ಧರಿಸಿರುವ ವಸ್ತ್ರದಿಂದಲೇ ಹಿಂಸಾಚಾರ ನಡೆಸುತ್ತಿರುವವರು ಯಾರೆಂದು ತಿಳಿಯುತ್ತದೆ

Update: 2019-12-19 07:04 GMT

ಡುಮ್ಕಾ, ಡಿ.15: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಾಗೂ ಹಿಂಸಾಚಾರದ ಹಿಂದೆ ಕಾಂಗ್ರೆಸ್ ಹಾಗೂ ಅದರ ಜೊತೆಗಾರ ಪಕ್ಷಗಳ ಕೈವಾಡವಿದೆಯೆಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಜಾರ್ಖಂಡ್‌ನ ಡುಮ್ಕಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು ಹಿಂಸಾಚಾರದಿಂದ ದೂರವುಳಿದಿರುವುದಕ್ಕಾಗಿ ಅಸ್ಸಾಂನ ಜನತೆಯನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ. ಆದರೆ ರಾಜ್ಯದಲ್ಲಿ ಯಾರು ಹಿಂಸಾಚಾರವನ್ನು ನಡೆಸುತ್ತಿದ್ದಾರೆಂಬುದನ್ನು ಅವರು ಧರಿಸಿರುವ ಉಡುಪಿನಿಂದಲೇ ತಿಳಿಯಬಹುದೆಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೇಂದ್ರ ಸರಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದಾಗ ಹಾಗೂ ರಾಮಜನ್ಮಭೂಮಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ ಪಾಕಿಸ್ತಾನವು ವಿದೇಶಗಳಲ್ಲಿ ಭಾರತದ ರಾಯಭಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ಆಯೋಜಿಸಿತ್ತು, ಈಗ ಅಂತಹದ್ದೇ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆಯೆಂದವರು ಕಟಕಿಯಾಡಿದರು.

‘‘ಹಿಂಸಾಚಾರದಿಂದ ದೂರವುಳಿದಿರುವ ಅಸ್ಸಾಂನ ನನ್ನ ಸಹೋದರರು ಹಾಗೂ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ. ಅವರು ತಮ್ಮ ಅಭಿಪ್ರಾಯಗಳನ್ನು ಶಾಂತಿಯುತವಾದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರು ಹಿಂಸೆಯ ಬೆಂಕಿಯನ್ನು ಹರಡುತ್ತಿದ್ದಾರೆ’’ ಎಂದವರು ಆರೋಪಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಅಸ್ಸಾಂನಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರ್‌ಗೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News