1000 ಶೇ.ದಷ್ಟು ಸರಿಯಾದ ನಿರ್ಧಾರ: ಪೌರತ್ವ ಕಾಯ್ದೆ ಕುರಿತು ಪ್ರಧಾನಿ ಮೋದಿ

Update: 2019-12-19 07:06 GMT

ಡುಮ್ಕಾ (ಜಾರ್ಖಂಡ್),ಡಿ.15: ನೂತನ ಪೌರತ್ವ ಕಾಯ್ದೆಯ ವಿರುದ್ಧ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪ್ರತಿಭಟನೆಗಳ ನಡುವೆಯೇ ರವಿವಾರ ಇಲ್ಲಿ ಅದರ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು,ನೆರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿರುವ ಸಮುದಾಯಗಳಿಗೆ ಭಾರತದ ಪ್ರಜೆಗಳಾಗಲು ಅದು ಅವಕಾಶವನ್ನು ಕಲ್ಪಿಸುತ್ತದೆ ಮತ್ತು ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವುದು ಶೇ.1000ರಷ್ಟು ಸರಿಯಾದ ನಿರ್ಧಾರವಾಗಿದೆ ಎಂದು ಸಮರ್ಥಿಸಿಕೊಂಡರು.

ಕಾನೂನನ್ನು ತಂದಿರುವ ಹಿಂದಿನ ಉದ್ದೇಶವನ್ನು ವಿವರಿಸಿದ ಅವರು, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವುದರಿಂದ ಕಿರುಕುಳವನ್ನು ಅನುಭವಿಸಿದವರ ಬದುಕನ್ನು ಉತ್ತಮಗೊಳಿಸುವುದು ಮತ್ತು ಗೌರವವನ್ನು ಒದಗಿಸುವುದು ಅಗತ್ಯವಾಗಿತ್ತು ಎಂದರು.

ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು,ನಮ್ಮ ಸಂಸತ್ತು ಪೌರತ್ವ ಕಾಯ್ದೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದು,ಇದರಿಂದಾಗಿ ಈ ಮೂರೂ ದೇಶಗಳಲ್ಲಿ ದಮನಕ್ಕೊಳಗಾಗಿದ್ದ ಸಣ್ಣಸಂಖ್ಯೆಯ ಧಾರ್ಮಿಕ ಅಲ್ಪಸಂಖ್ಯಾತರು ನಮ್ಮ ದೇಶದಲ್ಲಿ ಆಶ್ರಯ ಪಡೆಯಲಿದ್ದಾರೆ. ನಮ್ಮ ನಿರ್ಧಾರವು ಶೇ.1000ರಷ್ಟು ಸರಿಯಾಗಿದೆ ಮತ್ತು ಕಾಂಗ್ರೆಸ್‌ನ ಕ್ರಮವು ಸಂಸತ್ತಿನಲ್ಲಿ ತೆಗೆದುಕೊಂಡಿರುವ ಎಲ್ಲ ನಿರ್ಣಯಗಳು ಸರಿಯಾಗಿವೆ ಎನ್ನುವುದನ್ನು ಸಾಬೀತುಗೊಳಿಸಿದೆ ಎಂದರು.

ಪೌರತ್ವ ಕಾಯ್ದೆಯ ಕುರಿತಂತೆ ಈಶಾನ್ಯ ಭಾರತ ಮತ್ತು ಅಸ್ಸಾಮಿನಲ್ಲಿ ಕಾಂಗ್ರೆಸ್ ತೊಂದರೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಮೋದಿ,ಜನರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.ಮೋದಿ ಮತ್ತು ಸಂಸತ್ತು ಈ ಕಾನೂನನ್ನು ತರುವ ಮೂಲಕ ದೇಶವನ್ನು ರಕ್ಷಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News