ಪೌರತ್ವ ಕಾಯ್ದೆ ಸಾವರ್ಕರ್ ಅಭಿಪ್ರಾಯಗಳಿಗೆ ವಿರುದ್ಧ: ಉದ್ಧವ್ ಠಾಕ್ರೆ

Update: 2019-12-19 07:02 GMT

ಮುಂಬೈ,ಡಿ.15: ತಿದ್ದುಪಡಿಗೊಂಡಿರುವ ಪೌರತ್ವ ಕಾಯ್ದೆಯು ಸಿಂಧು ನದಿಯಿಂದ ಹಿಡಿದು ಕನ್ಯಾಕುಮಾರಿವರೆಗಿನ ನೆಲವನ್ನು ಒಂದು ರಾಷ್ಟ್ರದಡಿ ತರಲು ಬಯಸಿದ್ದ ಹಿಂದುತ್ವ ಸಿದ್ಧಾಂತಿ ವಿ.ಡಿ.ಸಾವರ್ಕರ್ ಅವರ ಅಭಿಪ್ರಾಯಗಳಿಗೆ ವಿರುದ್ಧವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರವಿವಾರ ಇಲ್ಲಿ ಹೇಳಿದರು.

ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸುರಕ್ಷತೆ,ನಿರುದ್ಯೋಗ ಮತ್ತು ಕೃಷಿ ಬಿಕ್ಕಟ್ಟಿನಂತಹ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪೌರತ್ವ ತಿದ್ದುಪಡಿ ಮಸೂದೆಯಂತಹ ವಿಷಯಗಳನ್ನು ಎತ್ತಲಾಗುತ್ತಿದೆ ಎಂದರು.

ಸಿಂಧು ನದಿಯಿಂದ ಹಿಡಿದು ಕನ್ಯಾಕುಮಾರಿವರೆಗಿನ ನೆಲವನ್ನು ಒಂದು ರಾಷ್ಟ್ರದಡಿ ತರಲು ಸಾವರ್ಕರ್ ಆಗ್ರಹಿಸಿದ್ದರು. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಅದಕ್ಕೆ ಬದಲಾಗಿ ಅವರ ಆಶಯವನ್ನು ಉಲ್ಲಂಘಿಸಿ,ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರನ್ನು ಭಾರತದೊಳಗೆ ಬರಮಾಡಿಕೊಳ್ಳುತ್ತಿದೆ. ಇದು ಸಾವರ್ಕರ್ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದರು. ಸಾವರ್ಕರ್ ಕುರಿತು ಶಿವಸೇನೆಯ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಠಾಕ್ರೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News