ಏರ್ ಇಂಡಿಯಾದ ಮಾರಾಟದವರೆಗೂ ಅದು ಬದುಕಿರಬೇಕು: ಅಧ್ಯಕ್ಷ ಲೋಹಾನಿ

Update: 2019-12-15 14:06 GMT

ಹೊಸದಿಲ್ಲಿ,ಡಿ.15: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್‌ಇಂಡಿಯಾ ಅದು ಮಾರಾಟವಾಗುವವರೆಗೂ ಬದುಕಿರಬೇಕಾದ ಅಗತ್ಯವಿದೆ ಮತ್ತು ಹೂಡಿಕೆ ಹಿಂದೆಗೆತದ ಈ ವಾತಾವರಣದಲ್ಲಿ ಅದನ್ನು ಮೊದಲಿನ ಸ್ಥಿತಿಗೆ ತರುವ ಆಮೂಲಾಗ್ರ ಸುಧಾರಣೆಗಳನ್ನು ನಿರೀಕ್ಷಿಸುವುದು ಅವ್ಯವಹಾರಿಕವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಅಶ್ವನಿ ಲೋಹಾನಿ ಅವರು ಹೇಳಿದ್ದಾರೆ.

ಇದನ್ನು ಒಪ್ಪಿಕೊಳ್ಳಲು ಅಷ್ಟೊಂದು ಕಷ್ಟವೇಕೆ ಆಗುತ್ತಿದೆ ಎನ್ನುವುದು ತನಗೆ ಅಚ್ಚರಿಯನ್ನುಂಟು ಮಾಡಿದೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿರುವ ಲೋಹಾನಿ,ಏನನ್ನೂ ತೊಡಗಿಸದೆ ಫಲಿತಾಂಶವನ್ನು ನಿರೀಕ್ಷಿಸುವುದು ಸಾರಾಸಗಟು ಅವ್ಯವಹಾರಿಕ ವಿಚಾರವಾಗಿದೆ. ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿಯೂ ಏರ್ ಇಂಡಿಯಾದ ಅಧಿಕಾರಿಗಳು ಅದನ್ನುಳಿಸಲು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಮತ್ತು ಇದು ಅತ್ಯಂತ ಶ್ಲಾಘನೀಯವಾಗಿದೆ ಎಂದಿದ್ದಾರೆ.

2018,ಮಾರ್ಚ್‌ನಲ್ಲಿ 55,000 ಕೋ.ರೂ.ಗಳಿದ್ದ ಏರ್ ಇಂಡಿಯಾದ ಸಾಲದ ಮೊತ್ತ 2019,ಮಾರ್ಚ್ ಅಂತ್ಯಕ್ಕೆ 58,351.93 ಕೋ.ರೂ.ಗೇರಿದೆ. ಸಂಸ್ಥೆಯು 2020,ಮಾರ್ಚ್‌ನಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ತಿಂಗಳು ಹೇಳಿದ್ದರು. ಏರ್ ಇಂಡಿಯಾದ ಖರೀದಿಗೆ ಹೆಚ್ಚಿನ ಆಸಕ್ತಿಗಳು ವ್ಯಕ್ತವಾಗುತ್ತಿವೆ ಎಂದೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News