ಪೌರತ್ವ ಕಾಯ್ದೆ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು: ನಲ್ಸರ್ ವಿವಿ ಉಪಕುಲಪತಿ ಫೈಝಾನ್ ಮುಸ್ತಫಾ

Update: 2019-12-17 06:01 GMT

 ಹೊಸದಿಲ್ಲಿ, ಡಿ.16: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಹಾಗೂ ಅತಾರ್ಕಿಕ ಮತ್ತು ಏಕಪಕ್ಷೀಯವಾದುದೆಂದು ಹೈದರಾಬಾದ್‌ನ ಕಾನೂನು ಅಧ್ಯಯನ ಹಾಗೂ ಸಂಶೋಧನೆ ಕುರಿತ ರಾಷ್ಟ್ರೀಯ ಅಕಾಡಮಿ(ನಲ್ಸರ್)ಯ ಉಪಕುಲಪತಿ ಫೈಝಾನ್ ಮುಸ್ತಫಾ ಆಂಗ್ಲ ಸುದ್ದಿಜಾಲತಾಣವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.

ಸಂದರ್ಶಕ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯು ಅಸಾಂವಿಧಾನಿಕವೆೆಂದು ಪ್ರತಿಪಕ್ಷಗಳು ಆಪಾದಿಸಿವೆ.

ಫೈಝಾನ್ ಮುಸ್ತಫಾ: ಸಿಎಎ ಸಂವಿಧಾನ ದೃಷ್ಟಿಕೋನಕ್ಕೆ ವಿರುದ್ಧವಾದುದಾಗಿದೆ. ಈ (ಧರ್ಮದ ಆಧಾರದಲ್ಲಿ) ವರ್ಗೀಕರಣವು ಅತಾರ್ಕಿಕವಾದುದು. ಯಾಕೆಂದರೆ ಮೊದಲನೆಯ ದಾಗಿ, ಈ ಕಾಯ್ದೆಯು ನೆರೆಹೊರೆಯ ಎಲ್ಲಾ ದೇಶಗಳನ್ನು ತನ್ನ ವ್ಯಾಪ್ತಿಗೆ ಒಳಪಡಿಸಿಲ್ಲ. ಎರಡನೆಯದಾಗಿ, ಇದು ದಮನ ಕ್ಕೊಳಗಾದ ಎಲ್ಲಾ ಅಲ್ಪಸಂಖ್ಯಾತರನ್ನು ಒಳಗೊಳ್ಳುವುದಿಲ್ಲ. ಸಿಎಎ, ತಾರ್ಕಿಕವಾದ ವರ್ಗೀಕರಣವನ್ನು ಆಧರಿಸಿಲ್ಲ ಅಥವಾ ಯಾವುದೇ ವೈಚಾರಿಕವಾದ ಗುರಿಯನ್ನು ಹೊಂದಿಲ್ಲ ಅಥವಾ ಕೇವಲ ಸಾಧನೆಯ ಗುರಿ ಯನ್ನು ಹೊಂದಿಲ್ಲ. ಮೂರನೆಯದಾಗಿ ಇದು ಏಕಪಕ್ಷೀಯವಾದುದು.

ಸಂದರ್ಶಕ: ಆದರೆ ಸಂವಿಧಾನದ 14ನೇ ವಿಧಿಯುವರ್ಗೀ ಕರಣಕ್ಕೆ ಅವಕಾಶ ನೀಡಿದೆಯೆಂದು ಬಿಜೆಪಿ ಹೇಳುತ್ತಿದೆ?

ಫೈಝಾನ್: ಅವರು ಹೇಳಿರುವುದು ಸರಿಯೇ ಆಗಿದೆ. ಅದು ವರ್ಗೀಕರಣಕ್ಕೆ ಅನುಮತಿ ನೀಡಿದೆ. ಆದರೆ ವರ್ಗೀಕರಣವು ವೈಚಾರಿಕವಾದುದಾಗಿರಬೇಕು ಮತ್ತು ಗುರಿಯನ್ನು ಸಾಧಿಸುವುದಕ್ಕಾಗಿರಬೇಕು ಮತ್ತು ಅದು ಏಕಪಕ್ಷೀಯವಾಗಿರಕೂಡದು. ಈ ಮೂರು ಪರೀಕ್ಷೆಗಳಲ್ಲಿಯೂ ಅದು ತೇರ್ಗಡೆಯಾಗಬೇಕು. ಆದರೆ ನನ್ನ ಅಭಿಪ್ರಾಯದ ಪ್ರಕಾರ ಸಿಎಎ ಈ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿಲ್ಲ.

ಸಂದರ್ಶಕ: ಸಿಎಎ ಅನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಏನಾಗಲಿದೆ?

ಖಂಡಿತವಾಗಿಯೂ ಅದು ಪ್ರಶ್ನಿಸಲ್ಪಡಲಿದೆ. ಸಾಮಾನ್ಯವಾಗಿ ಅದನ್ನು ಸಾಂವಿಧಾನಿಕ ಪೀಠದ ಪ್ರಸ್ತಾವನೆಗೆ ಒಪ್ಪಿಸಲಾಗುತ್ತದೆ ಹಾಗೂ ಅದನ್ನು ಸಮರ್ಪಕವಾಗಿ ನಿರ್ಧರಿಸಲು ಸಾಧ್ಯವಾಗದು. ನನ್ನ ಅನಿಸಿಕೆಯ ಪ್ರಕಾರ ನ್ಯಾಯಾಲಯವು ದಿಟ್ಟ ನಿಲುವು ತೆಗೆದುಕೊಂಡು ಕಾಯ್ದೆಗೆ ತಡೆಯಾಜ್ಞೆ ನೀಡದೆ ಹೋದಲ್ಲಿ, ಅದು ಜಾರಿಗೆ ಬರಲಿದೆ.

ಸಂದರ್ಶಕ: ಸಿಎಎ ಹಾಗೂ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ) ಕುರಿತಾಗಿ ಜನರು ಹೊಂದಿರುವ ಆತಂಕಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಫೈಝಾನ್: ಒಂದು ವೇಳೆ ಸರಕಾರವು ಎನ್‌ಆರ್‌ಸಿಯನ್ನು ಜಾರಿಗೊಳಿಸುವುದಿಲ್ಲವೆಂದು ಘೋಷಿಸಿದಲ್ಲಿ, ಸಿಎಎ ಸ್ವಾಗತಾರ್ಹವಾಗಿದೆ. ಎನ್‌ಆರ್‌ಸಿಯಿಂದ ಜನರನ್ನು ಪ್ರತ್ಯೇಕಿಸಲಾಗುತ್ತದೆ. ಒಂದು ವೇಳೆ ಜನರು ದಾಖಲೆಗಳನ್ನು ಹೊಂದಿರದೆ ಇದ್ದುದಕ್ಕಾಗಿ ಅಥವಾ ದಾಖಲೆಗಳಲ್ಲಿ ನ್ಯೂನತೆಗಳಿದ್ದುದರಿಂದ ಶಿಕ್ಷೆಗೊಳಗಾದಲ್ಲಿ ನಾವು ವಿನಾಶದತ್ತ ಸಾಗುತ್ತೇವೆ ಎಂದಾಯಿತು. ಯಾಕೆಂದರೆ ಅನೇಕ ಮಂದಿ ಬಡ ಹಾಗೂ ಅನಕ್ಷರಸ್ಥ ಜನರ ಬಳಿ ದಾಖಲೆಗಳಿಲ್ಲ. ಇಂತಹ ಅನಗತ್ಯ ಹೆಜ್ಜೆಗಳನ್ನಿಡುವ ಮೂಲಕ ಅದರಲ್ಲೂ ನಮ್ಮ ಆರ್ಥಿಕತೆಯು ಕೆಟ್ಟ ದಾರಿಯಲ್ಲಿರುವಾಗ ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ.

ಸಂದರ್ಶಕ: ಸಿಎಎ ಬಗ್ಗೆ ಮುಸ್ಲಿಮರಿಗಿರುವ ಆತಂಕಗಳ ಬಗ್ಗೆ ನೀವೇನು ಹೇಳುವಿರಿ ?

ಫೈಝಾನ್ ಮುಸ್ತಫಾ: ಅವರ ಆತಂಕಗಳು ನೈಜವಾದುದು. ಸಿಎಎ ಕೆಟ್ಟದಲ್ಲದೆ ಇರಬಹುದು. ಆದರೆ ಎನ್‌ಆರ್‌ಸಿ ಜೊತೆ ಅದನ್ನು ಜಾರಿಗೊಳಿಸಿದಾಗ ಅದು ಮುಸ್ಲಿಮರಿಗೆ ಮಾತ್ರವಷ್ಟೇ ಅಲ್ಲ ಹಿಂದೂಗಳಿಗೂ ಅಪಾಯಕಾರಿಯಾಗಲಿದೆ. ಅಸ್ಸಾಮಿನಲ್ಲಿ ಆದಂತೆ ಬಡಹಿಂದೂಗಳಿಗೆ ಇದರಿಂದ ದುಷ್ಪರಿಣಾಮವಾಗಲಿದೆ.

ಅವರು (ಬಡಹಿಂದೂಗಳು) ಸಮಾನವಾಗಿ ಪ್ರತ್ಯೇಕಿಸಲ್ಪಡಲಿದ್ದಾರೆ, ಗುರಿಯಿಡಲ್ಪಡುವ ಹಾಗೂ ಅವರು ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ಅವರು ದಾಖಲೆಗಳಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ ಮತ್ತು ದಾಖಲೆಗಳನ್ನು ಪಡೆಯಲು ಲಂಚವನ್ನು ನೀಡಬೇಕಾಗುತ್ತದೆ ಮತ್ತು ದೇಶದ ಉತ್ಪಾದಕತೆ, ಜಿಡಿಪಿ ಬಾಧಿತವಾಗಲಿದೆ. ದಾಖಲೆಗಳ ಆಧಾರದಲ್ಲಿ ಪೌರತ್ವವನ್ನು ಸಾಬೀತುಪಡಿಸುವಂತೆ ಜನರನ್ನು ಕೇಳುವುದು ಹಾಗೂ ಯಾವುದೇ ಸಣ್ಣ ನ್ಯೂನತೆಯಿದ್ದರೂ ಅವರನ್ನು ಹೊರಗಿಡುವುದು ಅನ್ಯಾಯವಾದುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News