ಮಾನದಂಡಕ್ಕೆ ಅನುಗುಣವಾಗಿದ್ದರೆ ಮಾತ್ರ ವಲಸಿಗರಿಗೆ ಪೌರತ್ವ : ಕೇಂದ್ರ ಸರಕಾರ

Update: 2019-12-19 07:04 GMT

ಹೊಸದಿಲ್ಲಿ, ಡಿ.15: ಪೌರತ್ವ ಕಾಯ್ದೆ ಜಾರಿಯಾದರೆ ಬಾಂಗ್ಲಾದೇಶದಿಂದ ಹಿಂದೂ ವಲಸಿಗರ ಮಹಾಪೂರವೇ ಈಶಾನ್ಯ ರಾಜ್ಯಗಳಿಗೆ ಹರಿದು ಬರುತ್ತದೆ ಎಂಬ ಭೀತಿಯನ್ನು ನಿವಾರಿಸಲು ಮುಂದಾಗಿರುವ ಕೇಂದ್ರ ಸರಕಾರ, ಯಾವುದೇ ವಲಸಿಗರಿಗೂ ತನ್ನಿಂದ ತಾನೇ ಪೌರತ್ವ ಲಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಲಸಿಗರ ಅರ್ಜಿಗಳನ್ನು ನಿಗದಿತ ಪ್ರಾಧಿಕಾರ ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ, ಪೌರತ್ವ ಕಾಯ್ದೆಯಲ್ಲಿ ನಿಗದಿಗೊಳಿಸುವ ಮಾನದಂಡಕ್ಕೆ ಅನುಗುಣವಾಗಿದ್ದರೆ ಮಾತ್ರ ಭಾರತದ ಪೌರತ್ವ ನೀಡಲಾಗುವುದು ಎಂದು ಕೇಂದ್ರ ಸರಕಾರ ಟ್ವೀಟ್ ಮಾಡಿದೆ. ಪೌರತ್ವ ಕಾಯ್ದೆಯಿಂದ ವಲಸಿಗರ ಮತ್ತೊಂದು ಪ್ರವಾಹ ಈಶಾನ್ಯ ರಾಜ್ಯಗಳಿಗೆ ಅಪ್ಪಳಿಸಲಿದೆ ಎಂಬ ವರದಿಗೆ ಆಧಾರವಿಲ್ಲ. ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದುಗಳ ಪ್ರಮಾಣ 28%ದಿಂದ 8%ಕ್ಕೆ ಇಳಿದಿದೆ ಎಂದು ಮತ್ತೊಂದು ಟ್ವೀಟ್ ತಿಳಿಸಿದೆ.

ಅಲ್ಲದೆ ಪೌರತ್ವ ಕಾಯ್ದೆಯ ಅನುಷ್ಠಾನದ ಬಳಿಕ ಅಸ್ಸಾಂನಲ್ಲಿ ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರ್ಪಡೆಯಾಗದ 1.5 ಲಕ್ಷ ಹಿಂದು ಬಂಗಾಳಿಗಳು ಅತಂತ್ರರಾಗಲಿದ್ದಾರೆ ಎಂಬ ಭೀತಿ ಬೇಡ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಅಲ್ಲದೆ ಬಾಂಗ್ಲಾದೇಶದಲ್ಲಿ ದೌರ್ಜನ್ಯದ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಆದ್ದರಿಂದ ಧಾರ್ಮಿಕ ಕಿರುಕುಳದಿಂದ ಬೃಹತ್ ಪ್ರಮಾಣದ ವಲಸೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಕಡಿಮೆ . ಪೌರತ್ವ ಮಸೂದೆ ಇತರ ದೇಶಗಳ ಅಲ್ಪಸಂಖ್ಯಾತರಿಗೆ ಸಂಬಂಧಿಸಿದೆ. ಅಸ್ಸಾಂನ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ್ದಲ್ಲ ಎಂದು ಗೃಹ ಸಚಿವರು ಈಗಾಗಲೇ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದ್ದಾರೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News