ನಮ್ಮದು ಪ್ರಜಾಪ್ರಭುತ್ವವಲ್ಲ ಎಂದು ಹೇಳುವ ಮಸೂದೆ ಅಂಗೀಕಾರಗೊಳ್ಳಲಿ: ಪರಿಣಿತಿ ಚೋಪ್ರಾ

Update: 2019-12-17 09:12 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸಿದ್ದ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈ ಕುರಿತಂತೆ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.

"ನಾಗರಿಕನೊಬ್ಬ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಪ್ರತಿ ಬಾರಿಯೂ ಹೀಗಾಗುವುದಾದರೆ, #ಸಿಎಬಿ ಮರೆತುಬಿಡಿ,  ನಮ್ಮ ದೇಶವನ್ನು ಇನ್ನು ಮುಂದೆ ಪ್ರಜಾಪ್ರಭುತ್ವ ಎಂದು ಕರೆಯಬಾರದೆಂಬ ಮಸೂದೆಯನ್ನು ಅನುಮೋದಿಸಬೇಕು. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮುಗ್ಧ ನಾಗರಿಕರ ಮೇಲೆ ಹಲ್ಲೆಗೈಯ್ಯುವುದು ಅಮಾನುಷ'' ಎಂದವರು ಟ್ವೀಟ್ ಮಾಡಿದ್ದಾರೆ.

ನಟ ರಾಜ್‍ ಕುಮಾರ್ ರಾವ್ ಕೂಡ ಜಾಮಿಯಾ ವಿದ್ಯಾರ್ಥಿಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ``ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯ ಯಾವುದೇ ಕೃತ್ಯವನ್ನೂ ಖಂಡಿಸುತ್ತೇನೆ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ,'' ಎಂದಿದ್ದಾರೆ.

ಹಾಲಿವುಡ್ ನಟ ಜಾನ್ ಕ್ಯೂಸೆಕ್ ಕೂಡ ವಿದ್ಯಾರ್ಥಿಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದರಲ್ಲದೆ ಘಟನೆಯ ವೀಡಿಯೋ ಪೋಸ್ಟ್ ಮಾಡಿ 'ಸಾಲಿಡಾರಿಟಿ' ಎಂದು ಬರೆದಿದ್ದಾರೆ. ಕ್ಯಾಲಿಫೋರ್ನಿಯಾದ ನಾಗರಿಕರು ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿರುವ ಫೋಟೋಗಳನ್ನೂ ಅವರು ಶೇರ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News