ಟೋಪಿ ಧರಿಸಿ ಕಲ್ಲುತೂರಾಟ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತ, ಸಹಚರರ ಬಂಧನ
ಮುರ್ಷಿದಾಬಾದ್: ರೈಲಿನ ಇಂಜಿನ್ ಒಂದಕ್ಕೆ ಕಲ್ಲೆಸೆಯುತ್ತಿದ್ದ ದುಷ್ಕರ್ಮಿಗಳನ್ನು ರಾಧಾಮಧಾಬ್ತಲ ಗ್ರಾಮಸ್ಥರು ಮುರ್ಷಿದಾಬಾದ್ ಪೊಲೀಸರಿಗೆ ಹಸ್ತಾಂತರಿಸಿದ್ದು, ಲುಂಗಿ ಹಾಗೂ ಕ್ಯಾಪ್ ಧರಿಸಿದ್ದ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತ ಮತ್ತಾತನ ಐದು ಮಂದಿ ಸಹವರ್ತಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳು ಸಿಯಲ್ದಾಹ್-ಲಾಲ್ಗೋಲ ಹಳಿಯಲ್ಲಿ ಸಂಚರಿಸುತ್ತಿದ್ದ ಪ್ರಾಯೋಗಿಕ ರೈಲು ಇಂಜಿನ್‍ಗೆ ಕಲ್ಲೆಸೆದಿದ್ದರು. ಆರೋಪಿಗಳ ಪೈಕಿ ಅಭಿಷೇಕ್ ಸರ್ಕಾರ್ (21) ಎಂಬಾತ ಬಿಜೆಪಿ ಕಾರ್ಯಕರ್ತನಾಗಿದ್ದಾನೆ.
ಆರೋಪಿಗಳು ರೈಲ್ವೆ ಹಳಿಯಲ್ಲಿ ಬಟ್ಟೆ ಬದಲಿಸುತ್ತಿದ್ದುದನ್ನು ಕಂಡು ಗ್ರಾಮಸ್ಥರು ಸಂಶಯಗೊಂಡಿದ್ದರು. ಸರ್ಕಾರ್ ಬಿಜೆಪಿ ಸದಸ್ಯನೆಂದು ಪಕ್ಷದ ಸ್ಥಳೀಯ ಮೂಲಗಳು ತಿಳಿಸಿದರೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಗೌರಿ ಶಂಕರ್ ಘೋಷ್ ಮಾತ್ರ ಆತ ಪಕ್ಷದ ಸದಸ್ಯನಲ್ಲ ಎಂದಿದ್ದಾರೆ.
ಹಿಂಸೆಗೆ ಒಂದು ನಿರ್ದಿಷ್ಟ ಸಮುದಾಯವನ್ನು ದೂರಲು ಬಿಜೆಪಿ ಸ್ಕಲ್ ಕ್ಯಾಪ್ ಖರೀದಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
``ಯಾರು ಪ್ರತಿಭಟಿಸುತ್ತಿದ್ದಾರೆಂಬುದನ್ನು ಅವರು ಧರಿಸಿದ ಬಟ್ಟೆಗಳಿಂದ ಗುರುತಿಸಬಹುದು'' ಎಂದು ಜಾರ್ಖಂಡ್ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಹೇಳಿದ್ದು ಕೂಡ ಉಲ್ಲೇಖನೀಯ.
ಯುಟ್ಯೂಬ್ ಚಾನೆಲ್ ಒಂದಕ್ಕೆ ನಡೆಸಲಾಗುತ್ತಿದ್ದ ವೀಡಿಯೋ ಚಿತ್ರೀಕರಣಕ್ಕಾಗಿ ತಾವು ಲುಂಗಿ ಹಾಗೂ ಸ್ಕಲ್ ಕ್ಯಾಪ್ ಧರಿಸಿದ್ದಾಗಿ ಬಂಧಿತರು ಹೇಳಿಕೊಂಡಿದ್ದರೂ, ಅವರು ಹೇಳಿದಂತಹ ಚಾನೆಲ್ ಯುಟ್ಯೂಬ್ ನಲ್ಲಿಲ್ಲ.