ಬಾಲಕಿಯರ ಶಿಕ್ಷಣದಲ್ಲಿ ಕೇರಳ ಅತ್ಯುತ್ತಮ, ಉತ್ತರ ಪ್ರದೇಶ ಕೊನೆಗೆ: ಕೇಂದ್ರದ ಸಮೀಕ್ಷೆ

Update: 2019-12-15 18:07 GMT

ಹೊಸದಿಲ್ಲಿ,ಡಿ.15: ಸಾಮಾಜಿಕ ಸೂಚಕಗಳಿಗೆ ಸಂಬಂಧಿಸಿದಂತೆ ದೇಶದ ಅತ್ಯುತ್ತಮ ರಾಜ್ಯಗಳಲ್ಲೊಂದು ಎಂಬ ಕೇರಳದ ಹೆಗ್ಗಳಿಕೆ ಮುಂದುವರಿದಿದೆ. ಕೇಂದ್ರ ಸರಕಾರದ ಸಮೀಕ್ಷೆಯಂತೆ ದೇಶದಲ್ಲ್ಲಿ ಬಾಲಕಿಯರಿಗೆ ಶಿಕ್ಷಣ ಒದಗಿಸುವಲ್ಲಿ ಕೇರಳ ನಂ.1 ಸ್ಥಾನದಲ್ಲಿದೆ.

ಸಾಂಖ್ಯಿಕ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಪ್ರಕಟಿಸಿರುವ ಸಮೀಕ್ಷೆ ವರದಿಯಂತೆ ಕೇರಳವು ಪೂರ್ವ ಪ್ರಾಥಮಿಕ ಮಟ್ಟದಿಂದ ಆರಂಭಿಸಿ ಪದವಿಪೂರ್ವ ಶಿಕ್ಷಣದವರೆಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳೆಡರಲ್ಲೂ ಅತ್ಯಂತ ಹೆಚ್ಚಿನ,ಮಹಿಳೆಯರಿಗಾಗಿ ವಯೋ ನಿರ್ದಿಷ್ಟ ಹಾಜರಾತಿ ಅನುಪಾತ (ಎಎಸ್‌ಎಆರ್)ವನ್ನು ಸಾಧಿಸಿದೆ. ಎಎಸ್‌ಎಆರ್ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಮಟ್ಟ ಅಥವಾ ತರಗತಿಗಳನ್ನು ಪರಿಗಣಿಸದೆ ಶಿಕ್ಷಣ ಸಂಸ್ಥೆಗಳಿಗೆ ಹಾಜರಾಗುತ್ತಿರುವ ಆಯಾ ವಯೋಗುಂಪಿನವರ ಶೇಕಡಾವಾರು ಪ್ರಮಾಣವಾಗಿದೆ.

 ಪೂರ್ವ ಪ್ರಾಥಮಿಕ ಮಟ್ಟದಲ್ಲಿ 3ರಿಂದ 5 ವರ್ಷಗಳ ವಯೋಗುಂಪಿನಲ್ಲಿ ಶೇ.60ರಷ್ಟು ಎಎಸ್‌ಎಆರ್ ದಾಖಲಿಸಿರುವ ಕೇರಳವು 14ರಿಂದ 17 ವರ್ಷಗಳ ವಯೋಗುಂಪಿನಲ್ಲಿ 11 ಮತ್ತು 12ನೇ ತರಗತಿಗಳ ಪದವಿಪೂರ್ವದ ಮಟ್ಟದಲ್ಲಿ ಶೇ.99.5ರಷ್ಟು ಹಾಜರಾತಿಯನ್ನು ದಾಖಲಿಸಿದೆ. ಈ ಎರಡೂ ವಿಭಾಗಗಳಲ್ಲಿ ರಾಷ್ಟ್ರೀಯ ಸರಾಸರಿ ಅನುಪಾತಗಳಾದ ಅನುಕ್ರಮವಾಗಿ ಶೇ.32.1ಮತ್ತು ಶೇ.77.5ನ್ನು ಅದು ಮೀರಿಸಿದೆ.

ಪೂರ್ವ ಪ್ರಾಥಮಿಕ ಮಟ್ಟದಲ್ಲಿ ಕೇರಳದ ನಂತರದ ಸ್ಥಾನಗಳಲ್ಲಿ ಪಂಜಾಬ್ (ಶೇ.57), ತೆಲಂಗಾಣ(ಶೇ.54), ತಮಿಳುನಾಡು (ಶೇ,54),ಹಿಮಾಚಲ ಪ್ರದೇಶ (ಶೇ,53) ಮತ್ತು ದಿಲ್ಲಿ (ಶೇ.50) ಗಳಿವೆ. ಪದವಿಪೂರ್ವ ಮಟ್ಟದಲ್ಲಿ ಹಿಮಾಚಲ ಪ್ರದೇಶ (ಶೇ.94.4),ಉತ್ತರಾಖಂಡ (ಶೇ.92.7),ತೆಲಂಗಾಣ (ಶೇ.92.1) ಮತ್ತು ತೆಲಂಗಾಣ (ಶೇ.92.1) ಕೇರಳದ ನಂತರದ ಸ್ಥಾನಗಳಲ್ಲಿವೆ.

 ಆದರೆ ಉತ್ತರ ಪ್ರದೇಶ ಇವೆರಡೂ ವಿಭಾಗಗಳಲ್ಲಿ ಅನುಕ್ರಮವಾಗಿ ಶೇ.22.7 ಮತ್ತು ಶೇ.64.5 ಎಎಸ್‌ಎಆರ್‌ನೊಂದಿಗೆ ಕನಿಷ್ಠ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News