ಶೀಘ್ರ ಬಂದೂಕು ಲೈಸನ್ಸ್ ಪಡೆಯಬೇಕಿದ್ದರೆ ಹಸುವಿಗೆ ಹೊದಿಕೆ ದೇಣಿಗೆ ನೀಡಿ ಎಂದ ಜಿಲ್ಲಾಧಿಕಾರಿ!

Update: 2019-12-15 12:36 GMT

ಭೋಪಾಲ್: ಬಂದೂಕು ಲೈಸನ್ಸ್ ಪಡೆಯಲು ಆದ್ಯತೆ ಸಿಗಬೇಕಿದ್ದರೆ ಹಸುವಿಗೆ ಕನಿಷ್ಠ 10 ಹೊದಿಕೆಗಳನ್ನು ಕೊಡುಗೆಯಾಗಿ ನೀಡಬೇಕು!. ಹೌದು ಇಂತಹ ವಿದ್ಯಮಾನ ನಡೆದದ್ದು ಗ್ವಾಲಿಯರ್ ನಲ್ಲಿ.

"ಶಸ್ತ್ರಾಸ್ತ್ರ ಬಂದೂಕಿನ ಅರ್ಜಿಗಳನ್ನು ಸಲ್ಲಿಸಿ, ಹಸುಗಳಿಗಾಗಿ 10 ಹೊದಿಕೆ ದೇಣಿಗೆ ನೀಡಿದಾಗ ಜಿಲ್ಲಾಡಳಿತದಲ್ಲಿ ನಿಮ್ಮ ಅರ್ಜಿಗೆ ಆದ್ಯತೆ ಸಿಗುತ್ತದೆ. ಕೆಲ ಗೋಶಾಲೆಗಳಲ್ಲಿ ದಟ್ಟಣೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅವುಗಳು ಮುಂದುವರಿಯಬೇಕಾದರೆ ಹೆಚ್ಚಿನ ಸಂಪನ್ಮೂಲ ಅಗತ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಗ್ವಾಲಿಯರ್ ಜಿಲ್ಲಾಧಿಕಾರಿ ಅನುರಾಗ್ ಚೌಧರಿ ಎಂಬವರು ಹೇಳಿದ್ದಾರೆ.

"ಗ್ವಾಲಿಯರ್ ಜನತೆಗೆ ಶಸ್ತ್ರಾಸ್ತ್ರ ಬಗ್ಗೆ ವಿಶೇಷ ಪ್ರೀತಿ. ಸ್ವಯಂರಕ್ಷಣೆಗೆ ಇದನ್ನು ಬಯಸುತ್ತಾರೆ. ಆದ್ದರಿಂದ ತಮ್ಮ ಅರ್ಜಿಗಳಿಗೆ ಆದ್ಯತೆ ದೊರಕಲು ಹೊದಿಕೆಗಳನ್ನು ಕೊಡುಗೆಯಾಗಿ ನೀಡುವುದರಿಂದ ಗೋಶಾಲೆಗಳಲ್ಲಿ ಗೋವುಗಳಿಗೆ ಹೆಚ್ಚಿನ ಹೊದಿಕೆ ಸಿಕ್ಕಿದಂತಾಗುತ್ತದೆ. ಹಿಂದೆ ಅರ್ಜಿದಾರರಿಗೆ ಗಿಡ ನೆಡುವಂತೆ ಕಡ್ಡಾಯಪಡಿಸಿದಾಗ ಒಳ್ಳೆಯ ಪ್ರತಿಕ್ರಿಯೆ ಬಂದು ಲೈಸನ್ಸ್‍ ಗಾಗಿ ಅರ್ಜಿ ಸಲ್ಲಿಸಿದವರು 17 ಸಾವಿರ ಗಿಡಗಳನ್ನು ನೆಟ್ಟಿದ್ದರು" ಎಂದು ಅವರು ವಿವರಿಸಿದ್ದಾರೆ.

ಚಳಿಗಾಲದಲ್ಲಿ ಗೋವುಗಳನ್ನು ರಕ್ಷಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಜನಪ್ರತಿನಿಧಿಗಳ, ಸಾಮಾಜಿಕ ಸಂಘ ಸಂಸ್ಥೆಗಳ ಮತ್ತು ಗೋಸಂರಕ್ಷಣಾ ಸಂಘಟನೆಗಳ ಸಭೆ ಕರೆಯುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News