ಒಂದು ಕರಾಳ ಶಾಸನ

Update: 2019-12-14 18:33 GMT

ಮುಸ್ಲಿಮರನ್ನು ಪೌರತ್ವ ತಿದ್ದುಪಡಿ ಶಾಸನದ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಮೋದಿ ಸರಕಾರ ಭಾರತೀಯ ಮುಸ್ಲಿಮರಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಮುಸ್ಲಿಮರು ಹಿಂದೂಗಳಿಗೆ ಸಮಾನರಲ್ಲ. ನೀವು ಭಾರತದಲ್ಲಿರಬಹುದು ಆದರೆ ಹಿಂದೂಗಳಂತೆ ಸಮಾನ ಹಕ್ಕುಗಳಿಗೆ ಅರ್ಹರಲ್ಲ ಎಂಬುದೇ ಆ ಸಂದೇಶ. ಇದು, ಮಸ್ಲಿಮರು ಭಾರತದಲ್ಲಿ ಬಾಳ್ವೆ ಮಾಡಬಹುದು, ಆದರೆ ಭಾರತೀಯ ಪೌರರ ಹಕ್ಕುಬಾಧ್ಯತೆಗಳಿಗೆ ಅರ್ಹರಲ್ಲ. ಅವರು ಎರಡನೆಯ ದರ್ಜೆ ಭಾರತೀಯರಾಗಿ ಇರಬೇಕು ಎಂಬ ಗೋಳ್ವಾಲ್ಕರ್, ಸಾವರ್ಕರ್ ಸಿದ್ಧಾಂತಕ್ಕನುಗುಣವಾಗಿಯೇ ಇದೆ.


ಪ್ರಜೆಗಳ ಒಳಿತಿಗಾಗಿ ಶಾಸನ ಮಾಡಲೆಂದು ಶಾಸನ ಸಭೆ ಇದೆ, ಶಾಸಕರು ಇದ್ದಾರೆ. ತಮ್ಮನ್ನು ಆಯ್ಕೆಮಾಡಿ ಕಳುಹಿಸಿದ ಪ್ರಜೆಗಳ ಹಿತ ಅಲಕ್ಷಿಸಿ ತಿಳಿಗೇಡಿ ಶಾಸಕರು ಜನವಿರೋಧಿ ಶಾಸನ ಮಾಡಿದರೆ ಏನಾಗಬಹುದು ಎನ್ನುವುದಕ್ಕೆ ಒಂದು ಜ್ವಲಂತ ನಿದರ್ಶನ ನಮ್ಮ ದೇಶದ ಇಂದಿನ ಪರಿಸ್ಥಿತಿ. ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ. ತಮ್ಮ ಅಸ್ಮಿತೆ ಅಳಿಸಿಹೋಗಲಿದೆ ಎಂದು ಅಸ್ಸಾಮಿನ ಮೂಲನಿವಾಸಿಗಳು ಕ್ರುದ್ಧರಾಗಿದ್ದಾರೆ. ಅಸ್ಸಾಂ ಧಗಧಗಿಸುತ್ತಿದೆ. ಇದೇ 19ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ವಾಮಪಂಥೀಯ ಪಕ್ಷಗಳು ಕರೆನೀಡಿವೆ. ಇದು ಈ ಅಂಕಣ ಬರೆಯುವ ವೇಳೆಗೆ ದೇಶದಲ್ಲಿ ಕಂಡುಬಂದ ಸ್ಥಿತಿ. ಜನರ ಹಾಗೂ ವಿರೋಧ ಪಕ್ಷಗಳ ವಿರೋಧವನ್ನು ಲೆಕ್ಕಿಸದೆ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸರಕಾರ ಪೌರತ್ವ ತಿದ್ದುಪಡಿ ಶಾಸನವನ್ನು ಜಾರಿಗೆ ತಂದಿರುವುದು, ಯಾವ ಸಂವಿಧಾನವನ್ನು ರಕ್ಷಿಸಿ ಅದರಂತೆ ನಡೆಯುವುದಾಗಿ ಪ್ರಮಾಣವಚನ ಸ್ವೀಕರಿಸಿದರೋ ಅದೇ ಸಂವಿಧಾನಕ್ಕೆ ಅಪಚಾರವೆಸಗಿರುವುದು, ದ್ರೋಹ ಬಗೆದಿರುವುದು ಪ್ರಜೆಗಳಲ್ಲಿ ಅಭದ್ರತೆಯ ಭಾವನೆಗೆಡೆಮಾಡಿಕೊಟ್ಟಿದೆ. ಸಂವಿಧಾನವನ್ನು ನೆಚ್ಚಿಕೊಂಡು ಬದುಕುತ್ತಿರುವ ಜನರು ಸಹಜವಾಗಿಯೇ ಮೋದಿ ಸರಕಾರದ ಈ ಕ್ರಮದ ವಿರುದ್ಧ ತಿರುಗಿಬಿದ್ದಿದ್ದಾರೆ.

ಪೌರತ್ವ ಎನ್ನುವುದು ಹಕ್ಕುಗಳನ್ನು ಪಡೆಯಲೋಸುಗ ಇರುವ ಜನರ ಹಕ್ಕು. ಭಾರತೀಯ ಭೂಪ್ರದೇಶದಲ್ಲಿ ವಾಸಮಾಡುತ್ತಿರುವವರು ಭಾರತದ ಪೌರತ್ವ ಪಡೆಯುವ ಹಕ್ಕಿಗೆ ಅರ್ಹರು ಎಂದು 1950ರಲ್ಲಿ ಅಂಗೀಕರಿಸಲಾದ ನಮ್ಮ ಸಂವಿಧಾನದ ಎರಡನೆಯ ಅಧ್ಯಾಯದಲ್ಲಿ ಖಚಿತವಾಗಿ ತಿಳಿಸಲಾಗಿದೆ. ಸಂವಿಧಾನದ ಆರನೆಯ ವಿಧಿಯನ್ವಯ ಪಾಕಿಸ್ತಾನದ ಭೂಪ್ರದೇಶದಿಂದ ಭಾರತಕ್ಕೆ ಬಂದ ವಲಸಿಗರೂ ಭಾರತದ ಪೌರತ್ವದ ಹಕ್ಕಿಗೆ ಅರ್ಹರು. ಇಲ್ಲಿ ಧರ್ಮದ ಪ್ರಸ್ತಾಪವೇ ಇಲ್ಲ. ಪೌರತ್ವ ನೀಡಿಕೆ ಮತ್ತು ತಿರಸ್ಕರಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಕಾನೂನು ಮಾಡುವ ಸಂಸತ್ತಿನ ಅಧಿಕಾರವನ್ನೂ ಸಂವಿಧಾನ ಮಾನ್ಯ ಮಾಡಿದೆ. ಅದರಂತೆ 1955ರಲ್ಲಿ ಪೌರತ್ವ ಶಾಸನವನ್ನು ಅಂಗೀಕರಿಸಿ ಜಾರಿಗೆ ತರಲಾಯಿತು. ಈ ಶಾಸನದ ಪ್ರಕಾರ ಪೌರತ್ವ ನೀಡಿಕೆಗೆ ಧರ್ಮ ಮಾನದಂಡವಲ್ಲ. ಧರ್ಮದ ಆಧಾರಿತ ಪೌರತ್ವ ಸಂಗತವಲ್ಲ ಎಂಬುದು ಇದರಿಂದ ಸ್ಪಷ್ಟ. ಆದರೆ ಈಗ ಮೋದಿಯವರ ಸರಕಾರ 1955ರ ಪೌರತ್ವ ಶಾಸನಕ್ಕೆ ಮಾಡಿರುವ ತಿದ್ದುಪಡಿಯಿಂದಾಗಿ ಪೌರತ್ವಕ್ಕೆ ಧರ್ಮ ಅಸಂಗತ ಎಂಬುದು ಪಲ್ಲಟಹೊಂದಿದೆ. ಧರ್ಮವೇ ಮಾನದಂಡವಾಗಿದೆ. ಜಾತ್ಯತೀತ ಭಾರತದಲ್ಲಿ ಕೆಲವು ಧರ್ಮದ ಜನರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಹುದೇ ಎಂಬುದು ಈಗ ವ್ಯಾಪಕವಾಗಿ ಚರ್ಚೆಗೊಳಗಾಗಿರುವ ಸಂಗತಿ. ಜಾತ್ಯತೀತ ನೀತಿ ಭಾರತದ ಸಂವಿಧಾನದ ಮುಖ್ಯ ಲಕ್ಷಣ ಎಂಬುದು ಸರ್ವೋಚ್ಚ ನ್ಯಾಯಾಲಯದ ಹಲವಾರು ತೀರ್ಪುಗಳಿಂದ ಈಗಾಗಲೇ ಸಾಬೀತಾಗಿದೆ. ಸಂವಿಧಾನದ ಈ ಮುಖ್ಯಾಂಗವನ್ನು ಧಿಕ್ಕರಿಸಿ ಧರ್ಮದ ಆಧಾರದ ಮೇಲೆ ಕೆಲವು ಧರ್ಮೀಯರಿಗೆ ಪೌರತ್ವ ನೀಡುವುದು, ಇನ್ನು ಕೆಲವು ಧರ್ಮೀಯರಿಗೆ ಪೌರತ್ವ ನಿರಾಕರಿಸುವುದು ಎಷ್ಟರಮಟ್ಟಿಗೆ ಸರಿ? ಇದು ಜಾತ್ಯತೀತ ಸಂವಿಧಾನಕ್ಕೆ ಎಸಗಿದ ಅಪಚಾರವಲ್ಲವೇ? ಅಂತೆಯೇ ಮೋದಿ ಸರಕಾರ ಈಗ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಶಾಸನದಲ್ಲಿ ಭಾರತೀಯ ಪೌರತ್ವದ ಹಕ್ಕು ಪಡೆಯಲು ಯಾವ ಯಾವ ದೇಶಗಳ ಯಾವ ಯಾವ ಧರ್ಮೀಯರು ಅರ್ಹರು ಎಂದು ಮಾಡಿರುವ ವರ್ಗೀಕರಣವೂ ಅಸಂವಿಧಾನಾತ್ಮಕವಾಗಿದೆ.

ಭಾರತದ ಪೌರತ್ವ ಪಡೆಯಲು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಜೈನರು, ಪಾರ್ಸಿಗಳು, ಬೌದ್ಧರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಮಾತ್ರ ಅರ್ಹರೆಂದು ಪರಿಗಣಿಸಿರುವುದರ ಹಿಂದಿನ ಆಧಾರವೇನು, ತರ್ಕವೇನು ಎಂಬುದು ಸ್ಪಷ್ಟವಿಲ್ಲ. ಐತಿಹಾಸಿಕ ಸಾಮ್ಯವೊಂದೇ ಮಾನದಂಡವಾಗಲಾರದು. ಏಕೆಂದರೆ ಅಫ್ಘಾನಿಸ್ತಾನ ಬ್ರಿಟಿಷ್ ಭಾರತದ ಅಂಗವಾಗಿರಲಿಲ್ಲ ಯಾವತ್ತಿಗೂ ಅದೊಂದು ಪ್ರತ್ಯೇಕ ದೇಶ. ನೆರೆ ರಾಷ್ಟ್ರ ಎಂಬುದೂ ಆಧಾರವಾಗಲಾರದು. ಏಕೆಂದರೆ ಅಫ್ಘಾನಿಸ್ತಾನ ಭಾರತದೊಂದಿಗೆ ವಾಸ್ತವ ಗಡಿ ಹೊಂದಿಲ್ಲ. ಭಾರತದೊಂದಿಗೆ ವಾಸ್ತವ ಗಡಿಹೊಂದಿರುವ ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ ದೇಶಗಳನ್ನು ಏಕೆ ಪೌರತ್ವ ತಿದ್ದುಪಡಿ ಶಾಸನದಿಂದ ಹೊರಗಿಡಲಾಗಿದೆ? ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಇಸ್ಲಾಮ್ ಧರ್ಮೀಯ ರಾಷ್ಟ್ರಗಳಾಗಿದ್ದು ಅಲ್ಲಿ ಅಲ್ಪಸಂಖ್ಯಾತರಾದ ಅನ್ಯಧರ್ಮೀಯರಿಗೆ ಕಿರುಕುಳ ಕೊಡಲಾಗುತ್ತಿದೆ. ಇಂಥ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದು ಸರಕಾರದ ಉದ್ದೇಶವೆಂದು ಹೊಸ ಶಾಸನವನ್ನು ಸಮರ್ಥಿಸಿಕೊಳ್ಳಲಾಗಿದೆ.ಹಾಗಿದ್ದಲ್ಲಿ ಭೂತಾನ್‌ನಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿರುವ ಕ್ರಿಶ್ಚಿಯನ್ನರನ್ನೇಕೆ ಈ ಶಾಸನದ ವ್ಯಾಪ್ತಿಯೊಳಗೆ ತಂದಿಲ್ಲ ಎನ್ನುವ ಪ್ರಶ್ನೆ ಸಕಾರಣವಾದದ್ದು. ವಜ್ರಾಯನ ಬೌದ್ಧ ಧರ್ಮ ಭೂತಾನ್‌ನ ಅಧಿಕೃತ ಧರ್ಮ. ಈ ದೇಶದಲ್ಲಿ ಕ್ರಿಶ್ಚಿಯನ್ನರು ಮನೆಯೊಳಗೆ ಖಾಸಗಿಯಾಗಿ ಪ್ರಾರ್ಥನೆ ಮಾಡಬಹುದಷ್ಟೆ. ಹೀಗಾಗಿ ಅಲ್ಲಿನ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಚರ್ಚುಗಳಲ್ಲಿ ಪ್ರಾರ್ಥನೆ ಮಾಡಲೆಂದೇ ಗಡಿ ದಾಟಿ ಭಾರತಕ್ಕೆ ಬರುತ್ತಾರೆ. ಇದು ಮೋದಿಯವರ ಸರಕಾರಕ್ಕೆ ತಿಳಿಯದ ಸಂಗತಿ ಏನಲ್ಲ. ಇವರಿಗೇಕೆ ಹೊಸ ಶಾಸನದಲ್ಲಿ ರಕ್ಷಣೆ ಇಲ್ಲ? ಅಂತೆಯೇ ಬೌದ್ಧಧರ್ಮೀಯ ರಾಷ್ಟ್ರವಾದ ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತರಾದ ತಮಿಳರೂ ಇಂತಹ ಕಿರುಕುಳಕ್ಕೊಳಗಾದವರು. ಅವರನ್ನೇಕೆ ಹೊಸ ಪೌರತ್ವ ಶಾಸನದ ವ್ಯಾಪ್ತಿಯಿಂದ ಹೊರಗಿಡಲಾಗಿದೆ? ಜನಾಂಗಹತ್ಯೆಯ ಕ್ರೌರ್ಯ ತಡೆಯಲಾಗದೆ ಮ್ಯಾನ್ಮಾರ್‌ನಿಂದ ಭಾರತದ ಗಡಿ ದಾಟಿ ಬಂದಿರುವ ರೊಹಿಂಗ್ಯಾಗಳಿಗೇಕೆ ಪೌರತ್ವದ ರಕ್ಷಣೆ ಇಲ್ಲ? ಧಾರ್ಮಿಕ ಕಿರುಕುಳವೊಂದೇ ಪೌರತ್ವ ತಿದ್ದುಪಡಿ ಶಾಸನದ ತಿದ್ದುಪಡಿಯ ಪ್ರಮುಖ ಗುರಿಯಾಗಿರುವಂತಿದೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ರಾಜಕೀಯ ಕಿರುಕುಳ, ಉಪದ್ರವಗಳಿಗೊಳಗಾಗಿರುವ ಅನ್ಯಧರ್ಮೀಯರು ಇಲ್ಲದೇ ಇಲ್ಲ. ಕಾಟ, ಕಿರುಕುಳಗಳಿಗೆ ಒಳಗಾದವರ ರಕ್ಷಣೆಯೇ ತಿದ್ದುಪಡಿಯ ಉದ್ದೇಶವಾಗಿದ್ದಲ್ಲಿ ಅದನ್ನು ಧಾರ್ಮಿಕ ಕಿರುಕುಳಗಳಿಗೆ ಮಾತ್ರ ಸೀಮಿತಗೊಳಿಸುವುದು ಅತಾರ್ಕಿಕವಾದುದು. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅನ್ಯಧರ್ಮೀಯರನ್ನು ಮಾತ್ರ ಕಿರಿಕುಳಕ್ಕೆ ಗುರಿಪಡಿಸಲಾಗುತ್ತದೆ ಎಂಬ ಆಲೋಚನೆಯೂ ಸರಿಯಲ್ಲ. ಬಾಂಗ್ಲಾದೇಶದ ಕಾದಂಬರಿಗಾರ್ತಿ ತಸ್ಲೀಮಾ ನಸ್ರೀನ್‌ರ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ. ಅಂಥವರಿಗೇಕೆ ಹೊಸ ಶಾಸನದಲ್ಲಿ ಪೌರತ್ವದ ರಕ್ಷಣೆ ಇಲ್ಲ? ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲಿ ಹಿಂದೂಗಳಂತೆ ಶಿಯಾಗಳೂ ಅಹಮದೀಯರೂ ಕಿರಿಕುಳಕ್ಕೆ ಗುರಿಯಾಗಿದ್ದಾರೆ.

ಹೀಗಿರುವಾಗ ಮುಸ್ಲಿಮರಿಗೇಕೆ ಭಾರತೀಯ ಪೌರತ್ವ ಹಕ್ಕಿನ ರಕ್ಷಣೆ ಇಲ್ಲ? ಮಾನವೀಯತೆಯ ಆಧಾರದಮೇಲೆ ಪೌರತ್ವದ ಹಕ್ಕಿನ ಮೂಲಕ ರಕ್ಷಣೆ ನೀಡಲಾಗುತ್ತದೆ ಎನ್ನುವ ಪ್ರತಿಪಾದನೆ ನಿಜವಾಗಿದ್ದಲ್ಲಿ ತಿದ್ದುಪಡಿ ಶಾಸನ ನೀಡುವ ಈ ಸವಲತ್ತನ್ನು ಹಿಂದೂಗಳು, ಜೈನರು, ಸಿಖ್ಖರು, ಪಾರ್ಸಿಗಳು, ಕ್ರಿಶ್ಚಿಯನರು ಇವರುಗಳಿಗಷ್ಟೇ ಏಕೆ ಸೀಮಿತಗೊಳಿಸಬೇಕು ಎನ್ನುವ ಪ್ರಶ್ನೆಯಲ್ಲಿ ಹುರುಳಿಲದೇ ಇಲ್ಲ. ನಮ್ಮ ಸಂವಿಧಾನದ 14ನೇ ವಿಧಿಯ ಪ್ರಕಾರ ಭಾರತೀಯ ಭೂಪ್ರದೇಶದೊಳಗಿನ ಎಲ್ಲ ನಿವಾಸಿಗಳೂ ನ್ಯಾಯದ ಕಣ್ಣಲ್ಲಿ ಸರಿಸಮಾನರು. ಸರಕಾರ ಇಂಥ ಸಮಾನತೆಯನ್ನು, ಸಮನಾದ ಕಾನೂನು ರಕ್ಷಣೆಯನ್ನು ನಿರಾಕರಿಸಲಾಗದು. ಇದು ಅಕ್ರಮ ವಲಸಿಗರಿಗೂ ಅನ್ವಯಿಸುತ್ತದೆ. ಹೀಗಿರುವಾಗ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಿಂದ ಬಂದ ಅಕ್ರಮ ವಲಸಿಗರಿಗೆ ಧರ್ಮದ ಆಧಾರದ ಮೇಲೆ ರಕ್ಷಣೆ ನೀಡಿ ಮ್ಯಾನ್ಮಾರ್‌ನಿಂದ ಬಂದ ಅಕ್ರಮ ವಲಸಿಗರಿಗೇಕೆ ರಕ್ಷಣೆ ಇಲ್ಲ? ಮುಸ್ಲಿಮರನ್ನೇಕೆ ಸಮಾನತೆಯಿಂದ ವಂಚಿಸಲಾಗಿದೆ?

 ಹಿಂದೂಗಳಿಗೆ ಮಾತ್ರ ಪೌರತ್ವದ ಹಕ್ಕು ನೀಡುವ ಸರಕಾರದ ಹಿಂದಿನ ಪ್ರಚ್ಛನ್ನ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವುದೇ ಆಗಿದೆ. ಆ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಒಂದು ಕಾನೂನಾತ್ಮಕ ನಡೆ. ಅನ್ಯದೇಶಗಳಲ್ಲಿನ ಹಿಂದೂಗಳನ್ನು ಸೆಳೆಯುವ ಹಿಂದೂ ರಾಷ್ಟ್ರದ ಹುನ್ನಾರದ ಹಿಂದೆ ಭಾರತೀಯ ಜನತಾ ಪಕ್ಷದ ಚುನಾವಣಾ ಲೆಕ್ಕಾಚಾರವೂ ಇದೆ. ಇದು ವೋಟು ಬ್ಯಾಂಕ್ ಲೆಕ್ಕಾಚಾರವೇ. ಪೌರತ್ವ ತಿದ್ದುಪಡಿ ಮಸೂದೆಯ ಮುಂದಿನ ಕ್ರಮ, ಭಾರತೀಯ ಪೌರರ ರಾಷ್ಟ್ರೀಯ ದಸ್ತಾವೇಜು (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್). ಈ ದಸ್ತಾವೇಜಿನಲ್ಲಿ ಪೌರತ್ವದ ಸ್ಥಾನ ಪಡೆಯಲು ತಾನು ಭಾರತೀಯ ಸಂಜಾತ, ಭಾರತೀಯ ನಿವಾಸಿ ಎಂಬುದನ್ನು ಸ್ಥಿರೀಕರಿಸುವ ದಾಖಲೆಯನ್ನು ಒದಗಿಸಬೇಕಾಗುತ್ತದೆ. ಮುಸ್ಲಿಮ್ ದೇಶಗಳಿಂದ ಮುಸ್ಲಿಮರು ಯಾರೂ ಭಾರತಕ್ಕೆ ವಲಸೆ ಬರುವುದಿಲ್ಲ. ಬರುವವರೆಲ್ಲ ಹಿಂದೂಗಳೇ. ಇದರಿಂದಾಗಿ ಮುಸ್ಲಿಮರನ್ನು ಹೊರಗಿಟ್ಟಿರುವುದರಿಂದ ಮೂರು ಮುಸ್ಲಿಮ್ ರಾಷ್ಟ್ರಗಳ ಮುಸ್ಲಿಮರಿಗೇನೂ ಹಾನಿಯಾಗುವುದಿಲ್ಲ. ಹಾನಿಯಾಗುವುದು ಭಾರತದಲ್ಲಿ ತಲೆತಲಾಂತರದಿಂದ ನೆಲಸಿರುವ ಮುಸ್ಲಿಮರಿಗೆ, ಬೇರೆ ರಾಷ್ಟ್ರಗಳಿಂದ ಬಂದಿರುವ ಮುಸ್ಲಿಮರಿಗೆ, ಇಸ್ಲಾಮಿಗೆ ಮತಾಂತರ ಹೊಂದಿದವರಿಗೆ ಮತ್ತು ಭಾರತದ ಆದಿವಾಸಿಗಳಿಗೆ. ಏಕೆಂದರೆ ಇವರಲ್ಲಿ ಬಹುತೇಕ ಮಂದಿಯಲ್ಲಿ ಯಾವುದೇ ದಾಖಲೆಪತ್ರಗಳಿರುವುದಿಲ್ಲ. ಭಾರತೀಯ ಸಂಜಾತರು ಅಥವಾ ಭಾರತದ ನಿವಾಸಿಗಳು ಎಂಬುದಕ್ಕೆ ದಾಖಲೆ ಇಲ್ಲದವರನ್ನು ಅಭಾರತೀಯರೆಂದು ಪರಿಗಣಿಸಿ ಗಡೀಪಾರು ಮೊದಲಾದ ಕ್ರಮಗಳಿಗಾಗಿ ಕೂಡುದೊಡ್ಡಿ ಶಿಬಿರಗಳಿಗೆ ಕಳುಹಿಸಲಾಗುತ್ತದೆ. ಅಸ್ಸಾಂ ಪರಿಸ್ಥಿತಿಯನ್ನು ಗಮನಿಸೋಣ. ಅಸ್ಸಾಮಿನಲ್ಲಿ ನಡೆದ ಭಾರತೀಯ ಪೌರರ ರಾಷ್ಟ್ರೀಯ ದಸ್ತಾವೇಜಿನಲ್ಲಿ, ದಾಖಲೆಗಳಿಲ್ಲ ಎಂಬ ಕಾರಣಕ್ಕಾಗಿ ಸ್ಥಾನ ಪಡೆಯದೆ ಹೊರಗುಳಿದಿರುವವರ ಸಂಖ್ಯೆ 19 ಲಕ್ಷ. ಇವರಲ್ಲಿ ಹೆಚ್ಚುಮಂದಿ ಬಂಗಾಳಿ ಹಿಂದೂಗಳು. ಪೌರತ್ವ ತಿದ್ದುಪಡಿ ಶಾಸನದ ಲಾಭ ಪಡೆದು ಅಸ್ಸಾಮಿನಲ್ಲಿ ಹಿಂದೂಗಳನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಉಳಿಸಿಕೊಳ್ಳುವುದು ಮೋದಿ ಸರಕಾರದ ಆಲೋಚನೆ. ಅಕ್ರಮ ವಲಸಿಗರಿಂದ ಅಸ್ಸಾಮಿನ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆ ಯುಂಟಾಗಿದೆ ಎಂಬುದು ಅಸ್ಸಾಮಿನಲ್ಲಿ ಭಾರತೀಯ ಪೌರತ್ವದ ದಸ್ತಾವೇಜು ಕಾರ್ಯಾರಂಭಕ್ಕೆ ಮೂಲ ಕಾರಣ. ಅಕ್ರಮ ವಲಸಿಗರ ವಿರುದ್ಧ 1979 ಮತ್ತು 1985ರಲ್ಲಿ ಅಸ್ಸಾಮಿನಲ್ಲಿ ಭಾರೀ ಆಂದೋಲನವೇ ನಡೆಯಿತು. ಅಖಿಲ ಅಸ್ಸಾಂ ವಿದ್ಯಾರ್ಥಿ ವೇದಿಕೆ ಈ ಆಂದೋಲನದ ನಾಯಕತ್ವ ವಹಿಸಿತ್ತು. ಆಗ ರಾಜೀವ್ ಗಾಂಧಿಯವರ ಸರಕಾರ ಚಳವಳಿಗಾರರೊಂದಿಗೆ ಒಪ್ಪಂದ ಮಾಡಿಕೊಂಡಿತು.

‘ಅಸ್ಸಾಂ ಒಡಂಬಡಿಕೆ’ ಎಂದು ಕರೆಯಲಾಗುವ 1985ರ ಈ ಒಪ್ಪಂದದ ಪ್ರಕಾರ ಬಾಂಗ್ಲಾದೇಶದಿಂದ 1971ರ ನಂತರ ನುಸುಳಿ ಬಂದ ಅಕ್ರಮ ವಲಸಿಗರನ್ನು ಗುರುತಿಸಿ ಹೊರದೂಡುವ ಭರವಸೆಯನ್ನು ಕೇಂದ್ರ ಸರಕಾರ ಆಗ ನೀಡಿತ್ತು. ಅಸ್ಸಾಂ ಒಡಂಬಡಿಕೆಯನ್ನು ಜಾರಿಗೆ ತರುವುದಾಗಿ ಹಾಗೂ ಅಸ್ಸಾಮಿನ ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸುವುದಾಗಿ ಬಿಜೆಪಿ 2016ರ ವಿಧಾನಸಭೆ ಚುನಾವಣೆ ಹಾಗೂ ಇತೀಚಿನ ಲೋಕಸಭಾ ಚುನಾವಣೆ ಸಮಯದಲ್ಲಿ ಭರವಸೆ ನೀಡಿತ್ತು. ಈಗ ಮೋದಿಯವರ ಸರಕಾರ ತಂದಿರುವ ಪೌರತ್ವ ತಿದ್ದುಪಡಿ ಶಾಸನದನ್ವಯ ಬಾಂಗ್ಲಾದೇಶದಿಂದ ವಲಸೆ ಬಂದಿರುವ ಹಿಂದೂಗಳು ಅಸ್ಸಾಮಿನಲ್ಲೇ ಉಳಿಯಲಿದ್ದಾರೆ.ಮುಸ್ಲಿಮರನ್ನು ಮಾತ್ರ ಹೊರದಬ್ಬಲಾಗುತ್ತದೆ. ಪೌರತ್ವ ತಿದ್ದುಪಡಿ ಶಾಸನದಿಂದ ಬಿಜೆಪಿ ತಮಗೆ ವಿಶ್ವಾಸ ದ್ರೋಹ ಎಸಗಿದೆಯೆಂದು ಅಸ್ಸಾಮಿಗಳು ಸಿಡಿದು ನಿಂತಿದ್ದಾರೆ. 1971ರ ನಂತರ ಬಂದಿರುವ ಅಕ್ರಮ ವಲಸಿಗರೆಲ್ಲರನ್ನೂ ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಹೊರದೂಡಬೇಕೆಂಬುದು ಅಖಿಲ ಅಸ್ಸಾಂ ವಿದ್ಯಾರ್ಥಿ ವೇದಿಕೆ ಆಗ್ರಹ.

 ಮುಸ್ಲಿಮರನ್ನು ಪೌರತ್ವ ತಿದ್ದುಪಡಿ ಶಾಸನದ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಮೋದಿ ಸರಕಾರ ಭಾರತೀಯ ಮುಸ್ಲಿಮರಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಮುಸ್ಲಿಮರು ಹಿಂದೂಗಳಿಗೆ ಸಮಾನರಲ್ಲ. ನೀವು ಭಾರತದಲ್ಲಿರಬಹುದು ಆದರೆ ಹಿಂದೂಗಳಂತೆ ಸಮಾನ ಹಕ್ಕುಗಳಿಗೆ ಅರ್ಹರಲ್ಲ ಎಂಬುದೇ ಆ ಸಂದೇಶ. ಇದು, ಮುಸ್ಲಿಮರು ಭಾರತದಲ್ಲಿ ಬಾಳ್ವೆ ಮಾಡಬಹುದು, ಆದರೆ ಭಾರತೀಯ ಪೌರರ ಹಕ್ಕುಬಾಧ್ಯತೆಗಳಿಗೆ ಅರ್ಹರಲ್ಲ. ಅವರು ಎರಡನೆಯ ದರ್ಜೆ ಭಾರತೀಯರಾಗಿ ಇರಬೇಕು ಎಂಬ ಗೋಳ್ವಾಲ್ಕರ್, ಸಾವರ್ಕರ್ ಸಿದ್ಧಾಂತಕ್ಕನುಗುಣವಾಗಿಯೇ ಇದೆ.

ಧರ್ಮದ ಆಧಾರದ ಮೇಲೆ ದೇಶದ ಪ್ರಜಾಸಮುದಾಯವನ್ನು ಒಡೆಯುವ, ಸಂವಿಧಾನದ ಜಾತ್ಯತೀತ ನೀತಿಯನ್ನು ವಿರೂಪಗೊಳಿಸುವ ಪೌರತ್ವ ತಿದ್ದ್ದುಪಡಿ ಮಸೂದೆಯನ್ನು ಕೈಬಿಡುವಂತೆ ವಿರೋಧ ಪಕ್ಷಗಳು ಮಾಡಿದ ಆಗ್ರಹ, ಸಾಹಿತಿ, ಕಲಾವಿದರು, ವಿಜ್ಞಾನಿಗಳು ಸೇರಿದಂತೆ ನೂರಾರು ಮಂದಿ ಮೇಧಾವಿಗಳು ಮಾಡಿರುವ ಮನವಿ, ಇದಾವುದನ್ನೂ ಲೆಕ್ಕಿಸದೆ ಮೋದಿ ಸರಕಾರ ಸಂಸತ್ತಿನಲ್ಲಿನ ತನ್ನ ಪಶುಬಲವನ್ನು ಬಳಸಿ ಮಸೂದೆಗೆ ಅಂಗೀಕಾರ ಪಡೆದಿದೆ. ಅದಕ್ಕೆ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದು ಶಾಸನವಾಗಿ ಜಾರಿಗೆ ತಂದಿದೆ. ದೇಶದೊಳಗಷ್ಟೇ ಅಲ್ಲ, ವಿದೇಶಗಳಲ್ಲೂ ಈ ಶಾಸನಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿದೆ. ‘‘ಈ ತಿದ್ದುಪಡಿ ಶಾಸನ ಭಾರತದಲ್ಲಿ ಧರ್ಮದ ಆಧಾರದ ಮೇಲೆ ಎರಡು ಶ್ರೇಣಿಯ ಪೌರತ್ವ ಹಾಗೂ ವಲಸಿಗರ ಸ್ಥಾನಮಾನವನ್ನು ಸೃಷ್ಟಿಸುತ್ತದೆ ಹಾಗೂ ಮುಸ್ಲಿಮರನ್ನು ಕೆಳಸ್ತರಕ್ಕೆ ದೂಡಲಿದೆ.

ಭೇದಭಾವ ತಾರತಮ್ಯಗಳನ್ನು ಸೃಷ್ಟಿಸುವ ಈ ಶಾಸನವನ್ನು ಜಾರಿಗೆ ಕೊಡಕೂಡದು’’ ಎಂದು ನ್ಯಾಯಶಾಸ್ತ್ರಜ್ಞರ ಅಂತರ್‌ರಾಷ್ಟ್ರೀಯ ಆಯೋಗ (ಇಂಟರ್‌ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್)ಆಗ್ರಹಪಡಿಸಿದೆ. ‘‘ವಿದ್ವೇಷಕಾರಿಯಾದ ಈ ಕಾನೂನು ಧರ್ಮದ ಆಧಾರದಲ್ಲಿ ತಾರತಮ್ಯವೆಸಗುವುದನ್ನು ಸಕ್ರಮಗೊಳಿಸಲಿದ್ದು, ಭಾರತದ ಸಂವಿಧಾನ ಹಾಗೂ ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ, ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಮೋದಿ ಸರಕಾರದ ಕ್ರಮವನ್ನು ಖಂಡಿಸಿದೆ. ಭಾರತದ ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಹಾಳುಗೆಡಹುವ ಈ ಪೌರತ್ವ ತಿದ್ದುಪಡಿ ಶಾಸನ ಅಸಾಂವಿಧಾನಕವಾಗಿದ್ದು ಅದನ್ನು ರದ್ದುಗೊಳಿಸುವಂತೆ ಹಲವಾರು ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಸುಪ್ರೀಂ ಕೋರ್ಟಿನ ಮೊರೆಹೊಕ್ಕಿದ್ದಾರೆ. ಈಗ ಎಲ್ಲರ ಕಣ್ಣುಗಳು ಸುಪ್ರೀಂಕೋರ್ಟ್‌ನತ್ತ ಕೇಂದ್ರೀಕೃತ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News