ಕಲ್ಯಾಣ ಹತ್ಯಾಕಾಂಡ

Update: 2019-12-19 18:58 GMT

ಬಸವಾದಿ ಶರಣರ ಪ್ರಯತ್ನದಿಂದಾಗಿ ಬಿಜ್ಜಳನ ಕಲ್ಯಾಣದಲ್ಲಿ ಶರಣಸಂಕುಲವೆಂಬ ಶರಣರ ಕಲ್ಯಾಣದ ನಿರ್ಮಾಣವಾಗಿತ್ತು. ಬಿಜ್ಜಳನ ಕಲ್ಯಾಣದ ಪ್ರಧಾನಿಯಾಗಿದ್ದ ಬಸವಣ್ಣನವರು ಶರಣಸಂಕುಲದ ಮಾರ್ಗದರ್ಶಕರೂ ಆಗಿದ್ದರು. ಈ ಶರಣಸಂಕುಲ ಒಂದು ವ್ಯವಸ್ಥಿಕ ಆಧುನಿಕ ಸಮಾಜವಾಗಿತ್ತು.

ಕಾಯಕ, ಪ್ರಸಾದ, ದಾಸೋಹ, ದಲಿತರು, ಮಹಿಳೆಯರು ಮೊದಲು ಮಾಡಿ ಎಲ್ಲ ಕಾಯಕಜೀವಿಗಳಿಗೆ ವಯಸ್ಕರ ಶಿಕ್ಷಣ, ಆತ್ಮಜ್ಞಾನದಿಂದ ಕೂಡಿದ ಇಷ್ಟಲಿಂಗ ಪೂಜೆ ಮತ್ತು ಲೋಕಜ್ಞಾನದಿಂದ ಕೂಡಿದ ಜಂಗಮಲಿಂಗ ‘ಪೂಜೆ’, ಸಾಮಾಜಿಕ ನ್ಯಾಯದ ಪರುಷಕಟ್ಟೆ, ಸಂಕುಲದಲ್ಲಿ ಕಷ್ಟಕ್ಕೊಳಗಾದವರಿಗೆ ಇದ್ದ ‘ಶಿವನಿಧಿ’ ಹೆಸರಿನ ಸಾಮೂಹಿಕ ನಿಧಿ, ಸಮೂಹ ನಾಯಕತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಭವ ಮಂಟಪ, ಅರಿವಿನ ಮನೆ, ಮಹಾಮನೆ, ತತ್ವಪ್ರಚಾರದ ಜಂಗಮರು ಮುಂತಾದವರಿಂದ ಕೂಡಿದ ಶರಣಸಂಕುಲವು ಲಿಂಗಭೇದ, ವರ್ಣಭೇದ, ಜಾತಿಭೇದ, ವರ್ಗಭೇದ ಮತ್ತು ಪ್ರದೇಶ ಭೇದಗಳಿಂದ ಮುಕ್ತವಾಗಿತ್ತು.

ವಚನ ಚಳವಳಿಯ ಈ ಇಡೀ ವ್ಯವಸ್ಥೆ ಭೇದಭಾವದ ಮನುವಾದಿ ವ್ಯವಸ್ಥೆಗೆ ಪರ್ಯಾಯ ವ್ಯವಸ್ಥೆಯಾಗಿತ್ತು. ಬಸವಾದಿ ಶರಣರು ವೈದಿಕ ವ್ಯವಸ್ಥೆಯ ಎಲ್ಲವನ್ನೂ ತಿರಸ್ಕರಿಸಿದ್ದರು. ವಿಧವೆಯ ಮರುಮದುವೆಯ ಮೂಲಕ ಸತಿಸಹಗಮನ ಪದ್ಧತಿಯನ್ನು ತಡೆದಿದ್ದರು. ಮೂಢನಂಬಿಕೆಗಳನ್ನು ಮತ್ತು ಅವೈಚಾರಿಕತೆಯಿಂದ ಕೂಡಿದ ಕರ್ಮಸಿದ್ಧಾಂತವನ್ನು ಅಲ್ಲಗಳೆದಿದ್ದರು. ವರ್ಣವ್ಯವಸ್ಥೆಯ ವಿರುದ್ಧ ಹೋರಾಡಿದ್ದರು. ಎಲ್ಲ ತಾರತಮ್ಯಗಳನ್ನು ನಿರ್ನಾಮ ಮಾಡುವ ಮೂಲಕ ಹೊಸ ಮಾನವೀಯ ವ್ಯವಸ್ಥೆಗೆ ಮಾದರಿಯಾಗಿತ್ತು ವಚನಚಳವಳಿಯ ಶರಣಸಂಕುಲ.

ಮನುವಾದಿ ವೈದಿಕ ವ್ಯವಸ್ಥೆಗೆ ಇದು ಸಂಪೂರ್ಣವಾಗಿ ವಿರುದ್ಧವಾಗಿತ್ತು. ಇಲ್ಲಿ ಅವರ ವೇದಾಗಮಗಳಿಗೆ ಮತ್ತು ಮನುಸ್ಮತಿಯಂಥ ಧರ್ಮಶಾಸ್ತ್ರಗಳಿಗೆ ಯಾವುದೇ ಬೆಲೆ ಇರಲಿಲ್ಲ. ‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನಭಾರನೆತ್ತುವೆ, ಆಗಮದ ಮೂಗ ಕೊಯಿವೆ’’ಎಂದು ಬಸವಣ್ಣನವರು ಹೇಳಿದ್ದಾರೆ. ಈ ಎಲ್ಲ ಶಾಸ್ತ್ರಗಳು ಬಹುಪಾಲು ಶೂದ್ರರನ್ನು ಮತ್ತು ಪಂಚಮರನ್ನು ಮಾನಸಿಕ ಗುಲಾಮಗಿರಿಗೆ ತಳ್ಳುವ ಅಸ್ತ್ರಗಳು ಎಂಬುದನ್ನು ಬಸವಾದಿ ಶರಣರು ಲಕ್ಷಾಂತರ ಕಾಯಕಜೀವಿಗಳಿಗೆ ಮನವರಿಕೆ ಮಾಡಿದರು.

‘‘ವೇದಂಗಳ ಹಿಂದೆ ಹರಿಯದಿರು

ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು

ಪುರಾಣಂಗಳ ಹಿಂದೆ ಬಳಸದಿರು, ಬಳಸದಿರು

ಆಗಮಂಗಳ ಹಿಂದೆ ತೊಳಲದಿರು, ತೊಳಲದಿರು

ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು

ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು.’’

ಎಂದು ಶರಣ ಆದಯ್ಯನವರು ಎಚ್ಚರಿಸಿದ್ದಾರೆ. ಪ್ರತಿಯೊಬ್ಬ ವಚನಕಾರ ಈ ರೀತಿಯ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.

ಕಾಯಕಜೀವಿಗಳು ಇಂಥ ವೈಚಾರಿಕ ವಾತಾವರಣದಲ್ಲಿ ಬೆಳೆದರು. ವೇದಾಗಮಗಳ ಶಬ್ದಜಾಲದಲ್ಲಿ ಸಿಗದೆ ಹೊಸ ಜೀವನವಿಧಾನವನ್ನು ಕಂಡುಕೊಂಡರು. ಈ ಭಾರೀ ಬದಲಾವಣೆಯಿಂದಾಗಿ ವೈದಿಕರು ಬೆಚ್ಚಿಬಿದ್ದರು. ಈ ವೈಚಾರಿಕತೆ ಮುಂದುವರಿದರೆ ತಮ್ಮ ಅಸ್ತಿತ್ವವೇ ಇಲ್ಲದಂತಾಗುವುದು ಎಂದು ಷಡ್ಯಂತ್ರ ಹೂಡಿದರು. ಲಿಂಗವಂತರಾದ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ನೆಪ ಮಾಡಿಕೊಂಡು ಇದು ಧರ್ಮವಿರೋಧಿ ವಿಲೋಮ ವಿವಾಹ ಎಂದು ಗುಲ್ಲೆಬ್ಬಿಸಿದರು. ಬಿಜ್ಜಳನ ತಲೆತಿರುಗಿಸಿ ಶರಣರ ಹತ್ಯಾಕಾಂಡಕ್ಕೆ ಕಾರಣರಾದರು. ಈಗ ಮತ್ತೆ ಶರಣರ ಕಲ್ಯಾಣವನ್ನು ಬದುಕಿಗೆ ಅಳವಡಿಸುವ ಕಾಲ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News