ದಕ್ಷಿಣ ದಿಲ್ಲಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ಭಾರೀ ಪ್ರತಿಭಟನೆ: 2 ಬಸ್ ಗಳಿಗೆ ಬೆಂಕಿ

Update: 2019-12-19 07:06 GMT

ಹೊಸದಿಲ್ಲಿ,ಡಿ.15: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಈಶಾನ್ಯ ಭಾರತದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಈಗ ದಿಲ್ಲಿಗೂ ಹರಡಿದೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರವಿವಾರ ಸಂಜೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಸಿದ ಪ್ರತಿಭಟನಾ ಮೆರವಣಿಗೆಯು ಹಿಂಸಾರೂಪಕ್ಕೆ ತಿರುಗಿದೆ.

ದಕ್ಷಿಣ ದಿಲ್ಲಿಯ ನ್ಯೂಫ್ರೆಂಡ್ಸ್ ಕಾಲನಿಯಲ್ಲಿ ಪ್ರತಿಭಟನಾ ನಿರತರು ಪೊಲೀಸರೊಂದಿಗೆ ಬೀದಿಕಾಳಗಕ್ಕಿಳಿದಿದ್ದು, ಇಡೀ ಪ್ರದೇಶವು ರಣರಂಗವಾಗಿ ಪರಿಣಮಿಸಿತು. ಉದ್ರಿಕ್ತ ಪ್ರತಿಭಟನಕಾರರು ಬಸ್‌ಗಳಿಗೆ ಬೆಂಕಿ ಹಚ್ಚಿದರು ಹಾಗೂ ಪ್ರತಿಭಟನಕಾರರನ್ನು ಚದುರಿಸಲು ಲಾಠಿಗಳನ್ನು ಹಾಗೂ ಅಶ್ರುವಾಯು ಸೆಲ್‌ಗಳನ್ನು ಬಳಸಲಾಯಿತು. ರಸ್ತೆಯುದ್ದಕ್ಕೂ ಪೊಲೀಸರು ಪ್ರತಿಭಟನಕಾರರನ್ನು ಅಟ್ಟಾಡಿಸುತ್ತಿರುವುದು ಕಂಡುಬಂದಿತು.

ಹಿಂಸಾಚಾರದಲ್ಲಿ ವಾಹನಗಳಿಗೆ ಹಚ್ಚಲಾದ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಅಗ್ನಿಶಾಮಕದಳ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿವೆ ಹಾಗೂ ಅಗ್ನಿಶಾಮಕ ವಾಹನವೊಂದು ಹಾನಿಗೀಡಾಗಿದೆ.

ಹಿಂಸಾಚಾರದಲ್ಲಿ ವಿದ್ಯಾರ್ಥಿಗಳ ಪಾತ್ರವಿಲ್ಲ: ಜಾಮಿಯಾ ಮಿಲ್ಲಿಯಾ ವಿವಿ ಸ್ಪಷ್ಟನೆ

ಆದರೆ ದಕ್ಷಿಣ ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ತಮ್ಮ ಕೈವಾಡವಿಲ್ಲವೆಂದು ಜಾಮಿಯಾ ಮಿಲ್ಲಿಯಾ ವಿವಿ ಹಾಗೂ ವಿದ್ಯಾರ್ಥಿ ನಾಯಕರು ಸ್ಪಷ್ಟಪಡಿಸಿದ್ದಾರೆ.

 ದಿಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಾ ಸ್ಥಳೀಯ ದುಷ್ಕರ್ಮಿಗಳು ಪ್ರತಿಭಟನಾ ರ್ಯಾಲಿಯಲ್ಲಿ ನುಸುಳಿಕೊಂಡು ಹಿಂಸಾಚಾರವೆಸಗಿದ್ದಾರೆಂಬುದನ್ನು ಖಾಸಗಿಯಾಗಿ ಒಪ್ಪಿಕೊಂಡಿದ್ದಾರೆ. ಕಿಡಿಗೇಡಿಗಳು ಬಸ್ ಮತ್ತಿತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಜಂತರ್‌ ಮಂತರ್‌ ನೆಡೆಗೆ ಸಾಗುತ್ತಿದ್ದ ಪ್ರತಿಭಟನ ರ್ಯಾಲಿಯನ್ನು ತಡೆದ ಪೊಲೀಸರ ಮೇಲೆ ಕಲ್ಲೆಸೆದಿದ್ದಾರೆಂದು ಅವರು ಆರೋಪಿಸಿದ್ದಾರೆ.

ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯದ ಉಪಕುಲಪತಿ ನಜ್ಮಾ ಅಖ್ತರ್ ಹಾಗೂ ವಿದ್ಯಾರ್ಥಿ ನಾಯಕ ಮಿರಾನ್ ಹೈದರ್ ಸುದ್ದಿವಾಹಿನಿಯೊಂದರ ಜೊತೆ ಮಾತನಾಡುತ್ತಾ ಜಾಮಿಯಾ ಮಿಲ್ಲಿಯಾದ ವಿದ್ಯಾರ್ಥಿಗಳು ಸಾಂವಿಧಾನಿಕ ಮಾರ್ಗಗಳ ಮೂಲಕವೇ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲಿದ್ದಾರೆ ಎಂದರು.

ಕ್ಯಾಂಪಸ್‌ನಿಂದ ಹೊರಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಅಖ್ತರ್ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತರು ಕೂಡಲೇ ಕ್ಯಾಂಪಸ್‌ನೊಳಗೆ ಮರಳುವಂತೆ ಅವರು ಹೇಳಿದ್ದಾರೆ.

ಹಿಂಸಾಚಾರ ಭುಗಿಲೆದ್ದ ಕೆಲವೇ ನಿಮಿಷಗಳ ಬಳಿಕ ವಿದ್ಯಾರ್ಥಿಗಳು, ಹಿಂಸಾಚಾರದಲ್ಲಿ ತಮ್ಮ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಹಾಗೂ ತಾವು ನಡೆಸಿದ ಪ್ರತಿಭಟನೆಗಳು ಶಾಂತಿಯುತ ಹಾಗೂ ಅಹಿಂಸಾತ್ಮಕವಾಗಿತ್ತೆಂದು ಸ್ಪಷ್ಟಪಡಿಸಿದ್ದಾರೆ.

‘‘ನಮ್ಮ ಪ್ರತಿಭಟನೆಗಳು ಶಾಂತಿಯುತ ಹಾಗೂ ಅಹಿಂಸಾತ್ಮಕವಾಗಿರುವುದಾಗಿ ನಾವು ಸಮಯದಿಂದ ಸಮಯಕ್ಕೆ ದೃಢಪಡಿಸುತ್ತಾ ಬಂದಿದ್ದೇವೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಹಾಗೂ ಹಿಂಸಾಚಾರದಲ್ಲಿ ಯಾರೇ ಶಾಮೀಲಾಗಿದ್ದರೂ ಅದನ್ನು ನಾವು ಖಂಡಿಸುತ್ತೇವೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ಮಾಡಿದ್ದರೂ ಮತ್ತು ಮಹಿಳೆಯರನ್ನು ಕೂಡಾ ಕೆಟ್ಟದಾಗಿ ಥಳಿಸಿದ್ದರೂ ನಾವು ಶಾಂತಿಯನ್ನು ಕಾಪಾಡುತ್ತಲೇ ಬಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

ಕೆಲವು ನಿರ್ದಿಷ್ಟ ಶಕ್ತಿಗಳು ನಡೆಸಿದ ಈ ಹಿಂಸಾಚಾರವು, ನೈಜ ಪ್ರತಿಭಟನೆಗೆ ಕೆಟ್ಟ ಹೆಸರನ್ನು ತರುವ ಪ್ರಯತ್ನವಾಗಿದೆಯೆಂದು ಎಂದು ಅವರು ಆಪಾದಿಸಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಹಿಂಸಾಚಾರವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News