ಪೌರತ್ವ ಕಾಯ್ದೆ ವಿರುದ್ಧ ಹೆಚ್ಚಿದ ಆಕ್ರೋಶ : ರಾಜಕೀಯ ಪಕ್ಷ ಸ್ಥಾಪನೆಯತ್ತ ಅಸ್ಸಾಂ ವಿದ್ಯಾರ್ಥಿ ಸಂಘ

Update: 2019-12-19 07:05 GMT

ಗುವಾಹಟಿ, ಡಿ.15: ರಾಜ್ಯದಲ್ಲಿ ಬಿಜೆಪಿ, ಎಜಿಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್(ಎಎಎಸ್‌ಯು) ಸುಳಿವು ನೀಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎಎಎಸ್‌ಯು ನೇತೃತ್ವದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಮಾತನಾಡಿದ ಜನಪ್ರಿಯ ಗಾಯಕ ಝುಬೀನ್ ಗರ್ಗ್, ನಾವು ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದೇವೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಎಎಎಸ್‌ಯು ಅಧ್ಯಕ್ಷ ದೀಪಾಂಕ್ ನಾಥ್, ಈ ಬಗ್ಗೆ ನಾವು ಇದೀಗ ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ನಿಟ್ಟಿನಲ್ಲಿ ಶಿಲ್ಪಿ ಸಮಾಜ(ಕಲಾವಿದರ ವೇದಿಕೆ)ದ ಜೊತೆ ಮಾತುಕತೆ ಸಾಗಿದೆ. ಪರ್ಯಾಯ ರಾಜಕೀಯ ಪಕ್ಷ ಸ್ಥಾಪಿಸುವ ಬಗ್ಗೆ ರಾಜ್ಯದ ಜನತೆಯೊಂದಿಗೂ ಚರ್ಚಿಸಲಿದ್ದೇವೆ. ಜನತೆಯ ಅನುಮತಿ ದೊರಕಿದರೆ ಯಾವುದೇ ಹಿಂಜರಿಕೆಯಿಲ್ಲದೆ ಮುಂದುವರಿಯುತ್ತೇವೆ ಎಂದು ಜನರ ಹರ್ಷೋದ್ಗಾರದ ಮಧ್ಯೆ ನಾಥ್ ಘೋಷಿಸಿದರು.

ರಾಜ್ಯ ಸರಕಾರದ ದಮನಕಾರಿ ನೀತಿ ಮುಂದುವರಿದಿದ್ದು ಸರಕಾರದ ಗುಂಡೇಟಿಗೆ ಐವರು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ. ಸರ್ಬಾನಂದ ಸೋನೊವಾಲ್ ಸರಕಾರವನ್ನು ಕೆಳಗಿಳಿಸಬೇಕೆಂಬ ಸ್ಪಷ್ಟ ಸಂದೇಶ ಇದಾಗಿದೆ ಎಂದು ದೀಪಾಂಕ್‌ನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News