ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸಲು ಅಗ್ರಮಾನ್ಯ ಆಟಗಾರರು ಸಜ್ಜು

Update: 2019-12-16 18:41 GMT

ಮೆಲ್ಬೋರ್ನ್, ಡಿ.16: ಜನವರಿಯಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆಯಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವುದಾಗಿ ವಿಶ್ವದ ಅಗ್ರಮಾನ್ಯ 50 ಪುರುಷ ಹಾಗೂ ಮಹಿಳಾ ಟೆನಿಸ್‌ಪಟುಗಳು ದೃಢಪಡಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಜನವರಿ 20ರಿಂದ ಫೆಬ್ರವರಿ 7 ರ ತನಕ ನಡೆಯಲಿರುವ 115ನೇ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ಅಗ್ರ ರ್ಯಾಂಕಿನ ರಫೆಲ್ ನಡಾಲ್ ಹಾಗೂ ಅಶ್ಲೆ ಬಾರ್ಟಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಆಟಗಾರರ ನೇತೃತ್ವವಹಿಸಲಿದ್ದಾರೆ.ಮಾಜಿ ನಂ.3ನೇ ಆಟಗಾರ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಕೂಡ ಗಾಯದ ಸಮಸ್ಯೆಯಿಂದಾಗಿ ಆರು ತಿಂಗಳ ವಿಶ್ರಾಂತಿಯ ಬಳಿಕ ಸಕ್ರಿಯ ಟೆನಿಸ್‌ಗೆ ವಾಪಸಾಗಲು ಸಜ್ಜಾಗಿದ್ದಾರೆ.

ಏಳು ಬಾರಿಯ ಪ್ರಶಸ್ತಿ ವಿಜೇತೆ ಸೆರೆನಾ ವಿಲಿಯಮ್ಸ್ ಕೂಡ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ಹೆಸರಲ್ಲಿರುವ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ.

 ಸೆರೆನಾ ವಿಲಿಯಮ್ಸ್ ಅವರ 39ರ ಹರೆಯದ ಸಹೋದರಿ ವೀನಸ್ ಇನ್ನೊಂದು ವರ್ಷ ಆಡಲು ತಯಾರಾಗಿದ್ದಾರೆ.ಅಗ್ರ-50ರಿಂದ ಹೊರಗುಳಿದಿರುವ ಆಟಗಾರ್ತಿಯೆಂದರೆ ವಿಕ್ಟೋರಿಯ ಅಝರೆಂಕಾ. ಎರಡು ಬಾರಿಯ ಚಾಂಪಿಯನ್ ಅಝರೆಂಕಾ ಅಸ್ಪಷ್ಟ ಕಾರಣಕ್ಕಾಗಿ ಟೂರ್ನಿಯಿಂದ ದೂರ ಉಳಿದಿದ್ದಾರೆ. ಕಳೆದ ಒಂದು ದಶಕದಲ್ಲಿ 2014ರಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕ ಪ್ರಶಸ್ತಿಯನ್ನು ಜಯಿಸಿದ್ದನ್ನು ಹೊರತುಪಡಿಸಿ ಪುರುಷರ ವಿಭಾಗದಲ್ಲಿ ನೊವಾಕ್ ಜೊಕೊವಿಕ್ ಹಾಗೂ ರೋಜರ್ ಫೆಡರರ್ ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದಾರೆ. ರಫೆಲ್ ನಡಾಲ್ 2009ರಲ್ಲಿ ಒಮ್ಮೆ ಮಾತ್ರ ಪ್ರಶಸ್ತಿ ಜಯಿಸಿದ್ದರು.

 ಹಾಲಿ ಚಾಂಪಿಯನ್ ಜೊಕೊವಿಕ್ 8ನೇ ಪ್ರಶಸ್ತಿಯ ಮೇಲೆ ಗುರಿ ಇಟ್ಟಿದ್ದಾರೆ. 38ರ ಹರೆಯದ ಫೆಡರರ್ 7ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಕಳೆದ 10 ವರ್ಷಗಳಲ್ಲಿ ಏಳು ಬೇರೆ ಬೇರೆ ಆಟಗಾರ್ತಿಯರು ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ. 2019ರಲ್ಲಿ ಜಪಾನ್‌ನ ನವೊಮಿ ಒಸಾಕಾ ಪ್ರಶಸ್ತಿ ಎತ್ತಿಹಿಡಿದು ಅಚ್ಚರಿಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News