ಬಿಜೆಪಿಯ ಕುಮ್ಮಕ್ಕಿನಿಂದ ಪೊಲೀಸರಿಂದಲೇ ಬಸ್‌ಗಳಿಗೆ ಬೆಂಕಿ: ದಿಲ್ಲಿ ಡಿಸಿಎಂ ಸಿಸೋಡಿಯಾ ಆರೋಪ

Update: 2019-12-15 18:22 GMT

ಹೊಸದಿಲ್ಲಿ, ಡಿ.1: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದಕ್ಷಿಣ ದಿಲ್ಲಿಯಲ್ಲಿ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ವೇಳೆ ಬಿಜೆಪಿಯು ಪೊಲೀಸರಿಂದಲೇ ಬಸ್‌ಗಳಿಗೆ ಬೆಂಕಿ ಹಚ್ಚಿದ್ದು, ಕೊಳಕು ರಾಜಕೀಯ ನಡೆಸಿದೆಯೆಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರವಿವಾರ ಆಪಾದಿಸಿದ್ದಾರೆ.

ಪ್ರತಿಭಟನೆ ನಡೆದ ಸ್ಥಳದ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿರುವ ಅವರು, ಹಿಂಸಾಚಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. “ಬಸ್‌ಗಳಿಗೆ ಬೆಂಕಿ ಹಚ್ಚಿಕೊಳ್ಳುವ ಮೊದಲು ಸಮವಸ್ತ್ರದಲ್ಲಿರುವ ವ್ಯಕ್ತಿಗಳು ಬಿಳಿ ಹಾಗೂ ಹಳದಿ ಬಣ್ಣದ ಕ್ಯಾನ್‌ಗಳಿಂದ ಬಸ್‌ಗಳಿಗೆ ಏನನ್ನು ಸುರಿಯುತ್ತಿದ್ದರು?. ಯಾರ ಕುಮ್ಮಕ್ಕಿನ ಮೇರೆಗೆ ಅವರು ಈ ಕೃತ್ಯವೆಸಗಿದ್ದಾರೆ ?” ಎಂದು ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಪ್ರಚೋದನೆಯ ಮೇರೆಗೆ ಪೊಲೀಸರು ಈ ಕೆಲಸ ಮಾಡಿದ್ದಾರೆಂದು ಅವರು ಆಪಾದಿಸಿದ್ದಾರೆ.

ಇಂದು ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಆಗ್ನೇಯ ದಿಲ್ಲಿಯ ಎಲ್ಲಾ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆಯೆಂದು ಸಿಸೋಡಿಯಾ ಇನ್ನೊಂದು ಟ್ವೀಟ್ ಮಾಡಿದ್ದಾರೆ.

ದಕ್ಷಿಣ ದಿಲ್ಲಿಯಲ್ಲಿ ರವಿವಾರ ನಡೆದ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ ಬಳಿಕ ಮೂರು ಸರಕಾರಿ ಬಸ್‌ಗಳು ಹಾಗೂ ಒಂದು ಅಗ್ನಿಶಾಮಕದಳದ ವಾಹನ ಬೆಂಕಿಗಾಹುತಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News