ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಆರ್ ಟಿಐ ಕಾರ್ಯಕರ್ತ ಅಖಿಲ್ ಗೊಗೊಯಿ ವಿರುದ್ಧ ಯುಎಪಿಎ ಹೇರಿದ ಎನ್‍ಐಎ

Update: 2019-12-19 07:07 GMT

ಹೊಸದಿಲ್ಲಿ: ಗುರುವಾರ ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲ್ಪಟ್ಟಿದ್ದ ಅಸ್ಸಾಂನ ಆರ್‍ ಟಿಐ ಕಾರ್ಯಕರ್ತ ಹಾಗೂ ರೈತ ನಾಯಕ ಅಖಿಲ್ ಗೊಗೊಯಿ ಅವರ ವಿರುದ್ಧ ತಿದ್ದುಪಡಿಗೊಂಡ ಯುಎಪಿಎ (ಅಕ್ರಮ ಕೂಟ ನಿರ್ಬಂಧ ಕಾಯಿದೆ) ಅನ್ವಯ ಎನ್ ಐಎ ಪ್ರಕರಣ ದಾಖಲಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳ ನಡುವೆ ಗುರುವಾರ ಅವರನ್ನು ಅಸ್ಸಾಂನ ಜೋರ್ಹಟ್ ಜಿಲ್ಲೆಯಿಂದ ಬಂಧಿಸಲಾಗಿತ್ತು. ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯ ಸಲಹೆಗಾರರಾಗಿರುವ ಅವರು ವಿವಾದಿತ ಕಾಯ್ದೆಯ ವಿರುದ್ಧ ಜೋರ್ಹಟ್ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಅವರು ಪೊಲೀಸರಿಂದ ತಪ್ಪಿಸಿಕೊಂಡಿದ್ದರೂ ವಕೀಲರೊಬ್ಬರ ನಿವಾಸದಲ್ಲಿ ಕೊನೆಗೆ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ತಿದ್ದುಪಡಿಗೊಂಡ ಯುಎಪಿಎ ಅನ್ವಯ ಬಂಧಿಸಲ್ಪಟ್ಟ ಮೊದಲ ವ್ಯಕ್ತಿ ಗೊಗೊಯಿ ಆಗಿದ್ದಾರೆ. ಯಾರಾದರೂ ಉಗ್ರ ಚಟುವಟಿಕೆಗೆ ಸಿದ್ಧತೆ ನಡೆಸುತ್ತಿದ್ದರೆ ಯಾ ಶಾಮೀಲಾಗಿದ್ದರೆ ಈ ಕಾಯ್ದೆಯು ಯಾವುದೇ ವ್ಯಕ್ತಿಯನ್ನು ಉಗ್ರನೆಂದು ಪರಿಗಣಿಸಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.

ಎನ್‍ಐಎ ಮಹಾನಿರ್ದೇಶಕರನ್ನು ಗುವಾಹಟಿಯ ಹಿಂಸೆಯನ್ನು ಹತ್ತಿಕ್ಕಲು ಕೇಂದ್ರ ಕಳುಹಿಸಿದ ನಂತರ ಗೊಗೊಯಿ ಬಂಧನವಾಗಿದೆ.

ಅಖಿಲ್ ಗೊಗೊಯಿ ಅವರು 2005ರಲ್ಲಿ ತಮ್ಮ ತವರು ಜಿಲ್ಲೆ ಗೊಲಾಘಾಟ್‍ನ ಲ್ಲಿ ಪಿಡಿಎಸ್ ಹಗರಣ ಬಯಲುಗೊಳಿಸಿ ಸುದ್ದಿ ಮಾಡಿದ್ದರು. ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ಅವರು 2008ರಲ್ಲಿ ಷಣ್ಮುಗಮ್ ಮಂಜುನಾಥ್ ಇಂಟೆಗ್ರಿಟಿ ಅವಾರ್ಡ್ ಹಾಗೂ 2010ರಲ್ಲಿ  ಪಬ್ಲಿಕ್ ರಿಸರ್ಚ್ ಫೌಂಡೇಶನ್‍ನ ಆರ್‍ ಟಿಐ ಪ್ರಶಸ್ತಿ ಪಡೆದಿದ್ದರು.

ಅಸ್ಸಾಂ ಹಾಗೂ ಅರುಣಾಚಲ ಪ್ರದೇಶಗಳಲ್ಲಿ ಅಣೆಕಟ್ಟು ಯೋಜನೆಗಳನ್ನು ರದ್ದುಗೊಳಿಸಬೇಕೆಂಬ ಪ್ರತಿಭಟನೆಗಳಲ್ಲಿ ಅವರು 2009ರಿಂದ ಪಾಲ್ಗೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News