ಎನ್‍ ಆರ್ ಸಿ ಮೂಲಕ ಪೌರತ್ವ ಅಮಾನ್ಯದ ಹುನ್ನಾರ: ಬಿಜೆಪಿ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

Update: 2019-12-19 07:07 GMT

ಹೊಸದಿಲ್ಲಿ: ಹೊಸದಾಗಿ ಜಾರಿಗೆ ಬಂದಿರುವ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಿರುವ ನಡುವೆಯೇ ಜೆಡಿಯು ಉಪಾಧ್ಯಕ್ಷ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಮಿತ್ರಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರವ್ಯಾಪಿ ಎನ್‍ಆರ್‍ಸಿ ಜಾರಿಗೊಳಿಸಲು ಮುಂದಾಗಿರುವುದು ಪೌರತ್ವ ಅಮಾನ್ಯದ ಹುನ್ನಾರ ಎಂದು ಟೀಕಿಸಿದ್ದಾರೆ.

ನರೇಂದ್ರ ಮೋದಿಯವರು 2016ರ ನವೆಂಬರ್ 8ರಂದು 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವ ಕ್ರಮವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, "ರಾಷ್ಟ್ರವ್ಯಾಪಿ ಎನ್‍ಆರ್‍ಸಿ ಜಾರಿಗೊಳಿಸುವುದು ಪೌರತ್ವವನ್ನು ರದ್ದುಪಡಿಸುವುದಕ್ಕೆ ಸಮ. ನೀವು ಭಾರತೀಯರು ಎಂದು ನಿರೂಪಿಸುವವರೆಗೂ ಅಮಾನ್ಯಗೊಂಡಿರುತ್ತೀರಿ..ಇದರಲ್ಲಿ ತೀರಾ ತೊಂದರೆಗೀಡಾಗುವವರು ಎಂದರೆ ಬಡವರು ಮತ್ತು ದುರ್ಬಲ ವರ್ಗದವರು. ಇದು ನಮಗೆ ಅನುಭವಿಸಿ ಗೊತ್ತು!!#ನಾಟ್‍ಗಿವಿಂಗ್‍ಅಪ್" ಎಂದು ಟ್ವೀಟ್ ಮಾಡಿದ್ದಾರೆ.

ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ರಾಷ್ಟ್ರವ್ಯಾಪಿ ಎನ್‍ಆರ್‍ಸಿಗೆ ವಿರುದ್ಧವಾಗಿದ್ದಾರೆ ಎಂದು ಶನಿವಾರ ಕಿಶೋರ್ ಪ್ರಕಟಿಸಿದ್ದರು. ಪೌರತ್ವ ಕಾಯ್ದೆಯ ಜತೆಜತೆಗೆ ಇದನ್ನು ಅನುಷ್ಠಾನಗೊಳಿಸಿದಾಗ ಅದು ತಾರತಮ್ಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News