ಪೌರತ್ವ ಕಾಯ್ದೆ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮುಂದಾದ ಬಿಜೆಪಿ ಮಿತ್ರಪಕ್ಷ

Update: 2019-12-19 07:08 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದ ಬಿಜೆಪಿಯ ಮಿತ್ರ ಪಕ್ಷ ಅಸ್ಸಾಂ ಗಣ ಪರಿಷದ್ ಇದೀಗ ತನ್ನ ನಿಲುವು ಬದಲಿಸಿದ್ದು ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಲು ನಿರ್ಧರಿಸಿದೆ. ಶನಿವಾರ ಪಕ್ಷದ ಹಿರಿಯ ನಾಯಕರ ಸಭೆಯ ನಂತರ ಈ ತೀರ್ಮಾನ ಪ್ರಕಟಗೊಂಡಿದೆ.

ಈ ಕಾಯ್ದೆ ಕುರಿತಂತೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲೂ ಪರಿಷದ್ ನಾಯಕರು ನಿರ್ಧರಿಸಿದ್ದಾರೆ.

ಅಸ್ಸಾಂನ ಬಿಜೆಪಿ ನೇತೃತ್ವದ ಸರಕಾರದ ಭಾಗವಾಗಿರುವ ಅಸ್ಸಾಂ ಗಣ ಪರಿಷದ್ ರಾಜ್ಯ ಸಚಿವ  ಸಂಪುಟದಲ್ಲಿ ಮೂರು ಸಚಿವರನ್ನು ಹೊಂದಿದೆ. ಸಂಸತ್ತಿನಲ್ಲಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದ  ಪಕ್ಷದ ಹಲವು ಹಿರಿಯ ನಾಯಕರು ಪಕ್ಷದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದರಲ್ಲದೆ ಜನರ ಭಾವನೆಗಳನ್ನು ಅರ್ಥೈಸಲು ಪಕ್ಷ ವಿಫಲವಾಗಿದೆ ಎಂದು ದೂರಿದ್ದರು.

ವಿವಾದಿತ ಕಾಯ್ದೆ ಅಸ್ಸಾಂನಲ್ಲಿ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿರುವುದರ ಹೊರತಾಗಿ ಹಲವರ ರಾಜೀನಾಮೆಗೂ ಕಾರಣವಾಗಿತ್ತು.

ಶುಕ್ರವಾರ ಹಿರಿಯ ಬಿಜೆಪಿ ನಾಯಕ ಹಾಗೂ ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಅಧ್ಯಕ್ಷ ಜಗದೀಶ್ ಭುಯಾನ್ ಪಕ್ಷದಿಂದ ಹಾಗೂ ಹುದ್ದೆಯಿಂದ ರಾಜೀನಾಮೆ ನೀಡಿದ್ದರೆ, ಅಸ್ಸಾಂ ಸೂಪರ್ ಸ್ಟಾರ್ ಹಾಗೂ ರಾಜ್ಯ ಚಲನಚಿತ್ರ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಜತಿನ್ ಬೋರಾ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.  ಕೆಲ ದಿನಗಳ ಹಿಂದೆ ಇನ್ನೊಬ್ಬ ಜನಪ್ರಿಯ ನಟ  ರವಿ ಶರ್ಮ ಕೂಡ ಬಿಜೆಪಿ ತೊರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News