಹೊಂದಿರುವ ತುಂಬ ಚಲನಚಿತ್ರಗಳು ತೆರೆಕಂಡಿವೆ. ಆದರೆ ಅವುಗಳಲ್ಲಿ ಬಳಸಲಾಗದ ಒಂದು ಬಾಂಬಿನ ಚಿತ್ರಕಥೆಯುಳ್ಳ ಚಲನಚಿತ್ರ ಭಾರತದಲ್ಲಿ ನಿರ್ಮಾಣಗೊಂಡಿರುವುದು ಇದೇ ಪ್ರಥಮ.

ಲೋಹದ ನಿರುಪಯುಕ್ತ ಸರಕು/ವಸ್ತುಗಳನ್ನು ಅಂಗಳದಿಂದ ಕೊಂಡೊಯ್ಯುವುದು ಲಾರಿ ಡ್ರೈವರ್ ಸೆಲ್ವಂ(ನಟ ದಿನೇಶ್)ನ ಕೆಲಸ. ಅದರ ಮಾಲಕ ಬಾಷಾ(ನಟ ಮಾರಿಮುತ್ತು) ಕೆಲಸಗಾರರನ್ನು ಎಲ್ಲ ಬಗೆಯ ಶೋಷಣೆಗಳಿಗೆ ಈಡುಮಾಡುತ್ತಿರುತ್ತಾನೆ. ಇವುಗಳ ವಿರುದ್ಧ ಸೆಲ್ವಂ ದನಿಯೆತ್ತಲು ಮುಂದಾಗುತ್ತಾನೆ. ಬಾಷಾ ಸೆಲ್ವಂನನ್ನು ಸದೆಬಡಿಯಲು ಲಾರಿಯ ಕ್ಲೀನರ್ ಪಂಕ್ಚರ್(ಅಡ್ಡಹೆಸರು-ನಟ ಮುನಿಷ್ಕಾಂತ್)ನಿಗೆ ತಾನು ಡ್ರೈವರ್ ಅಗಬೇಕೆಂದು ಇರುವ ಆಸೆಯನ್ನು ಬಳಸಿಕೊಳ್ಳುತ್ತಾನೆ. ಕೆಳಜಾತಿಯ ಸೆಲ್ವಂಗೆ ಉಚ್ಚಜಾತಿಯ ಉಪಾಧ್ಯಾಯಿನಿ ಚಿತ್ರಾ(ನಟಿ ಆನಂದಿ) ಎಂಬ ಮನದನ್ನೆಯಿರುತ್ತಾಳೆ. ಆಕೆಯ ಕುಟುಂಬ ಇವರೀರ್ವರ ಪ್ರೀತಿಯನ್ನು ವಿರೋಧಿಸುತ್ತಿರುತ್ತದೆ. ಒಮ್ಮೆ ಸೆಲ್ವಂ ತನ್ನ ಲಾರಿಯಲ್ಲಿ ದೊಡ್ಡ ಪ್ರಮಾಣದ ಕಬ್ಬಿಣದ ಗುಜರಿ ಪದಾರ್ಥಗಳನ್ನು ಸಾಗಿಸುತ್ತಿರುವಾಗ ಅವುಗಳಲ್ಲಿ ಒಂದು ಹಳೆಯ ಕಾಲದ ದೊಡ್ಡ ಗಾತ್ರದ ಬಾಂಬು ಸೇರಿಕೊಂಡಿರುತ್ತದೆ. ಇದಕ್ಕೆ ಸಮಾನಾಂತರವಾಗಿ ತನ್ಯಾ(ನಟಿ ಋತ್ವಿಕಾ) ಎಂಬ ಟಿವಿ ತನಿಖಾ ವರದಿಗಾರ್ತಿ ಮತ್ತು ಯುದ್ಧ ವಿರೋಧಿ ಕಾರ್ಯಕರ್ತೆ, ತಮಿಳುನಾಡಿನ ಮಹಾಬಲಿಪುರಂನ ಕಡಲ ಕಿನಾರೆಯನ್ನು ತಲುಪಿದ ಆ ಸ್ಫೋಟಗೊಳ್ಳದ ಬಾಂಬಿನ ಹಿಂದೆ ಬಿದ್ದಿರುತ್ತಾಳೆ. ಪ್ರಬಲ ರಾಜಕೀಯ ಸಂಬಂಧಗಳುಳ್ಳ, ಒಬ್ಬ ಯುದ್ಧಾಯುಧಗಳ ವ್ಯಾಪಾರಿಯ ಕಾರ್ಪೊರೇಟ್ ಕಂಪೆನಿ ಬಾಂಬುಗಳನ್ನು ನಿಶ್ಚೇತನಗೊಳಿಸುವ ಗುತ್ತಿಗೆಯನ್ನು ಪಡೆದುಕೊಂಡಿರುತ್ತದೆ. ಈ ವ್ಯವಹಾರದಲ್ಲಿ ಸುಮಾರು 2,000 ಕೋಟಿ ರೂಪಾಯಿಗಳ ಹಗರಣ ಜರುಗಿರುತ್ತದೆ. ಬಾಂಬುಗಳನ್ನು ಸಕ್ರವವಾಗಿ ನಿಶ್ಚೇತನಗೊಳಿಸುವ ಬದಲು ಈ ಕಂಪೆನಿ ಅವುಗಳನ್ನು ಸಮುದ್ರಕ್ಕೆ ಎಸೆದಿದೆ ಎಂಬ ಶಂಕೆ ಬಲವಾಗಿ ಇರುತ್ತದೆ. ಸೆಲ್ವಂನ ಲಾರಿಯಲ್ಲಿದ್ದ ಬಾಂಬಿನ ಕಥೆ ಏನಾಗುತ್ತದೆ ಎಂಬುದನ್ನು ಚಲನಚಿತ್ರದ ಕ್ಲೈಮಾಕ್ಸ್ ನಲ್ಲಿ ತಿಳಿಯುತ್ತದೆ.

ಚಲನಚಿತ್ರದ ಪ್ರಾರಂಭಿಕ ಹಂತದಲ್ಲೇ ಬಾಷಾ ತನ್ನ ಕೆಲಸಗಾರರ ಮೇಲೆ ನಿರ್ದಯೆಯಿಂದ ದೌರ್ಜನ್ಯ ನಡೆಸುವ ಕೆಲವು ದೃಶ್ಯಗಳಿವೆ. ಬಾಂಬನ್ನು ತನ್ನ ಕಾಲಿನ ಮೇಲೆ ಬೀಳಿಸಿಕೊಂಡ ಒಬ್ಬ ಕೆಲಸಗಾರನನ್ನು ಸೆಲ್ವಂ ಅಂಗಳದಲ್ಲಿದ್ದ ಸರಕು ಸಾಗಣೆಯ ಆಟೋದಲ್ಲಿ ಆಸ್ಪತ್ರೆಗೆ ಸಾಗಿಸಲು ಸನ್ನದ್ಧನಾಗುತ್ತಾನೆ. ಈ ಘಟನೆಯಿಂದ ರವಷ್ಟೂ ಚಿಂತೆಗೀಡಾಗದ ಬಾಷಾ ಟಿಫಿನ್ ಕ್ಯಾರಿಯರ್‌ನಲ್ಲಿದ್ದ ಊಟವನ್ನು ಆಸ್ವಾದಿಸುತ್ತಿರುತ್ತಾನೆ! ತೀವ್ರವಾಗಿ ಗಾಯಗೊಂಡ ಕೆಲಸಗಾರನನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ತಾಕೀತು ಮಾಡುತ್ತ ಒಂದು ನೂರು ರೂಪಾಯಿಯ ನೋಟನ್ನು ಕೊಡುತ್ತಾನೆ! ಆಸ್ಪತ್ರೆಯಲ್ಲಿ ಸೆಲ್ವಂಗೆ ಎಡ ವಿದ್ಯಾರ್ಥಿ ಸಂಘಟನೆಯ ಕಾರ್ಕರ್ತೆಯೂ ಆಗಿರುವ ತನ್ಯಾಳ ಭೇಟಿಯಾಗುತ್ತದೆ. ಆಕೆ ಕೆಲಸಗಾರರೆಲ್ಲ ಸೇರಿ ಒಂದು ಸಂಘವನ್ನು ಕಟ್ಟಬಹುದಾದ ಸಾಧ್ಯತೆಯನ್ನು ಪ್ರಸ್ತಾಪಿಸುತ್ತಾಳೆ. ನಂತರ ಈ ಸಲಹೆಗೆ ಜೊತೆಗಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದಾಗ, ಸೆಲ್ವಂ ಗುಂಡು ಹಾಕಿ, ಬಾಷಾನ ಎದುರು ಆತನ ದಮನಕಾರಿ ಪ್ರವೃತ್ತಿಯ ವಿರುದ್ಧ ಹರಿಹಾಯುತ್ತಾನೆ! ಇದರರ್ಥ: ಸ್ವಾಭಾವಿಕ ಸ್ಥಿತಿಯಲ್ಲಿ ಪ್ರತಿಭಟಿಸಿದರೆ, ಕೆಲಸ ಹೋಗುವುದು ಗ್ಯಾರಂಟಿ, ಕುಡಿದ ಮತ್ತಿನಲ್ಲಿ ಕೂಗಾಡಿದರೆ ಸ್ವಲ್ಪವಿನಾಯಿತಿ ದೊರಕಬಹುದೆಂಬ ಆಶಯವನ್ನ ಆತ ಹೊಂದಿರುತ್ತಾನೆ! ಮಾಧ್ಯಮದ ಒಂದು ವರದಿಯ ಅನ್ವಯ ಈ ಚಲನಚಿತ್ರದ ನಿರ್ದೇಶಕರು ಇಂತಹ ಒಂದು ಕೆಲಸಗಾರರಾಗಿದ್ದರಂತೆ! ಬಹುಶಃ ಸ್ವಾನುಭವವೇ ಇಲ್ಲಿ ಬಿಂಬಿತವಾಗಿರಬಹುದು!

 ಕಮರ್ಷಿಯಲ್ ಚೌಕಟ್ಟಿನಲ್ಲೇ ಈ ಚಲನಚಿತ್ರ ನಿರ್ಮಾಣವಾಗಿದೆ. ಇಲ್ಲಿ ಹಾಡುಗಳು, ಫೈಟುಗಳು, ಹಾಸ್ಯ, ಪ್ರಣಯ, ಮೆಲೋಡ್ರಾಮ ಮುಂತಾದುವು ಇವೆ. ಇದನ್ನು ಭಾಗಶಃ ರೋಡ್ ಮೂವಿ, ಥ್ರಿಲ್ಲರ್ ಮತ್ತು ಸಂದೇಶವನ್ನು ರವಾನಿಸುವ ಚಲನಚಿತ್ರವೆಂದು ಪರಿಗಣಿಸಬಹುದೇನೋ. ಪ. ರಂಜಿತ್ ನಿರ್ದೇಶಿಸಿದ/ನಿರ್ಮಿಸಿದ ಚಲನಚಿತ್ರಗಳಲ್ಲಿ ವರ್ಗ-ಜಾತಿ ಸಂಘರ್ಷಗಳು ಮತ್ತು ಅಂಬೇಡ್ಕರ್-ಎಡರಾಜಕೀಯ ಚಿಂತನೆಗಳ ಎಳೆಗಳು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಅಭಿವ್ಯಕ್ತಿಗೊಂಡಿರುತ್ತವೆ. ಅವು ‘ಕಾಳಾ’, ‘ಪರಿಯೇರುಂ ಪೆರುಮಾಳ್’ ಚಲನಚಿತ್ರಗಳಲ್ಲಿರುವಂತೆ ಇಲ್ಲೂ ಇವೆ! ಕಾರ್ಪೊರೇಟ್ ಕಂಪೆನಿಯೊಂದರ ಕಬಂಧ ಬಾಹುಗಳು ಮತ್ತು ಪೊಲೀಸ್ ವ್ಯವಸ್ಥೆಯ ಮೇಲಿನ ಅದರ ಹತೋಟಿ ಇತ್ಯಾದಿಗಳನ್ನು ಢಾಳಾಗಿ ದಾಟಿಸಲಾಗಿದೆ. ‘ತೆರೆಕೂತು’(ಬೀದಿ ನಾಟಕ)ಎಂಬುದು ತಮಿಳುನಾಡಿನ ಒಂದು ಪುರಾತನ ಜಾನಪದೀಯ ನೃತ್ಯ ಕಲೆ. ಸಾಮಾನ್ಯವಾಗಿ ಇದರಲ್ಲಿ ರಾಮಾಯಣ, ಮಹಾಭಾರತ, ತಮಿಳಿನ ಶಾಸ್ತ್ರೀಯ ಕೃತಿಗಳ ಅಂಶಗಳಿರುತ್ತವೆ. ಆದರೆ ಇಲ್ಲಿ ಅದು ಕಾರ್ಮಿಕರ ದೈನಂದಿನ ಜೀವನದ ತುಣುಕುಗಳುಳ್ಳ ಹಾಡಾಗಿ ಪರಿವರ್ತನೆಗೊಂಡಿದೆ!

ಸಿನೆಮಾಟೋಗ್ರಾಫರ್ ಕಿಶೋರ್ ಕುಮಾರ್ ಮತ್ತು ಸಂಗೀತ ನಿರ್ದೇಶಕರಾದ ತೆನ್ಮಾರಿಗೆ ಇದು ಚೊಚ್ಚಲ ಚಲನಚಿತ್ರವಾಗಿದೆ. ಅವರಿಬ್ಬರ ಪರಿಶ್ರಮ ಮತ್ತು ಕಲೆಗಾರಿಕೆ ಎದ್ದು ಕಾಣುತ್ತವೆ. ಸೌಂಡ್‌ಸ್ಕೇಪ್‌ನಲ್ಲಿ ಮೆಟಾಲಿಕ್ ಶಬ್ದಗಳ ಬಳಕೆ, ಹಿತಮಿತವಾದ ಬಿಜಿಎಮ್ ಮತ್ತು ಚಲನಚಿತ್ರದ ತಿರುಳಿಗೆ ಸ್ಪಂದಿಸುವಂತಹ ಕ್ಯಾಮರಾದ ಸಹಜ ಬೆಳಕಿನ ಶಾಟ್‌ಗಳು ಸಿನೆಮಾಗೆ ಕಳೆಯನ್ನು ಕಟ್ಟಿಕೊಡುತ್ತವೆ. ಬ್ಲ್ಯಾಕ್ ಕಾಮಿಡಿಯನ್ನು ಗುರುತಿಸುವಂತೆ ನಿರ್ವಹಿಸಿದ್ದಾರೆ ಹಾಸ್ಯನಟ ಮುನಿಷ್ಕಾಂತ್. ಅಂತೆಯೇ ದಿನೇಶ್‌ರ ನಟನೆಯೂ ಪಾತ್ರಕ್ಕೆ ತಕ್ಕಂತಿದೆ. ಸಂಭಾಷಣೆಗಳು ಚುರುಕಾಗಿವೆ. ಹಾಡುಗಳೂ ಮಸ್ತಾಗಿವೆ. ಎರಡನೇ ವಿಶ್ವಸಮರದ ಕಾರ್ಯಾಚರಣೆಗಳನ್ನು ಮತ್ತು ಹಿರೋಶಿಮಾ, ನಾಗಾಸಾಕಿಯಲ್ಲಿ ಅಣುಬಾಂಬಿನ ಪ್ರಯೋಗದಿಂದ ಜರುಗಿದ ಮಾರಣಹೋಮವನ್ನು ಕ್ರಮವಾಗಿ ಸಾಕ್ಷ್ಯಚಿತ್ರದ ಫುಟೇಜ್‌ಗಳು ಮತ್ತು ಕಲಾಕೃತಿಗಳ ಮೂಲಕ ದಾಟಿಸಲಾಗಿದೆ.

ಆದರೆ ಸಮುದಾಯದ ಒಳಿತಿನಲ್ಲಿ ಬಾಂಬ್ ಹಿಂದೆ ಧಾವಿಸುವ ತನ್ಯಾಳ ಅಂತಿಮ ಗುರಿಯ ಸುತ್ತ ಹೆಣೆದಿರುವ ಘಟನೆಗಳಿಗೆ ಇನ್ನಷ್ಟು ಸಾಂದ್ರತೆ ಬೇಕಿತ್ತು. ಸೆಲ್ವಂ ಡ್ರೈವ್ ಮಾಡುತ್ತಿದ್ದ ಲಾರಿಯನ್ನು ಅಪಹರಿಸುವುದು, ಚಿತ್ರಾ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾರಿಯನ್ನು ಸೆಲ್ವಂನ ಸಹಾಯದಿಂದ ಓಡಿಸುವುದು ಇತ್ಯಾದಿ ತುರುಕಿದಂತಿವೆ. ಅಂತ್ಯವೂ ಮುಖ್ಯವಾಹಿನಿಯ ಚಲನಚಿತ್ರಗಳಂತೆ ಕ್ಲೋಸ್-ಎಂಡೆಡ್ ಆಗಿದೆ. ಇರಲಿ..ಒಂದು ಭಿನ್ನ ವಸ್ತುವನ್ನು ಕಟ್ಟಿಕೊಟ್ಟಿರುವ ಈ ಚಲನಚಿತ್ರದ ಕೊನೆಯಲ್ಲಿ ‘‘ಏನೇ ಪ್ರಶ್ನೆಯಿದ್ದರೂ ಆಯುಧವನ್ನು ಮಾತ್ರ ಎತ್ತಬಾರದು. ಸಂವಾದದ ಮೂಲಕ ಬಗೆಹರಿಸಿಕೊಳ್ಳಬೇಕು’’ ಎಂದು ಸೆಲ್ವಂ ಹೇಳುತ್ತಾನೆ! ಹೀಗಾಗಿ ಯುದ್ಧವಿರೋಧಿ ಮತ್ತು ಶಾಂತಿಯ ನೆಲೆಯಿಂದ ಪರಿಗಣಿಸಿದರೆ ಈ ಚಲನಚಿತ್ರ ಒಂದು ಇತ್ಯಾತ್ಮಕ ಪ್ರಯತ್ನವಾಗಿದೆ.

Writer - ಮ. ಶ್ರೀ ಮುರಳಿ ಕೃಷ್ಣ

contributor

Editor - ಮ. ಶ್ರೀ ಮುರಳಿ ಕೃಷ್ಣ

contributor

Similar News